ಸೆಮಿಸ್ಟರ್ ಪದ್ಧತಿ ವಿರುದ್ಧ ಹೋರಾಡಿದವರಿಗೆ ಅಭಿನಂದನೆ
ಮೈಸೂರು: ಐಟಿಐ ತರಬೇತುದಾರರ ಹೋರಾಟವು ಮುಕ್ತಾಯದ ಹಂತಕ್ಕೆ ಬಂದಿರುವ ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಹೋರಾಟದಲ್ಲಿ ಭಾಗವಹಿಸಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲ ನೀಡಿದ ಎಲ್ಲರಿಗೂ ಐಟಿಐ ವಿದ್ಯಾರ್ಥಿಗಳ ಹೋರಾಟ ಸಮಿತಿ ಹಾಗೂ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ ಅಭಿನಂದನೆ ಸಲ್ಲಿಸಿದೆ.
ಸೆಮಿಸ್ಟರ್ ಪದ್ಧತಿಯನ್ನು ಜಾರಿಗೊಳಿಸುವುದರ ವಿರುದ್ಧ ರಾಜ್ಯಾದ್ಯಂತ ಭುಗಿಲೆದ್ದ ಹೋರಾಟವು ರಾಷ್ಟ್ರದ ಹಲವು ರಾಜ್ಯಗಳನ್ನು ತಲುಪಿತು. ಸತತ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದಿದೆ. ನಮ್ಮ ರಾಜ್ಯವಷ್ಟೇ ಅಲ್ಲದೆ, ಒರಿಸ್ಸಾ, ಬಿಹಾರ್, ದೆಹಲಿ, ಆಂಧ್ರಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸರಣಿ ಪ್ರತಿಭಟನೆಗಳು ನಡೆದವು. ಇದರಿಂದ ಅನುಕೂಲಕರ ಬೆಳವಣಿಗೆ ನಡೆದಿವೆ ಎಂದು ಎಐಡಿವೈಒ ಜಿಲ್ಲಾಧ್ಯಕ್ಷ ಚಂದ್ರಶೇಖರ ಮೇಟಿ ತಿಳಿಸಿದ್ದಾರೆ. ಚಳವಳಿಯಿಂದಾಗಿ ಪರೀಕ್ಷೆಗಳನ್ನು 20 ದಿವಸ ಮುಂದೂಡಲಾಗಿದೆ. ಥಿಯೇರಿ ಪರೀಕ್ಷೆಗಳ ನಂತರ ಪ್ರಾಕ್ಟಿಕಲ್ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗಳು ಫೆ.25ರಿಂದ ಆರಂಭವಾಗಲಿವೆ. ಜಾರಿಗೊಳಿಸಿದರೂ ಅದನ್ನು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗದಂತೆ ನೋಡಿಕೊಳ್ಳಲಾಗುವುದು ಎನ್ನುವ ಭರವಸೆ ಸಿಕ್ಕಿದೆ. ಪ್ರತಿ ವಿದ್ಯಾರ್ಥಿಗೆ ಶೇ.10 ಕೃಪಾಂಕ ನೀಡಿ, ಉತ್ತೀರ್ಣರಾಗಲು ಅನುಕೂಲ ಮಾಡಲಾಗಿದೆ. ಎಂಪ್ಲಾಯಬಿಲಿಟಿ ಸ್ಕಿಲ್ ವಿಷಯ ಕುರಿತಂತೆ 50 ಗಂಟೆ ಪಾಠ ನಡೆದಿಲ್ಲದ ಕಾರಣ ಪರೀಕ್ಷೆಯಿಂದ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಭರವಸೆ ಸಿಕ್ಕಿದೆ ಎಂದಿದ್ದಾರೆ.