ಸ್ವಾರ್ಥ ಬಿಟ್ಟು ಹಿಂದುಳಿದವರನ್ನು ಮೇಲೆತ್ತಲು ಯತ್ನಿಸಿ: ಸುಂದರ್
ಮೈಸೂರು: ಕೆಲವೇ ಕೆಲವು ಜಾತಿಗಳನ್ನು ಸೇರಿಸಿಕೊಂಡು ಸಮಾವೇಶಗಳನ್ನು ಮಾಡುವ ಮೂಲಕ ಅವಕಾಶ ದುರ್ಲಾಭ ಪಡೆಯುತ್ತಿರುವ ರಾಜಕಾರಣಿಗಳು ಸ್ವಾರ್ಥ ಬಿಟ್ಟು ನಿಜವಾಗಿಯೂ ಹಿಂದುಳಿದಿರುವ ಜನರನ್ನು ಮೇಲೆತ್ತುವ ಪ್ರಾಮಾಣಿಕ ಯತ್ನ ಮಾಡಬೇಕು ಎಂದು ಪ್ರಗತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಕಲ್ಲಂಬಾಳು ಸುಂದರ್ ಮನವಿ ಮಾಡಿದ್ದಾರೆ. ಹಿಂದುಳಿದ ವರ್ಗಗಳಲ್ಲಿ ಕುಂಬಾರ, ಮಡಿವಾಳ, ನಯನಕ್ಷತ್ರಿಯ ತೆಲಗುಶೆಟ್ಟಿ, ಉಪ್ಪಾರ, ವಿಶ್ವಕರ್ಮ, ದಾಸರು, ಬೇಡರು, ಗೊಲ್ಲರು, ದೇವಾಂಗ ಮತ್ತಿತರ ಹಲವಾರು ಬಡ ಸಮುದಾಯದವರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ. ಹಿಂದುಳಿದವರಲ್ಲಿನ ಬಹುಸಂಖ್ಯಾತರ ಜತೆ ಸೆಣಸಾಡಲು ಸಾಧ್ಯವಾಗದೆ ಮೂಲೆಗುಂಪಾಗುತ್ತಿದ್ದಾರೆ. ಇವರು ಕನಿಷ್ಠ ಗ್ರಾಪಂ ಸದಸ್ಯತ್ವ ಪಡೆಯಲು ಸಾಧ್ಯವಾಗುತ್ತಿಲ್ಲ. ಕೆಲವರ ಪಾಲಿಗೆ ಉನ್ನತ ಉದ್ಯೋಗಗಳಂತೆ ಮರೀಚಿಕೆಯಾಗಿದೆ. ಸರ್ಕಾರ ಮಾತ್ರ ಜನಾಂಗಗಳ ಧ್ವನಿಗೆ ಕಿವುಡನಂತೆ ವರ್ತಿಸುತ್ತಿದೆ. ಆದ್ದರಿಂದ ದುರ್ಬಲ ವರ್ಗದವರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಪ್ರಗತಿ ಹೋರಾಟ ಸಮಿತಿಯು ಮುಂದಿನ ತಿಂಗಳು ಧಾರವಾಡ ಹಾಗೂ ಬೆಂಗಳೂರಿನಲ್ಲಿ ಯುವ ಸಮಾವೇಶ ಹಮ್ಮಿಕೊಳ್ಳಲಿದ್ದು, ಹಿಂದುಳಿದ ವರ್ಗದಲ್ಲಿನ 180ಕ್ಕಿಂತ ಹೆಚ್ಚು ಜಾತಿ ಹಾಗೂ ಉಪಜಾತಿಗಳನ್ನು ಗುರುತಿಸಿ ಪ್ರತ್ಯೇಕ ಮೀಸಲಾತಿ ನೀಡುವುದು, ಗ್ರಾಪಂ ಸೇರಿದಂತೆ ಶಾಸನ ಸಭೆಗೆ ಅವಕಾಶ ವಂಚಿತರಿಗೆ ಸರ್ಕಾರವೇ ನಾಮನಿರ್ದೇಶನ ಮಾಡುವುದು, ತಾಲೂಕು ಕೇಂದ್ರಗಳಲ್ಲಿ ಶಿಕ್ಷಣ ಸಂಸ್ಥೆ ತೆರೆಯಲು ಭೂಮಿ ಮಂಜೂರು, ಸಮುದಾಯದವರ ವೃತ್ತಿ ಉಳಿಸಲು ನಿಗಮ ಮಂಡಳಿ ಸ್ಥಾಪಿಸುವುದು ಸೇರಿದಂತೆ ಅನೇಕ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.