ಇಂದು ವಿದ್ಯುತ್ ಪೂರೈಕೆ ವ್ಯತ್ಯಯ
ಮೈಸೂರು: ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ 11 ಕೆ.ವಿ. ಜೆ.ಸಿ. ಫೀಡರ್ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ. 7ರ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು. ಸಿದ್ದಾರ್ಥನಗರ, ಕೆ.ಸಿ. ಲೇಔಟ್, ಗಿರಿದರ್ಶಿನಿ ಬಡಾವಣೆ, ಆಲನಹಳ್ಳಿ ಬಡಾವಣೆ, ಲಲಿತಾಮಹಲ್ ರಸ್ತೆ, ಪೊಲೀಸ್ ಬಡಾವಣೆ 1ನೇ ಮತ್ತು 2ನೇ ಹಂತ ಹಾಗೂ ನಂದಿನಿ ಬಡಾವಣೆ ಜೆ.ಸಿ. ಬಡಾವಣೆ, ಲಲಿತಾದ್ರಿಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಆಕಸ್ಮಿಕ ಬೆಂಕಿ ತಗುಲಿ ಮಹಿಳೆ ಸಾವು
ಮೈಸೂರು: ಸೀಮೆಎಣ್ಣೆ ಸ್ಟೌವ್ ಹಚ್ಚುವಾಗ ಆಕಸ್ಮಿಕ ಬೆಂಕಿ ತಗುಲಿ ಸುಟ್ಟ ಗಾಯಗಳೊಂದಿಗೆ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ. ಜೆ.ಪಿ. ನಗರ ಬಳಿಯ ಮಹದೇವಪುರ ನಿವಾಸಿ ಹಾಗೂ ಜೆಸಿಬಿ ಆಪರೇಟರ್ ಪ್ರಜ್ವಲ್ ಎಂಬವರ ಪತ್ನಿ ಅಂಬಿಕಾ (24) ಮೃತಪಟ್ಟರು. ಇವರಿಗೆ ವಿವಾಹವಾಗಿ 4 ವರ್ಷಗಳಾಗಿದ್ದು, ಮಕ್ಕಳು ಇರಲಿಲ್ಲ. ಭಾನುವಾರ ಅಡುಗೆ ಮಾಡುವ ಸಂದರ್ಭದಲ್ಲಿ ಅಂಬಿಕಾ ಅವರಿಗೆ ಬೆಂಕಿ ತಗುಲಿ ಗಾಯಗೊಂಡಿದ್ದರು. ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆ.ಸಿ. ಬಡಾವಣೆಯಲ್ಲಿ ಸರ ಅಪಹರಣ
ಮೈಸೂರು: ಅಂಗಡಿಗೆ ಹೋಗುತ್ತಿದ್ದ ಮಹಿಳೆಯ ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಇಬ್ಬರು ಎಗರಿಸಿಕೊಂಡು ಹೋಗಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಜೆ.ಸಿ. ಬಡಾವಣೆ ನಿವಾಸಿ ಮೀನಾಕ್ಷಿ (50) ಎಂಬವರೇ 30 ಗ್ರಾಂ. ಚಿನ್ನದ ಸರ ಕಳೆದುಕೊಂಡವರು. ಇವರು ಜೆ.ಸಿ. ಬಡಾವಣೆಯಲ್ಲಿ ಟೀ ಅಂಗಡಿ ನಡೆಸುತ್ತಿದ್ದಾರೆ. ಸಂಜೆ 4.30 ವೇಳೆಯಲ್ಲಿ ಅಂಗಡಿಯತ್ತ ಹೋಗುತ್ತಿದ್ದಾಗ ಹಿಂದಿನಿಂದ ಬಂದ ವ್ಯಕ್ತಿ ಸರ ಕಿತ್ತುಕೊಂಡು, ಸಮೀಪದಲ್ಲೇ ಬೈಕಿನಲ್ಲಿದ್ದ ಮತ್ತೊಬ್ಬನೊಂದಿಗೆ ಪರಾರಿಯಾಗಿದ್ದಾನೆ. ಈ ಸಂಬಂಧ ನಜರ್ಬಾದ್ ಠಾಣೆ ಇನ್ಸ್ಪೆಕ್ಟರ್ ಕೆ.ಸಿ. ಪೂವಯ್ಯ, ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು, ಇಬ್ಬರು ಅನುಮಾನಸ್ಪದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಅಂತರ್ಜಲ ಜನಜಾಗೃತಿ ಶಿಬಿರ
ಮೈಸೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಫೆ. 7 ಮತ್ತು 14 ರಂದು ಅಂತರ್ಜಲ ಸದ್ಬಳಕೆ, ಸಂರಕ್ಷಣೆ ಮತ್ತು ಮಳೆ ನೀರಿನ ಕೊಯ್ಲು ಬಗ್ಗೆ ಒಂದು ದಿನದ ಅಂತರ್ಜಲ ಜನಜಾಗೃತಿ ಶಿಬಿರವನ್ನು ಏರ್ಪಡಿಸಿದೆ. ಫೆ. 7 ರಂದು ಟಿ. ನರಸೀಪುರ ಪಟ್ಟಣದಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಹಾಗೂ ಫೆ. 14 ರಂದು ಜಿಪಂ ಸಭಾಂಗಣದಲ್ಲಿ ಸದಸ್ಯರಿಗೆ, ಅಧಿಕಾರಿಗಳಿಗೆ ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ.
ಮಧುಮೇಹಿ ಯುವಕರಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ ಹೇಗೆ ಸಾಧ್ಯ?
ಮೈಸೂರು: ದೇಶದ ಯುವ ಜನಾಂಗದ ಪೈಕಿ ಶೇ. 18 ರಷ್ಟು ಮಂದಿ ಮಧುಮೇಹದಿಂದ ಬಳಲುವಾಗ ಬಲಿಷ್ಠ ಸಮಾಜ ನಿರ್ಮಾಣ ಹೇಗೆ ಸಾಧ್ಯ ಎಂದು ವೈದ್ಯ ಡಾ.ವಿ. ಲಕ್ಷ್ಮೀನಾರಾಯಣ ಹೇಳಿದರು.
ಜೆ.ಪಿ. ನಗರದ ಪುಟ್ಟರಾಜ ಗವಾಯಿ ಮೈದಾನದಲ್ಲಿ ನೆಹರು ಯುವ ಕೇಂದ್ರ ಮತ್ತು ಅಭ್ಯುದಯ ಮಹಿಳಾ ಸಮಾಜ ಸಂಯುಕ್ತವಾಗಿ ಆಯೋಜಿಸಿದ್ದ ಯುವ ಮುಂದಾಳತ್ವ ಮತ್ತು ಸಮುದಾಯ ಅಭಿವೃದ್ಧಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ 2020ರ ವೇಳೆಗೆ ಭಾರತ ಪರಾವಲಂಬಿ ಆಗುತ್ತದೆ. ಈಗಲೆ ನಮ್ಮ ಯುವಕರು ಮಧುಮೇಹ, ಸ್ಥೂಲದೇಹ ಮತ್ತು ವಿವಿಧ ರೋಗದಿಂದ ಬಳಲುತ್ತಿದ್ದಾರೆ. ಇನ್ನು ಪರಾವಲಂಬಿ ಆಗದೆ ಬೇರೆ ದಾರಿ ಇಲ್ಲ. ದೇಶದ ಜನಸಂಖ್ಯೆಯಲ್ಲಿ 85 ಕೋಟಿ ಯುವಕರಿದ್ದಾರೆ. ಈ ಪೈಕಿ ಶೇ. 18ರಷ್ಟು ಯುವಕರು ಮಧುಮೇಹದಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಬಲಿಷ್ಠ ರಾಷ್ಟ್ರ ನಿರ್ಮಾಣ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಎ. ರಾಜು, ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್, ಪ್ರೇಮಾ ಕಾಳೇಶ್ವರ ಇದ್ದರು.
ಆಸ್ಪತ್ರೆ ತ್ಯಾಜ್ಯ ನಿರ್ವಹಣೆ ಕುರಿತ ಕಾರ್ಯಾಗಾರ
ಮೈಸೂರು: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗದ ವತಿಯಿಂದ ಆಸ್ಪತ್ರೆ ತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತು ಜಾಗೃತಿ ದಾಸೋಹ ಕಾರ್ಯಕ್ರಮ ನೆರವೇರಿತು. ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕ ಹಾಗೂ ಡೀನ್ ಡಾ.ಎಚ್. ಹನುಮಂತಪ್ಪ ಮಾತನಾಡಿ, ಆಸ್ಪತ್ರೆ ತ್ಯಾಜ್ಯವಸ್ತುಗಳ ಸರಿಯಾದ ನಿರ್ವಹಣೆಯ ಮಹತ್ವ ವಿವರಿಸಿದರು. ಸಮುದಾಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮುದಾಸಿರ್ ಅಜೀಜ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಕೆ.ಆರ್. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಬಿ.ಜಿ. ಸಾಗರ್ ಮತ್ತು ಚೆಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಬಿ. ಕೃಷ್ಣಮೂರ್ತಿ ಆಸ್ಪತ್ರೆ ತ್ಯಾಜ್ಯವಸ್ತುಗಳ ಸರಿಯಾದ ನಿರ್ವಹಣೆಗೆ ತಾವು ಬದ್ದರಿರುವುದಾಗಿ ತಿಳಿಸಿದರು. ಸಂಸ್ಥೆಯ ಅಂಗ ಸಂಸ್ಥೆಗಳಾದ ಕೆ.ಆರ್. ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ ಮತ್ತು ಪಿಕೆಟಿಬಿ ಮತ್ತು ಸಿಡಿ ಆಸ್ಪತ್ರೆಗಳ ಎಲ್ಲ ಶುಶ್ರೂಷಕ ವರ್ಗದವರು, ಡಿ. ಗ್ರೂಪ್ ನೌಕರರು, ಪ್ರಯೋಗಶಾಲಾ ತಂತ್ರಜ್ಞರು ಮತ್ತು ಸ್ವಚ್:್ತಾ ಸಿಬ್ಬಂದಿಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಲ್ಯಾಬ್ ಟೆಕ್ನಿಷಿಯನ್ ವಿದ್ಯಾರ್ಥಿಗಳು ಸೇರಿದಂತೆ ನೌಕರರು ಕಾರ್ಯಕ್ರಮದ ಉಪಯೋಗ ಪಡೆದುಕೊಂಡರು.
ಡಿಸಿ ಕಚೇರಿ ಎದುರು ಪ್ರತಿಭಟನೆ
ಮೈಸೂರು: ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.7 ರಂದು ರೈಲು ತಡೆ ನಡೆಸಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ಗುರುಪಾದಪ್ಪ ತಿಳಿಸಿದ್ದಾರೆ.
ಉಪ ನೋಂದಣಾಧಿಕಾರಿಗಳ ನಾಲ್ಕು ಕಚೇರಿಗಳನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿ ಕರ್ನಾಠಕ ಸೇವನಾ ಪಡೆ ಫೆ.7 ರಂದು ಮಧ್ಯಾಹ್ನ 12ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಿದೆ ಎಂದು ಅಧ್ಯಕ್ಷ ತೇಜೇಶ ಲೋಕೇಶ್ಗೌಡ ತಿಳಿಸಿದ್ದಾರೆ.
ಕ್ಯಾನ್ಸರ್ ಅರಿವು ಕಾರ್ಯಕ್ರಮ
ಮೈಸೂರು: ಭಾರತ್ ಆಸ್ಪತ್ರೆ ಮತ್ತು ಗಂಥಿ ಸಂಸ್ಥೆಯು ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಕ್ಯಾನ್ಸರ್ ಅರಿವಿನ ಸ್ಪರ್ಧೆಯನ್ನು ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೆ ಬಿ.ಎಂ. ಹ್ಯಾಬಿಟ್ಯಾಟ್ ಮಾಲ್ ಮತ್ತು ಮಾಲ್ ಆಫ್ ಮೈಸೂರಿನಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಅಧೀಕ್ಷಕರು ಮತ್ತು ಮುಖ್ಯ ವಿಕಿರಣ ಚಿಕಿತ್ಸಾ ತಜ್ಞ ಡಾ.ಎಂ.ಎಸ್. ವಿಶ್ವೇಶ್ವರ, ಹಿರಿಯ ವಿಕಿರಣ ಚಿಕಿತ್ಸಾ ತಜ್ಞ ಡಾ.ವೈ.ಎಸ್. ಮಾಧವಿ, ಕ್ಯಾನ್ಸರ್ ರೋಗ ಶಸ್ತ್ರತಜ್ಞ ಡಾ.ಬಿ. ಕವಿತಾ, ಪ್ರಧಾನ ವ್ಯವಸ್ಥಾಪಕ ಕೆ.ಪಿ. ಶಿವಪ್ರಸಾದ್, ಭಾರತ್ ಆಸ್ಪತ್ರೆ ಮತ್ತು ಗ್ರಂಥಿ ಸಂಸ್ಥೆಯ ಕೇಂದ್ರ ವ್ಯವಸ್ಥಾಪಕ ಎನ್. ಲೋಕೇಶ್ ಭಾಗವಹಿಸಿದ್ದರು.
ಸಹಕಾರ ಸಂಘದ ಅಧ್ಯಕ್ಷರಾಗಿ ದುಂಡಪ್ಪ ಅವಿರೋಧ ಆಯ್ಕೆ
ಟಿ. ನರಸೀಪುರ: ತಾಲೂಕಿನ ನೆರಗ್ಯಾತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ದುಂಡಪ್ಪ, ಉಪಾಧ್ಯಕ್ಷೆಯಾಗಿ ಗಂಗಮ್ಮ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ. ಮಂಜುನಾಥ್ ಪ್ರಕಟಿಸಿದರು.
ಅಧ್ಯಕ್ಷ ದುಂಡಪ್ಪ ಮಾತನಾಡಿ, ರೈತರಿಗೆ ಸರ್ಕಾರದ ಸಹಾಯ ಧನವನ್ನು ಸಕಾಲದಲ್ಲಿ ತಲುಪಿಸಿ, ಮೈಮುಲ್ನ ನೆರವು ಪಡೆದುಕೊಂಡು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಅಭಿವೃದ್ಧಿಪಡಿಸಲು ನಿಷ್ಠೆಯಿಂದ ದುಡಿಯುತ್ತೇನೆ ಎಂದರು. ಸಂಘದ ಕಾರ್ಯದರ್ಶಿ ಶೋಭ ಜಯಶೇಖರಪ್ಪ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪದಾಧಿಕಾರಿಗಳಾದ ಎನ್.ವಿ. ಕುಮಾರ, ಎನ್.ಎಸ್. ಗುರುಪಾದಸ್ವಾಮಿ, ಎನ್. ಗುರುಸ್ವಾಮಿ, ಶಿವನಂಜಮ್ಮ, ನಾಗರಾಜಪ್ಪ, ನಾಗಪ್ಪ, ಪುಟ್ಟಯ್ಯ, ಎನ್.ಎಂ. ಪರಶಿವಮೂರ್ತಿ, ನಂಜುಂಡಸ್ವಾಮಿ, ಕೊಳತ್ತೂರು ಗ್ರಾಪಂ ಮಾಜಿ ಅಧ್ಯಕ್ಷ ಡಿ. ಮಂಟೇಸ್ವಾಮಿ, ಮಾಜಿ ಉಪಾಧ್ಯಕ್ಷ ಕೆ. ಶಂಕರ, ಅಂಗಡಿ ಎಂ. ಪುಟ್ಟಸ್ವಾಮಿ ಇದ್ದರು.
ಮತಾಂತರ: ಶಾಂತಿ ಸಭೆ
ಮೈಸೂರು: ಆಮಿಷ ಒಡ್ಡಿ ಮತಾಂತರಿಸಿರುವ ಘಟನೆ ಜ್ಯೋತಿನಗರ ಎಂಸಿಸಿ ಕಾಲೋನಿಯಲ್ಲಿ ನಡೆದಿದೆ. ಎಂಸಿಸಿ ಕಾಲೋನಿಯ ನಾಲ್ಕು ಕುಟುಂಬಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಕೆಲವರು ಆಮಿಷ ಒಡ್ಡಿ ಮತಾಂತರಿಸಿದ್ದ ಸುದ್ದಿ ಬುಧವಾರ ರಾತ್ರಿಯಿಂದ ಕಾಲೋನಿಯಲ್ಲಿ ವ್ಯಾಪಿಸಿದೆ. ಅಲ್ಲದೆ ಮತ್ತೆ ಹದಿನಾರು ಕುಟುಂಬಗಳ ಮತಾಂತರಕ್ಕೆ ಯತ್ನಿಸಿದ ಸುದ್ದಿ ತಿಳಿದ ಕೂಡಲೆ ಕಾಲೋನಿಯ ಮಾರ ಮತ್ತು ಮುಂತಾದವರು ಸ್ಥಳೀಯ ಮುಖಂಡರಿಗೆ ಮಾಹಿತಿ ನೀಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಮೇಯರ್ ಸಂದೇಶ್ಸ್ವಾಮಿ, ನಜರ್ಬಾದ್ ಇನ್ಸ್ಪೆಕ್ಟರ್ ಪೂವಯ್ಯ ಅವರು ಶಾಂತಿ ಸಭೆ ನಡೆಸಿ, ಯಾರೂ ಆಮಿಷಕ್ಕೆ ಒಳಗಾಗಿ ಮತಾಂತರ ಆಗಬಾರದು. ಅದು ಕಾನೂನು ಬಾಹಿರ. ಅಲ್ಲದೆ ಎಲ್ಲಾ ಜಾತಿ, ಧರ್ಮ ಒಂದೆ. ಆದ್ದರಿಂದ ಮತಾಂತರಗೊಳ್ಳಬಾರದು ಎಂದು ಸಾರ್ವಜನಿಕರಲ್ಲಿ ಮನವರಿಕೆ ಮಾಡಿಕೊಡಲಾಗಿದೆ.ಬಳಿಕ ಕಾಲೋನಿಯ ಮುಖಂಡರನ್ನು ಸೇರಿಸಿ ಅಲ್ಲಿನ ಪಟ್ಟಲದಮ್ಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಲಾಯಿತು.
ಇಂದು ಪ್ರತಿಭಟನೆ
ಮೈಸೂರು: ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.7 ರಂದು ರೈಲು ತಡೆ ನಡೆಸಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ಪ್ರದಾನ ಕಾರ್ಯದರ್ಶಿ ಎಸ್. ಗುರುಪಾದಪ್ಪ ತಿಳಿಸಿದ್ದಾರೆ.
ವಿಷ ಸೇವಿಸಿದ್ದ ಪತಿ ಸಾವು, ಪತ್ನಿ ಅಸ್ವಸ್ಥ
ಮೈಸೂರು: ಬೆಂಗಳೂರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬರು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪತಿಯೊಂದಿಗೆ ವಿಷ ಸೇವಿಸಿದ್ದ ಪತ್ನಿ ಅಸ್ವಸ್ಥಗೊಂಡಿದ್ದು, ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನ ವಿಜಯನಗರ ನಿವಾಸಿ ಶಿವಣ್ಣ ಎಂಬುವವರ ಪುತ್ರ ಸಿದ್ದಲಿಂಗಸ್ವಾಮಿ (35) ಆತ್ಮಹತ್ಯೆ ಮಾಡಿಕೊಂಡವರು. ಇವರು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನೆಲೆಸಿ ಆಟೋ ಚಾಲನೆ ಮಾಡಿಕೊಂಡಿದ್ದರು. ಸಿದ್ದಲಿಂಗಸ್ವಾಮಿ ಮತ್ತು ಪತ್ನಿ ಮಂಜುಳಾ ಅವರಿಗೆ ಇಬ್ಬರು ಮಕ್ಕಳಿದ್ದರು. ಆದರೆ, ಅನಾರೋಗ್ಯದಿಂದಾಗಿ ಹರ್ಷಿಣಿ ಮೃತಪಟ್ಟಿದ್ದ. ಪುತ್ರಿ ಸಾವಿನಿಂದ ಮನನೊಂದಿದ್ದ ದಂಪತಿ ಜ.28 ರಂದು ಬೆಂಗಳೂರಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಸಂಬಂಧಿಕರು ಮೈಸೂರಿಗೆ ಕರೆತಂದು ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾರೆ.ಸಿದ್ಗಲಿಂಗಸ್ವಾಮಿ ಮೃತಪಟ್ಟಿದ್ದು, ಪತ್ನಿ ಮಂಜುಳ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರಸು ಕಾಲೇಜು ತಂಡಗಳ ಆಯ್ಕೆ
ಮೈಸೂರು: ಕೆ.ಆರ್. ನಗರದಲ್ಲಿ ನಡೆದ ಮೈಸೂರು ವಿವಿಯ ಅಂತರ ವಲಯ ಮಟ್ಟದ ಮಹಿಳೆಯರ ವಿಭಾಗದ ಷಟಲ್ ಬ್ಯಾಡ್ಮಿಂಟನ್ ಹಾಗೂ ಟೆನಿಕಾಯ್ಟ್ನಲ್ಲಿ ಪಟ್ಟಣದ ಡಿ. ದೇವರಾಜ ಅರಸ್ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿಯರ ತಂಡ ದ್ವಿತಿಯ ಸ್ಥಾನ ಪಡೆದು ವಲಯ ಮಟ್ಟಕ್ಕೆ ಆಯ್ಕೆಯಾಗಿದೆ.
ಎರಡು ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಕೆ.ಆರ್. ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜು ತಂಡ 2-1 ಅಂತರದಲ್ಲಿ ಗೆದ್ದು ಕೆ.ಆರ್. ನಗರ ತಂಡ ಪ್ರಥಮ, ಹುಣಸೂರು ಡಿ.ಡಿ. ಅರಸ್ ತಂಡ ದ್ವಿತಿಯ ಸ್ಥಾನ ಪಡೆದಿದೆ.
ತಂಡದಲ್ಲಿ ಕ್ರೀಡಾ ಪಟುಗಳಾದ ಎಚ್.ಎಸ್. ಸುಪ್ರಿತಾ. ವಿ. ಸುಕನ್ಯ, ಅಪೂರ್ವ. ಗೀತಾ, ದಿವ್ಯ, ಸಿಂಧೂ ಇದ್ದಾರೆ ಎಂದು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಬಿ.ವಿ. ಗಣೇಶ್ ತಿಳಿಸಿದ್ದಾರೆ.