ವೈದ್ಯರ ಬಳಿ ಹೋಗಲು ಹಿಂಜರಿಕೆ ಬೇಡ: ಶಾಂಭವಿ
ಮೈಸೂರು: ಮಾನಸಿಕ ತೊಂದರೆಗಳಿಗೆ ವೈದ್ಯರ ಬಳಿ ಹೋಗಲು ಹಿಂಜರಿಯಬಾರದು, ಸಕಾಲಿಕ ಸಮಾಲೋಚನೆ ಅನೇಕ ತೊಂದರೆಗಳನ್ನು ಪರಿಹರಿಸುತ್ತದೆ ಎಂದು ಹಿರಿಯ ನಾಗರಿಕರ ಮಂಡಳಿಯ ಆಪ್ತ ಸಲಹೆಗಾರ್ತಿ ಎಂ.ಆರ್. ಶಾಂಭವಿ ಹೇಳಿದರು. ಜಯಲಕ್ಷ್ಮೀಪುರಂ ಹಿರಿಯ ನಾಗರಿಕರ ಮಂಡಳಿಯಲ್ಲಿ ನಡೆದ ಹಿರಿಯ ನಾಗರಿಕರ ಮಾನಸಿಕ ಸಮಸ್ಯೆಗಳು ಮತ್ತು ಪರಿಹಾರ ಎಂಬ ವಿಷಯದ ಬಗ್ಗೆ ಉಪನ್ಯಾಸದಲ್ಲಿ ಮಾತನಾಡಿದ ಅವರು, ಹೆದರಿಕೆ, ಸ್ವಸಾಮರ್ಥ್ಯದಲ್ಲಿ ಅಪನಂಬಿಕೆ, ಜ್ಞಾಪಕದಲ್ಲಿ ಇಳಿಮುಖ, ಲೈಂಗಿಕ ನಿರಾಸಕ್ತಿ ಇವು ಹಿರಿಯ ನಾಗರಿಕರಲ್ಲಿ ಕಂಡು ಬರುವ ಮಾನಸಿಕ ತೊಂದರೆಗಳು, ಒಳ್ಳೆಯ ಹವ್ಯಾಸಗಳಲ್ಲಿ ತೊಡಗುವುದರಿಂದ ಮಾನಸಿಕ ತೊಂದರೆಯಿಂದ ಹೊರಬರಬಹುದು ಎಂದು ತಿಳಿಸಿದರು.
ಮಂಡಳಿಯ ಅಧ್ಯಕ್ಷ ಡಾ.ಎಚ್.ಎಂ. ನಾಗರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಅವಿಭಕ್ತ ಕುಟುಂಬದ ಪರಿಕಲ್ಪನೆಯೇ ಮಾಯವಾಗುತ್ತಿದೆ. ಮಕ್ಕಳು, ಮೊಮ್ಮಕಳು ಯಾವುದೋ ದೇಶದಲ್ಲಿ ಬದುಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಯೋವೃದ್ಧ ದಂಪತಿಗಳು ಏಕಾಂತ ಜೀವನಕ್ಕೆ ಮಾರು ಹೋಗಬೇಕಾಗಿದೆ. ಕುಟುಂಬದಲ್ಲಿ ಪ್ರೀತಿ ವಿಶ್ವಾಸ ಮಾಯವಾಗುತ್ತಿದೆ. ಆದ್ದರಿಂದ ಸರ್ಕಾರ ವೃದ್ಧರಿಗೆ ರಕ್ಷಣೆ ಒದಗಿಸಬೇಕು, ಆರ್ಥಿಕವಾಗಿ ತೊಂದರೆಯಲ್ಲಿರುವ ಹಿರಿಯ ನಾಗರಿಕರಿಗೆ ರಕ್ಷಣೆಯ ಜೊತೆಗೆ ವೈದ್ಯಕೀಯ ಸೌಲಭ್ಯ ಒದಗಿಸಬೇಕೆಂದು ಹೇಳಿದರು. ರೇಖಾ ಪ್ರಕಾಶ್ ಪ್ರಾರ್ಥಿಸಿದರು. ಎಂ.ಎಸ್. ರುದ್ರಪ್ಪ ಸ್ವಾಗತಿಸಿದರು. ಪಾಂಡರಂಗಶೆಟ್ಟಿ ವಂದಿಸಿದರು.