ಶಿಕ್ಷಕರ ತರಬೇತಿ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಲಿ
ಮೈಸೂರು: ಶಿಕ್ಷಕರ ಸೇವಾ ನಿರತ ತರಬೇತಿಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪೂರಕವಾಗಲಿ ಎಂದು ಜಿಪಂ ಸಿಇಒ ಪಿ.ಎ. ಗೋಪಾಲ್ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಿಂದ ನಗರದ ಧ್ವನ್ಯಾಲೋಕದಲ್ಲಿ ಗುರುವಾರ ಏರ್ಪಡಿಸಿದ್ದ ಶೈಕ್ಷಣಿಕ ನಾಯಕತ್ವದ ಅಭಿವೃದ್ಧಿ ಕುರಿತಂತೆ ವರದಿ ಮಂಡನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ವಿವಿಧ ಸಂಘಟನೆಗಳು ಮಗುವಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ತಮ್ಮ ಪಾತ್ರವನ್ನು ವಿಶ್ಲೇಷಿಸಿ ಆತ್ಮಾವಲೋಕನ ಮಾಡಿಕೊಂಡು ಶಿಕ್ಷಕರು ನಗರಮುಖಿಯಾಗದೆ ತಾವಿರುವ ಸ್ಥಳಗಳಲ್ಲಿ ಉತ್ತಮ ಶಿಕ್ಷಣ ಕೊಡಲು ಪ್ರಯತ್ನಿಸಬೇಕು ಎಂದರು.
ಶಿಕ್ಷಕ ಕೋಚನಹಳ್ಳಿ ಮಂಜುನಾಥ್ ಮಂಡಿಸಿರುವ ಪ್ರಕಲ್ಪ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ. ಈ ಸಾಮಾಜಿಕ ವ್ಯವಸ್ಥೆಯಲ್ಲಿ ಉನ್ನತ ಶಿಕ್ಷಣಕ್ಕೆ ಇರುವ ಪ್ರಾಧ್ಯಾನ್ಯತೆ ಪ್ರಾಥಮಿಕ ಶಿಕ್ಷಣಕ್ಕೂ ನೀಡುವುದು ಇಂದಿನ ಅಗತ್ಯವಾಗಿದೆ. ಮಗುವಿನ ಸ್ಥಿತಿಗತಿ ಅರ್ಥೈಸಿಕೊಳ್ಳಲು ತರಬೇತಿ ಜತೆಗೆ, ಅಂತ:ಕರಣ ಮತ್ತು ಬದ್ಧತೆ ಬೇಕಾಗುತ್ತದೆ ಎಂದರು.
ವಿ- ಲೀಡ್ ಸಂಸ್ಥೆಯ ಮುಖ್ಯಸ್ಥ ಡಾ.ಆರ್. ಬಾಲಸುಬ್ರಹ್ಮಣ್ಯಂ ಮಾತನಾಡಿ, ಸರ್ಕಾರ ಮಗುವಿನ ಶಿಕ್ಷಣಕ್ಕೆ ನೀಡುವ ಹಣವನ್ನು ಅವರ ತಂದೆ ತಾಯಿಗಳಿಗೆ ನೀಡಿದರೆ ಎಲ್ಲರೂ ಅವರಿಗೆ ಇಷ್ಟ ಬಂದ ಶಾಲೆಗೆ ಶಿಕ್ಷಣ ಪಡೆಯಲು ಸಾಧ್ಯ. ಇತ್ತೀಚಿನ ಪತ್ರಿಕಾ ವರದಿಗಳು ಸರ್ಕಾರಿ ಶಾಲೆಯ ಗುಣಮಟ್ಟವು ತುಂಬ ಕನಿಷ್‌ಠವಾಗಿರುವ ಬಗ್ಗೆ ಹೇಳಿರುವ ಅಭಿಪ್ರಾಯಗಳು ತುಂಬಾ ವಿಷಾದನೀಯ ಎಂದು ಹೇಳಿದರು. ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರನ್ನು ನೇಮಿಸಿದೆ ಜನರ ತೆರಿಗೆ ಹಣ ಸದುಪಯೋಗ ಆಗಬೇಕಾದರೆ ನಮ್ಮಲ್ಲಿ ಬದ್ಧತೆ ಮತ್ತು ಉತ್ತರದಾಯಿತ್ವ ಪ್ರದರ್ಶಿಸಬೇಕಾಗಿದೆ. ನಮ್ಮ ಸಂಸ್ಥೆಯ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿದ್ದು ಕಾಣಿಸಿಕೊಳ್ಳದೇ ಈ ನಾಯಕತ್ವ ಅಭಿವೃದ್ಧಿಯನ್ನು ಮುಖ್ಯ ಶಿಕ್ಷಕರಲ್ಲಿ ಉಂಟು ಮಾಡಿರುವುದು ತುಂಬ ಶ್ಲಾಘನೀಯ. ಇದನ್ನು ಮುಂದುವರೆಸಿಕೊಂಡು ಹೋಗಿ ಎಂದು ಆಶಿಸಿದರು.
ಡಿಡಿಪಿಐ ಎಚ್.ಆರ್. ಬಸಪ್ಪ ಮಾತನಾಡಿ, ಎಲ್ಲ ಮುಖ್ಯ ಶಿಕ್ಷಕರಲ್ಲಿ ಸಕರಾತ್ಮಕ ಧೋರಣೆಗಳು ಬಲಗೊಳ್ಳುವಂತೆ ಮಾಡಿರುವುದು ಈ ತರಬೇತಿಯ ಮಹತ್ವವನ್ನು ತಿಳಿಸುತ್ತದೆ. ನಿಮಗೆಲ್ಲರಿಗೂ ನಮ್ಮ ಪೂರ್ಣವಾದ ಬೆಂಬಲವಿದೆ ಎಂದು ತಿಳಿಸಿದರು.
ಡಯಟ್ ಪ್ರಾಂಶುಪಾಲ ಬಿ.ಕೆ. ಬಸವರಾಜು, ಮಂಜುಳಾ ಮುಂತಾದವರು ಭಾಗವಹಿಸಿದ್ದರು. ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ 80 ಮಂದಿ ಪಾಲ್ಗೊಂಡಿದ್ದರು. ವೆಂಕಟೇಶ್ ಪ್ರಾರ್ಥಿಸಿದರು. ಮಹೇಶ್ ಸ್ವಾಗತಿಸಿದರು. ಹೇಮಣ್ಣ ನಿರೂಪಿಸಿದರು.