ಜಸ್ಕೋ ಒಪ್ಪಂದ ರದ್ದಿಗೆ ತನ್ವೀರ್ ಆಗ್ರಹ
ಮೈಸೂರು: ನಗರಕ್ಕೆ 24X7 ಮಾದರಿ ನೀರು ಪೂರೈಸಲು ವಿಫಲವಾಗಿರುವ ಜಸ್ಕೋ ಕಂಪನಿಯೊಂದಿಗಿನ ಒಪ್ಪಂದವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲು ಶಾಸಕ ತನ್ವೀರ್ ಸೇಠ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಜಸ್ಕೋ ಕಂಪನಿಯ ಅವ್ಯವಹಾರ ಹಾಗೂ ಅವ್ಯವಸ್ಥೆಗಳನ್ನು ಮುಚ್ಚಿ ಹಾಕಿ, ಜನಪ್ರತಿನಿಧಿಗಳು ಹಾಗೂ ನಗರ ಪಾಲಿಕೆಯ ಮೇಲೆ ಅನಗತ್ಯ ಅಪಾದನೆ ಹೊರಿಸುತ್ತಿರುವ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ನಗರದ ಜನತೆಗೆ ಸಮರ್ಪಕ ನೀರು ಸರಬರಾಜು ಮಾಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತ ನಗರಾಭಿವೃದ್ಧಿ ಸಚಿವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜಸ್ಕೋ ಕಂಪನಿ ನೀರು ಪೂರೈಸುವ ಸಲುವಾಗಿ ಪೈಪ್ಗಳನ್ನು ಅಳವಡಿಸಲು ರಸ್ತೆಗಳನ್ನು ಅಗೆದಿದೆ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಬಂದಿದೆ. ಈ ಹಿಂದೆ ವಾಣಿ ವಿಲಾಸ ನೀರು ಸರಬರಾಜು ಮಂಡಳಿಯವರಿಂದಲೇ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿತ್ತು. ಜಸ್ಕೋ ಕಂಪನಿಯವರು ವಹಿಸಿಕೊಂಡ ನಂತರ ಕೆಲವು ಬಡಾವಣೆಗಳಿಗೆ ವಾರಕ್ಕೊಮ್ಮೆ ನೀರು ಪೂರೈಸುವುದು ಸಹ ಕಷ್ಟವಾಗಿದೆ. ಅತಿ ಹೆಚ್ಚಿನ ನೀರಿನ ತೆರಿಗೆಯನ್ನು ವಿಧಿಸುವುದರ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಇಷ್ಟೆಲ್ಲಾ ಲೋಪದೋಷಗಳಿದ್ದರೂ ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಶುಕ್ಲಾ ಅವರು 24್ಗ7 ಮಾದರಿಯ ನೀರು ಪೂರೈಕೆಗೆ ಜನಪ್ರತಿನಿಧಿಗಳು ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ದಂಧೆಯವರು ಕಾರಣರೆಂದು ತಿಳಿಸಿದ್ದಾರೆ. ಇದು ಸ್ಪಷ್ಟವಾಗಿ ಜನಪ್ರತಿನಿಧಿಗಳ ಹಕ್ಕು ಚ್ಯುತಿಯಾಗಿದೆ. ಯಾರದೋ ತಪ್ಪಿಗೆ ಇನ್ಯಾರನ್ನೊ ಹೊಣೆ ಮಾಡುವ ಸಂಚಾಗಿದೆ ಎಂದು ಕಿಡಿಕಾರಿದ್ದಾರೆ.