ಮೀಸಲಿಟ್ಟ ಹಣ ದಲಿತರಿಗೆ ಖರ್ಚು ಮಾಡಿಲ್ಲ: ಆರೋಪ
ಮೈಸೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿ ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ಖರ್ಚು ಮಾಡದೆ ವಂಚಿಸಲಾಗುತ್ತಿದೆ ಎಂದು ಮಾಜಿ ಮೇಯರ್ ನಾರಾಯಣ್ ಆರೋಪಿಸಿದ್ದಾರೆ.
ಮೀಸಲಾತಿ ಹಣವನ್ನು ಆಯಾ ಆರ್ಥಿಕ ವರ್ಷಗಳಲ್ಲಿ ಸ್ಥಳೀಯ ಸಂಸ್ಥೆಗಳು ವೆಚ್ಚ ಮಾಡಬೇಕೆಂದು ಸರ್ಕಾರದ ಆದೇಶವಿದೆ. ಆದರೂ ಕಳೆದ ಎರಡು ವರ್ಷಗಳಿಂದ ಈ ಹಣವನ್ನು ವೆಚ್ಚ ಮಾಡದೆ ಪಾಲಿಕೆ ಅಧಿಕಾರಿಗಳು ದಲಿತರಿಗೆ ದ್ರೋಹ ಮಾಡಿದ್ದಾರೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
2012- 13 ಹಾಗೂ 2013- 14 ರ ಆರ್ಥಿಕ ವರ್ಷದಲ್ಲಿ ಸುಮಾರು 17 ಕೋಟಿ ರು. ವೆಚ್ಚ ಮಾಡಿಲ್ಲ. ಇಷ್ಟು ಮೊತ್ತದ ಹಣ ನಗರ ಪಾಲಿಕೆಯ ಬ್ಯಾಂಕ್ ಖಾತೆಯಲ್ಲಿದೆ. ಈ ಹಣಕ್ಕೆ ಪಾಲಿಕೆಯು ಬಡ್ಡಿ ತೆಗೆದುಕೊಳ್ಳುತ್ತಿದೆ. ದಲಿತರ ಮೀಸಲಾತಿ ಹಣದಲ್ಲಿ ಶೇ. 60 ಸಮುದಾಯದ ಅಭಿವೃದ್ಧಿಗೆ ಹಾಗೂ ಶೇ. 40 ವೈಯಕ್ತಿಕ ಸೌಲಭ್ಯಕ್ಕೆ ವೆಚ್ಚ ಮಾಡಬೇಕೆಂದು ಸರ್ಕಾರದ ನಿಯಮವಿದೆ ಎಂದರು.
ಮೂಲೆಗುಂಪು: ಕಳೆದ ಮೂರು ವರ್ಷಗಳಿಂದ ಶೇ. 22, 75 ರ ಅನುದಾನದಡಿ ಖರೀದಿಸಿರುವ 40 ಲಕ್ಷ ರು. ಮೌಲ್ಯದ ಲ್ಯಾಪ್ ಟಾಪ್, ಕಂಪ್ಯೂಟರ್, ಹೊಲಿಗೆ ಯಂತ್ರ ಮುಂತಾದ ಪರಿಕರಗಳಿಗೆ ಕೊಠಡಿಯಲ್ಲಿ ಮೂಲೆಗುಂಪಾಗಿ ಹಾಳಾಗುತ್ತಿವೆ. ಇದರ ವಿತರಣೆಗೂ ಪಾಲಿಕೆ ಆಯುಕ್ತರು ಮುಂದಾಗದೆ ದಲಿತರಿಗೆ ವಂಚನೆ ಮಾಡಿದ್ದಾರೆ ಎಂದು ಅವರು ದೂರಿದರು.
ಶಿಕ್ಷೆ, ದಂಡ: ದಲಿತರಿಗೆ ಮೀಸಲಿಟ್ಟಿರುವ ಹಣವನ್ನು ಆಯಾಯ ಆರ್ಥಿಕ ವರ್ಷದಲ್ಲಿ ವೆಚ್ಚ ಮಾಡದೇ ಹೋದರೆ, ಅಂತಹ ಸ್ಥಳೀಯ ಸಂಸ್ಥೆ ಮುಖ್ಯಸ್ಥರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರು. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಹೀಗಿದ್ದರೂ ಪಾಲಿಕೆ ಆಯುಕ್ತರು ಕಾನೂನು ಉಲ್ಲಂಘಿಸಿದ್ದಾರೆ. ಇವರ ವಿರುದ್ಧ ಕ್ರಮಕ್ಕೆ ಈಗಾಗಲೇ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ ಎಂದರು. ಕಾನೂನು ಉಲ್ಲಂಘಿಸಿರುವ ಪಾಲಿಕೆ ಆಯುಕ್ತರಿಗೆ ಶಿಕ್ಷೆ ವಿಧಿಸಿದರೆ, ಇತರ ಅಧಿಕಾರಿಗಳಿಗೂ ಎಚ್ಚರಿಕೆ ಕೊಟ್ಟಂತೆ ಆಗಲಿದೆ. ಆದ್ದರಿಂದ ಸರ್ಕಾರ ಕ್ರಮಕ್ಕೆ ಮುಂದಾಗಬೇಕು. ಒಂದು ವೇಳೆ ಸರ್ಕಾರ ಪಾಲಿಕೆ ಆಯುಕ್ತರ ವಿರುದ್ಧ ಕ್ರಮ ವಹಿಸದೆ ಹೋದರೆ ದಲಿತ ಸಂಘಟನೆಗೊಳಗೂಡಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ನಗರ ಪಾಲಿಕೆ ಮಾಜಿ ಸದಸ್ಯ ದೇವರಾಜ್, ಡಿಸಿಸಿ ಸದಸ್ಯ ದಾಸ್ ಇದ್ದರು.