ರಾಜಪಥ ವಿರುದ್ಧ ಜನಪ್ರತಿನಿಧಿ, ಜನತೆ ಆಕ್ರೋಶ
ಕ.ಪ್ರ.ವಾರ್ತೆ , ಮೈಸೂರು , ಫೆ. 7
ರಾಜಪಥ, ಪುರಭವನ ಕಾಮಗಾರಿ ಪರಿಶೀಲಿಸಿದ ನಗರಾಭಿವೃದ್ಧಿ ಸಚಿವ ವಿನಯ್ಕುಮಾರ್ ಸೊರಕೆ ಅವರು ಕೂಡಲೇ ಈ ಎಲ್ಲಾ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗ ತಾಕೀತು ಮಾಡಿದರು.
ಶುಕ್ರವಾರ ನಗರಕ್ಕೆ ಭೇಟಿ ನೀಡಿದ್ದ ಅವರು, ಮಂದಗತಿಯ ಕಾಮಗಾರಿ ಕುರಿತು ಸ್ಥಳೀಯ ಶಾಸಕರು ಮತ್ತು ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ನಗರ ಪಾಲಿಕೆ ಮತ್ತು ಎಂಡಿಎ ವತಿಯಿಂದ ಕೈಗೊಂಡಿರುವ ಎಲ್ಲಾ ಯೋಜನೆಗಳ ಕುರಿತು ಮಾಹಿತಿ ಪಡೆದು, ಕೂಡಲೆ ಈ ಎಲ್ಲಾ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ರು. 18.65 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರಾಜಪಥ ಕಾಮಗಾರಿ 2011 ರಿಂದ ಇದುವರೆಗೂ ಪೂರ್ಣಗೊಂಡಿಲ್ಲ. ಅಲ್ಲದೆ 5.6 ಕಿ.ಮೀ. ವರೆಗೆ ನಿರ್ಮಿಸಿ ಬೇಕಿದ್ದ ರಾಜಪಥ ಮಾರ್ಗವನ್ನು ಅಷ್ಟೆ ಮೊತ್ತಕ್ಕೆ ಕೇವಲ 1.5 ಕಿ.ಮೀ.ಗಳಿಗೆ ಸೀಮಿತಗೊಳಿಸಲಾಗಿದೆ. ಅಲ್ಲದೆ ಅಧಿಕಾರಿಗಳು ಹಣದ ಆಸೆಗಾಗಿ ಗುತ್ತಿಗೆದಾರರನ್ನು ಕಾಡುತ್ತಿದ್ದಾರೆ. ಪದೇ ಪದೇ ಕಾಮಗಾರಿಯನ್ನು ತಡೆಯುತ್ತಿದ್ದಾರೆ. ಇದುವರೆಗೆ ಮೂವರು ಉಸ್ತುವಾರಿ ಸಚಿವರು ಮತ್ತು ಮೂವರು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಸಂಸದ ಎಚ್. ವಿಶ್ವನಾಥ್ ಮತ್ತು ಶಾಸಕ ತನ್ವೀರ್ಸೇಠ್ ಆರೋಪಿಸಿದರು.
ಇದೆ ವೇಳೆ ಬಿಇಎಂಎಲ್ ನಿವೃತ್ತ ನೌಕರ ಮುರಳೀಧರ್ ಮಾತನಾಡಿ, ಅನುದಾನ ನೀಡಿರುವುದು ಕೇಂದ್ರವಿರಲಿ, ರಾಜ್ಯ ಸರ್ಕಾರವಿರಲಿ. ಅದು ಜನರ ದುಡ್ಡು. ಕಾಮಗಾರಿಯನ್ನು ಬೇಗ ಮುಗಿಸಬೇಕಿರುವುದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕರ್ತವ್ಯ. ಕಳೆದ ಮೂರು ವರ್ಷಗಳಿಂದ ಈ ರಸ್ತೆಯಲ್ಲಿ ಅದೆಷ್ಟು ಬಾರಿ ಬಿದ್ದಿದ್ದೇನೋ ಗೊತ್ತಿಲ್ಲ. ಅಷ್ಟು ಮಂದಗತಿಯ ಕಾಮಗಾರಿ ನಡೆಸುತ್ತಾರೆ. ರಸ್ತೆಗೆ ಮಣ್ಣು ಕಲ್ಲು ಸುರಿಯುತ್ತಾರೆ. ಮೊದಲು ಕೆಲಸ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆದಾರ ಅಮಿತ್ ಶಹಾನಿ ಮಾತನಾಡಿ, ನನಗೆ ರು. 2 ರಿಂದ 3 ಕೋಟಿಯಷ್ಟು ಬಿಲ್ ಪಾವತಿಸಬೇಕಿದೆ. ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳ ಬಳಿಗೆ ಅಲೆದಿದ್ದೇನೆ. ಆದರೂ ನನಗೆ ಬಿಲ್ ಪಾವತಿಸಿಲ್ಲ. ರಾಜಮಾರ್ಗ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುತ್ತೇನೆ. ಉಳಿದಂತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ ಎಂದರು.
ಸಂಸದ ಎಚ್. ವಿಶ್ವನಾಥ್ ಮಾತನಾಡಿ, ಕೂಡಲೆ ನರ್ಮ್ ಕಾಮಗಾರಿ ಮೇಲ್ವಿಚಾರಣೆಗೆ ಪ್ರಧಾನ ಕಾರ್ಯದರ್ಶಿ ಹುದ್ದೆಯ ಅಧಿಕಾರಿ ಒಬ್ಬರನ್ನು ನೇಮಿಸಬೇಕು. ಜಿಲ್ಲಾಧಿಕಾರಿಗಳು ಬಿಡುವಿದ್ದರೆ ಸಭೆ ನಡೆಸುತ್ತಾರೆ. ಇಲ್ಲದಿದ್ದರೆ ಅವರು ನರ್ಮ್ ಬಗ್ಗೆ ತಲೆ ಕೆಡಸಿಕೊಳ್ಳುವುದಿಲ್ಲ. ಅಲ್ಲದೆ ಅಧಿಕಾರಿಗಳಲ್ಲಿ ಹೊಂದಾಣಿಕೆ ಕಡಿಮೆ ಇದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಶಾಸಕ ವಾಸು ಮಾತನಾಡಿ, ಮೈಸೂರು ಮಹಾನಗರ ಪಾಲಿಕೆಯ ಅತ್ಯಮೂಲ್ಯ ಆಸ್ತಿಯಾದ ರಂಗಚಾರ್ಲು ಪುರಭವನವನ್ನು ಈಗ ಕಸದ ಕೇಂದ್ರವನ್ನಾಗಿ ಮಾಡಿದ್ದಾರೆ. ಲಾಲ್ಬಹದ್ದೂರ್ ಶಾಸ್ತ್ರಿ, ರಾಜೀವ್ಗಾಂಧಿ, ಸೋನಿಯಾಗಾಂಧಿ, ಡಾ. ರಾಜ್ಕುಮಾರ್ ಮುಂತಾದವರು ಈ ಪುರಭವನ ಆವರಣದಲ್ಲಿ ಬೃಹತ್ ಸಭೆಗಳನ್ನು ನಡೆಸಿದ್ದಾರೆ. ಆದರೆ ಅಲ್ಲೀಗ ಕಸ ಬಿದ್ದಿದೆ. ಪುರಭವನ ಅಭಿವೃದ್ಧಿಗೆ ಕೈಗೊಂಡಿದ್ದ ಯೋಜನೆಯೂ ಕಾರ್ಯಗತವಾಗಿಲ್ಲ. ಆದ್ದರಿಂದ ಕೂಡಲೆ ಆ ಬಗ್ಗೆಯೂ ಸಚಿವರು ಗಮನ ನೀಡಬೇಕು ಎಂದು ಹೇಳಿದರು.ಪುರಭವನ ಆವರಣದಲ್ಲಿನ ಕಸ, ಗಿಡಗಂಟಿಗಳು ಮತ್ತು ಅಲ್ಲಿ ನಿಲ್ಲಿಸಲಾದ ವಾಹನಗಳನ್ನು ಕೂಡಲೆ ತೆಗೆಸಬೇಕು. ಅಲ್ಲದೆ ಪುರಭವನ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸೊರಕೆ ಅವರು ಸೂಚಿಸಿದರು. ಅಧಿಕಾರಿಗಳಲ್ಲಿನ ಹೊಂದಾಣಿಕೆ ಕೊರತೆ ಮತ್ತು ಕೆಲವು ಗೊಂದಲದಿಂದ ಅನೇಕ ಕಾಮಗಾರಿ ಪೂರ್ಣಗೊಂಡಿಲ್ಲ. ನಾವು ಈ ಬಗ್ಗೆ ಗಮನ ನೀಡುತ್ತೇವೆ. ಮತ್ತೊಮ್ಮೆ ಭೇಟಿನೀಡಿ ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದರು.
ಕೆ.ಆರ್. ಆಸ್ಪತ್ರೆಗೆ ಸೊರಕೆ ಭೇಟಿ: ವಿನಯ್ಕುಮಾರ್ ಸೊರಕೆ ಅವರು ನಗರದ ಕೆ.ಆರ್. ಆಸ್ಪತ್ರೆಗೆ ಶಾಸಕ ವಾಸು ಜೊತೆಗೂಡಿ ಭೇಟಿ ನೀಡಿದ್ದರು. ಕೆ.ಆರ್. ಆಸ್ಪತ್ರೆ ಹಿಂಭಾಗ ನಿರ್ಮಿಸುತ್ತಿರುವ ವಾಟರ್ ಟ್ಯಾಂಕ್ ಕಾಮಗಾರಿ ಬೇಗ ಪೂರೈಸಬೇಕು ಮತ್ತು ಆಸ್ಪತ್ರೆಗೆ ನೀರಿನ ಕೊರತೆ ಉಂಟಾಗದಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ನಿವೇಶನ ಅನ್ಯಾಯ ಸರಿಪಡಿಸಿ: ಕಥೋಡ್ರೆಲ್ ಸೊಸೈಟಿಯವರು ಉದಯಗಿರಿ ಸಮೀಪದ ಮಹದೇವಪುರದಲ್ಲಿ 108 ಎಕರೆ ಜಮೀನು ಖರೀದಿಸಿ ಸುಮಾರು 1,462 ಮಂದಿಗೆ ನಿವೇಶನ ಹಂಚಿಕೆ ಮಾಡಿ ಖಾತೆಯನ್ನು ಮಾಡಿಸಿದ್ದರು. ಆದರೆ 1992ರಲ್ಲಿ ಎಂಡಿಎ ಆ 108 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ.
ಇದಕ್ಕೆ ಪರ್ಯಾಯವಾಗಿ ಅಲ್ಲಿನ ಫಲಾನುಭವಿಗಳಿಗೆ ನಿವೇಶನವನ್ನಾಗಲಿ ಅಥವಾ ಪರಿಹಾರವನ್ನು ನೀಡದೆ ಸೊಸೈಟಿಗೆ 108 ಎಕರೆ ಜಮೀನನ್ನೂ ನೀಡದೆ ವಂಚಿಸಲಾಗಿದೆ. ಈ ಸಂಬಂಧ ಹೈಕೋರ್ಟ್ ಸಹ ಸೊಸೈಟಿ ಪರ ತೀರ್ಪು ನೀಡಿ 75 ದಿನದಲ್ಲಿ 108 ಎಕರೆ ಹಿಂದಿರುಗಿಸುವಂತೆ ಸೂಚಿಸಿತ್ತು. ಆದರೂ ಪಾಲಿಕೆ ಈ ಬಗ್ಗೆ ಗಮನ ನೀಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಎಂ. ಲಕ್ಷ್ಮಣ್ ಆರೋಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ವಿನಯ್ಕುಮಾರ್ ಸೊರಕೆ ಅವರು, ಇದು ಸುಮಾರು 20 ವರ್ಷಗಳ ಹಿಂದಿನ ಪ್ರಕರಣವಾದ್ದರಿಂದ ಈ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸದ್ಯದಲ್ಲಿಯೆ ಸಭೆ ನಡೆಸಿ ಬಗೆಹರಿಸೋಣ ಎಂದು ಭರವಸೆ ನೀಡಿದರು. ಸಂಸದ ಎಚ್. ವಿಶ್ವನಾಥ್, ಶಾಸಕರಾದ ವಾಸು, ತನ್ವೀರ್ಸೇಠ್, ಮೇಯರ್ ಎನ್.ಎಂ. ರಾಜೇಶ್ವರಿ, ಕಾಂಗ್ರೆಸ್ ಮುಖಂಡ ಎಚ್.ಎ. ವೆಂಕಟೇಶ್, ಮೂರ್ತಿ, ಮಂಜುನಾಥ್, ಎಂ. ಲಕ್ಷ್ಮಣ್, ಶೌಕತ್ ಅಲಿಖಾನ್ ಮೊದಲಾದವರು ಇದ್ದರು.