ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿರೋಧಿಸಲು ಸಮಾವೇಶ ಮಾಡುತ್ತಿಲ್ಲ

Vishwanath S
Updated On : 7 Feb 2014, 11:23 am

ಕ.ಪ್ರ.ವಾರ್ತೆ ,  ಮೈಸೂರು ,  ಫೆ. 7
ಜೆಡಿಎಸ್ ವತಿಯಿಂದ ಹಿಂದುಳಿದ ವರ್ಗಗಳ ಸಮಾವೇಶವನ್ನು ಫೆ.9ರ ಬೆಳಗ್ಗೆ 11ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಸಮಾವೇಶವನ್ನು ಯಾರನ್ನೂ ವಿರೋಧಿಸಲು ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಜೆಡಿಎಸ್ ಒಂದಲ್ಲ ಒಂದು ರೀತಿಯಲ್ಲಿ ಹಿಂದುಳಿದ ವರ್ಗಗಳನ್ನು ಬೆಳೆಸುತ್ತಾ ಬಂದಿದೆ. ಸಿದ್ದರಾಮಯ್ಯ, ಜಾಲಪ್ಪ, ಕೋದಂಡರಾಮಯ್ಯ ಅವರಂತಹ ನಾಯಕರನ್ನು ಜೆಡಿಎಸ್ ಬೆಳೆಸಿದೆ. ನಮ್ಮ ಪಕ್ಷದಲ್ಲಿ ಬೆಳೆದ ಹಲವಾರು ನಾಯಕರು ಬೇರೆ ಪಕ್ಷಗಳಿಗೆ ಹೋಗಿದ್ದಾರೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೋದಂಡರಾಮಯ್ಯ ಸಂಸದರಾಗಿದ್ದೂ, ಜಾಲಪ್ಪ ಕೇಂದ್ರ ಸಚಿವರಾಗಿದ್ದೂ ನಮ್ಮಿಂದಲೆ. ವೈಯಕ್ತಿಕ ಕಾರಣ ಹಾಗೂ ಸನ್ನಿವೇಶಗಳಿಂದ ಪಕ್ಷ ಬಿಟ್ಟು ಹೋಗಿದ್ದಾರೆ. ಹಿಂದುಳಿದ ವರ್ಗ ಸೇರಿದಂತೆ ಎಲ್ಲ ಸಮಾಜವನ್ನು ಜೆಡಿಎಸ್ ಗೌರವದಿಂದ ಕಂಡಿದೆ ಎಂದರು.
ರಾಜ್ಯದಲ್ಲಿ 120  ಸೀಟುಗಳನ್ನು ಜೆಡಿಎಸ್ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಅರಿತ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವ ಸಲುವಾಗಿ ಕಾಂಗ್ರೆಸ್ ಸೇರಿದ್ದರು. ದೇವೇಗೌಡರು ಪ್ರಧಾನಿಯಾದಾಗ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕೆಂದು  ಬಯಸಿದ್ದರು.
ಆದರೆ, ಪಕ್ಷದಲ್ಲಿದ್ದ ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಅವರಂತಹ ನಾಯಕರು ಜೆ.ಎಚ್. ಪಟೇಲ್ ಹೆಸರು ಸೂಚಿಸಿದ್ದರು. 2004 ರಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲಾಯಿತು. 58 ಸ್ಥಾನ ಹೊಂದಿದ್ದ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಆ ಸಂದರ್ಭದಲ್ಲಿ ನಡೆದ ಮಾತುಕತೆಯ ಬಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಾಯಿ ಬಿಡುತ್ತಿಲ್ಲ. ಹೀಗಾಗಿ, ವಾಸ್ತವಾಂಶ ಗೊತ್ತಿಲ್ಲದೆ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಪಟ್ಟವನ್ನು ಜೆಡಿಎಸ್ ತಪ್ಪಿಸಿರುವುದಾಗಿ ಪದೇ ಪದೇ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅವರು ಖಂಡಿಸಿದರು.
ಶಾಸಕರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ಸಂದೇಶ್ ನಾಗರಾಜ್, ಮಾಜಿ ಸಚಿವರಾದ ಕೋಟೆ ಎಂ. ಶಿವಣ್ಣ, ಬಂಡೆಪ್ಪ ಕಾಶಂಪುರ್, ಮಾಜಿ ಶಾಸಕ ಎಚ್.ಎಸ್. ಶಂಕರಲಿಂಗೇಗೌಡ, ಉಪ ಮೇಯರ್ ವಿ. ಶೈಲೇಂದ್ರ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಪಾಲಿಕೆ ಸದಸ್ಯ ಎಂ.ಜೆ. ರವಿಕುಮಾರ್, ಕೆ.ಟಿ. ಚೆಲುವೇಗೌಡ, ಆರ್. ಲಿಂಗಪ್ಪ, ಕೆ.ವಿ. ಮಲ್ಲೇಶ್, ಮಹದೇವ್, ಜೆಡಿಎಸ್ ನಗರಾಧ್ಯಕ್ಷ ರಾಜಣ್ಣ, ಜಿಪಂ ಮಾಜಿ ಅಧ್ಯಕ್ಷ ಕಡಕೊಳ ನಾಗರಾಜು, ಸದಸ್ಯ ದ್ವಾರಕೀಶ್,  ಮುಖಂಡ ಎಸ್.ಬಿ.ಎಂ. ಮಂಜು, ಕಡಕೊಳ ಬಸವರಾಜು, ಬೋರೇಗೌಡ ಇದ್ದರು.ಕುರಿ- ಕೋಳಿ ಕೊಯ್ದ ವಿಶ್ವನಾಥ್: ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂಢನಂಬಿಕೆ ಹೋಗಲಾಡಿಸಲು ಕಾಯ್ದೆ ರಚಿಸುವುದಾಗಿ ಹೇಳುತ್ತಿದ್ದಾರೆ. ಆದರೆ, ಅವರದೇ ಪಕ್ಷದ ಸಂಸದ ಎಚ್. ವಿಶ್ವನಾಥ್ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕುರಿ- ಕೋಳಿ ಕೊಯ್ದು ಸಾವಿರಾರು ಜನರಿಗೆ ಬಾಡೂಟ ಹಾಕಿಸಿದ್ದಾರೆ. ಮೂಢನಂಬಿಕೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿಲವು ಪ್ರಕಟಿಸಬೇಕು
   ಎಚ್.ಡಿ. ಕುಮಾರಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement