ಹಳೆಕೆರೆ ಗಿರಿಜನ ಹಾಡಿಗೆ ಶಾಸಕ ಭೇಟಿ
ಪಿರಿಯಾಪಟ್ಟಣ: ತಾಲೂಕಿನ ಹಳೆಕೆರೆ ಗಿರಿಜನ ಹಾಡಿಗೆ ಶಾಸಕ ಕೆ. ವೆಂಕಟೇಶ್ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದರು.
ಇದೇ ವೇಳೆ ಅಲ್ಲಿನ ಜನರು ತಮಗೆ ಸಮುದಾಯ ಅರಣ್ಯ ಹಕ್ಕು ಕಾಯ್ದೆಯಡಿ ಮೂಲಭೂತ ಸೌಲಭ್ಯಗಳಾದ ಮನೆ, ಕುಡಿಯುವ ನೀರು, ರಸ್ತೆ, ವಿದ್ಯಾಭ್ಯಾಸಕ್ಕಾಗಿ ಅಂಗನವಾಡಿಯನ್ನು ನಿರ್ಮಿಸಿಕೊಡುವಂತೆ ಮನವಿಯಿತ್ತರು. ಅಲ್ಲದೆ ದವಸ, ಧಾನ್ಯಗಳನ್ನು ತರುವುದು ಕಷ್ಟಕರವಾಗಿದ್ದು ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಕೋರಿದರು.
ಈ ಹಾಡಿಯಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ನಮಗೆ ಅರಣ್ಯ ಹಕ್ಕು ಕಾಯ್ದೆ ಇದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಡಿನಲ್ಲೇ ಹುಟ್ಟಿ ಕಾಡಿನಲ್ಲಿಯೇ ಜೀವನ ನಡೆಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕಾಡು ಬಿಟ್ಟು ಹೊರ ಬರುವುದಿಲ್ಲ. ಇಲ್ಲಿಯೇ ವ್ಯವಸಾಯ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ವೆಂಕಟೇಶ್, ತಾಲೂಕಿನಲ್ಲಿ 5 ಹಾಡಿಗಳ ಜನ ಕಾಡಿನಲ್ಲಿಯೇ ವಾಸವಿದ್ದು, ನೀವು ಕಾಡಿನಿಂದ ನಾಡಿಗೆ ಬಂದು ಜೀವಿಸುವುದಾದರೆ ಪುನರ್‌ವಸತಿ ಯೋಜನೆಯಡಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುವುದು. ಆದರೆ ನೀವು ಕಾಡು ಬಿಟ್ಟು ಬರಲು ಮನಸ್ಸು ಮಾಡುತ್ತಿಲ್ಲವಾದ್ದರಿಂದ, ಜೊತೆಗೆ ಅರಣ್ಯ ಇಲಾಖೆಯೂ ಕೂಡ ನಿಮಗೆ ಕುಡಿಯುವ ನೀರಿಗಾಗಿ ಬೋರ್‌ವೆಲ್ ಹಾಗೂ ವಾಸಿಸಲು ಮನೆ ನಿರ್ಮಿಸಿಕೊಡುವುದಕ್ಕೆ ಅಡ್‌ಡಿ ಪಡಿಸುತ್ತಿರುವುದಾಗಿ ತಿಳಿಸಿದ್ದೀರಿ. ಈ ಬಗ್ಗೆ ಗಮನಹರಿಸಿ ಸಂಬಂಧಪಟ್ಟವರನ್ನು ಸಂಪರ್ಕಿಸಿ ಪರಿಹಾರ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ಸಮಾಜ ಕಲ್ಯಾಣಾಧಿಕಾರಿ ನಾರಾಯಣ್, ಪಿಡಿಒ ಮಹದೇವ್, ಹಾಡಿಯ ನಿವಾಸಿಗಳಾದ ರಾಜೇಶ್, ಅಣ್ಣಯ್ಯ, ರಮೇಶ್, ಬೇಬಿ, ಕಮಲಮ್ಮ, ಮುತ್ತ, ಮರಿ, ಕುಳ್ಳ, ಮನು, ಲಲಿತ, ಸುಶೀಲ ಇದ್ದರು.