ಹಿಂದುಳಿದ ಸಮಾವೇಶಕ್ಕೆ 5 ಸಾವಿರ ಮಂದಿ ಕರೆತನ್ನಿ
ಕೆ.ಆರ್. ನಗರ: ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಫೆ. 9 ರಂದು ನಡೆಯುವ ಜೆಡಿಎಸ್ ರಾಜ್ಯ ಮಟ್ಟದ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ತಾಲೂಕಿನಿಂದ 5 ಸಾವಿರ ಮಂದಿಯನ್ನು ಕರೆತರಬೇಕು ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಸಮಾವೇಶದ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕು ಜೆಡಿಎಸ್ ಹಿಂದುಳಿದ ವರ್ಗಗಳ ನಾಯಕರು ಮತ್ತು ಪಕ್ಷದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮಾವೇಶದ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಅಧಿಕಾರದಲ್ಲಿದ್ದಾಗ ಹಿಂದುಳಿದವರಿಗೆ ಕಲ್ಪಿಸಿರುವ ಸೌಲಭ್ಯವನ್ನು ಸಮಾವೇಶದಲ್ಲಿ ತಿಳಿಸಲಾಗುವುದು ಎಂದರು.
ನಾಯಕ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದ್ದು, ಸಿದ್ದರಾಮಯ್ಯ ಅವರನ್ನು ಉಪ ಮುಖ್ಯಮಂತ್ರಿ ಮಾಡಿದ್ದು ದೇವೇಗೌಡರು. ಆದರೂ ತಮ್ಮನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದು ಈಗಲೂ ಸಿದ್ದರಾಮಯ್ಯ ದೂರುತ್ತಾರೆ. ರಾಜಕೀಯದಲ್ಲಿ ಸಿದ್ದರಾಮಯ್ಯ ಅವರಿಗಿಂತ ಎಚ್. ವಿಶ್ವನಾಥ್ ಹಿರಿಯರು. ಆದರೆ ದಶಕಗಳಿಂದ ಕಾಂಗ್ರೆಸ್‌ನಲ್ಲಿರುವ ವಿಶ್ವನಾಥ್ ಮಂತ್ರಿಯಾಗಿದ್ದು ಬಿಟ್ಟರೆ ಯಾವ ಉನ್ನತ ಸ್ಥಾನಕ್ಕೇರಿದ್ದಾರೆ ಎಂದು ಪ್ರಶ್ನಿಸಿದರು.
ಜೆಡಿಎಸ್‌ನಲ್ಲಿ ರಾಜನಂತೆ ಇದ್ದ ಸಿದ್ದರಾಮಯ್ಯ ಈಗ ಕಾಂಗ್ರೆಸ್‌ನಲ್ಲಿ ಸಂಕಷ್ಟ ಅನುಭವಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಕೇವಲ ಪ್ರಚಾರಕ್ಕೆ ಟೀಕೆ ಮಾಡುವವರು ಇಂತಹ ಸೂಕ್ಷ್ಮ ವಿಚಾರಗಳನ್ನು ಪರಿಶಿಲೀಸಬೇಕು ಎಂದರು.
ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಯುವ ಜೆಡಿಎಸ್ ಅಧ್ಯಕ್ಷ ಹೆಬ್ಬಾಳು ಸುಜಯ್, ಹಾಡ್ಯ ಮಹದೇವಸ್ವಾಮಿ, ಮೇಲೂರು ಕೃಷ್ಣೇಗೌಡ, ನಾಗಣ್ಣ, ಎನ್. ಶಿವಕುಮಾರ್, ನಂಜುಂಡ, ಕೆ.ಎಸ್. ರೇವಣ್ಣ, ಬಂಡಹಳ್ಳಿ ಕುಚೇಲ, ಓಬೇಗೌಡ, ಮುಖಂಡರಾದ ಹಂಪಾಪುರ ಕುಮಾರ್, ಹನಸೋಗೆ ನಾಗರಾಜು ಇತರರಿದ್ದರು.