ಇಂದು ಜೆಡಿಎಸ್ ಹಿಂದುಳಿದ ವರ್ಗಗಳ ಸಮಾವೇಶ
ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷಕ್ಕೆ 15 ಕ್ಕಿಂತ ಹೆಚ್ಚು ಸ್ಥಾನ ಲಭಿಸಿದ್ದಲ್ಲಿ ಕಾವೇರಿ ಸಮಸ್ಯೆ ಬಗೆಹರಿಯಲಿದೆ ಎಂದು ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಅಮರನಾಥ್ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತೃತಿಯ ರಂಗ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದರು. ಜೆಡಿಎಸ್ ನಗರಾಧ್ಯಕ್ಷ ರಾಜಣ್ಣ ಮಾತನಾಡಿ, ಫೆ. 9 ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ದೇವೇಗೌಡ, ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ, ಎಚ್.ಡಿ. ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪೂರ್, ಅಬ್ದುಲ್ ಅಜೀಮ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಮೈದಾನದವರೆಗೆ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
'ಪಠ್ಯ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೂ ಒತ್ತು ನೀಡಿ'
ಮೈಸೂರು: ಇಂದು ಜಗತ್ತು ವಿಶಾಲವಾಗಿದೆ. ಪದವಿ ನಂತರ ಅನೇಕ ಆವಕಾಶಗಳು ನಿಮ್ಮ ಮುಂದಿವೆ. ಪದವಿಯ ಪಠ್ಯಕ್ರಮದ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ವಿಷಯಗಳನ್ನು ಕೂಡ ಅಧ್ಯಯನ ಮಾಡಬೇಕು ಎಂದು ಚನ್ನರಾಯಪಟ್ಟಣದ ತಹಸೀಲ್ದಾರ್ ಡಾ.ಎಚ್.ಎಲ್. ನಾಗರಾಜ್ ತಿಳಿಸಿದರು. ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಆರ್ಥಿಕ ವೇದಿಕೆಯು ಏರ್ಪಡಿಸಿದ್ದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಿಮಗೆ ಸಾಮಾನ್ಯ ಅಧ್ಯಯನದ ಬಗ್ಗೆ ಆಳವಾದ ಜ್ಞಾನ ಇದ್ದಲ್ಲಿ ಪರೀಕ್ಷೆಗಳನ್ನು ಎದುರಿಸಬಹುದು. ಪ್ರತಿ ವಿಷಯದ ವ್ಯಾಪ್ತಿ ತುಂಬ ದೊಡ್ಡದಿರುವುದರಿಂದ ನೀವು ಈಗಿನಿಂದಲೇ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಅದಕ್ಕನುಗುಣವಾಗಿ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
13ರಿಂದ ಅಂತರ ಕಾಲೇಜು ಮಹಿಳಾ ಕ್ರೀಡಾಕೂಟ
ಮೈಸೂರು: ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಮೈಸೂರು ವಿವಿ ದೈಹಿಕ ವಿಭಾಗದ ವತಿಯಿಂದ ಫೆ. 13 ರಿಂದ 15 ರವರೆಗೆ ಮೈವಿವಿ ಅಂತರ ಕಾಲೇಜು ಮಹಿಳಾ ಕ್ರೀಡಾಕೂಟ ಆಯೋಜಿಸಿದೆ. 35 ವರ್ಷಗಳ ಬಳಿಕ ಆಯೋಜಿಸುತ್ತಿರುವ ಈ ಕ್ರೀಡಾಕೂಟಕ್ಕೆ ಫೆ. 13ರ ಬೆಳಗ್ಗೆ 9ಕ್ಕೆ ಜಿಲ್ಲಾಧಿಕಾರಿ ಸಿ. ಶಿಖಾ ಚಾಲನೆ ನೀಡುವರು. ಪ್ರಾಂಶುಪಾಲ ಪ್ರೊ.ಎಂ. ಪುರುಷೋತ್ತಮ್ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ವಾಸು, ಕುಲಸಚಿವ ಪ್ರೊ.ಸಿ. ಬಸವರಾಜು, ದೈಹಿಕ ಶಿಕ್ಷಣ ವಿಭಾಗದ ಡಾ.ಸಿ. ಕೃಷ್ಣ ಅತಿಥಿಗಳಾಗಿ ಭಾಗವಹಿಸುವರು. ಫೆ. 15ರ ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭದಲ್ಲಿ ಶಾಸಕ ಮರಿತಿಬ್ಬೇಗೌಡ ಬಹುಮಾನ ವಿತರಿಸುವರು ಎಂದು ಪ್ರಭಾರ ಪ್ರಾಂಶುಪಾಲ ಡಿ. ಅಣ್ಣಾಜಿಗೌಡ ಶನಿವಾರ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು. ಕ್ರೀಡಾಕೂಟದ ಸಮಾರಂಭಗಳು ಕಾಲೇಜಿನಲ್ಲಿ ನಡೆಯಲಿದ್ದು, ಉಳಿದಂತೆ ಪಂದ್ಯಾವಳಿಗಳು ಮೈಸೂರು ವಿವಿ ಸ್ಪೋರ್ಟ್ಸ್ ಪೆವಿಲಿಯನ್ನಲ್ಲಿ ನಡೆಯಲಿದೆ.
ವೇದಾಂತ ಭಾರತೀಯ ಟಸ್ಟ್ನಿಂದ ಶ್ಲೋಕಗಳ ಪಠಣ
ಮೈಸೂರು: ವೇದಾಂತ ಭಾರತೀಯ ಟ್ರಸ್ಟ್ ವಿಶ್ವಶಾಂತಿಗಾಗಿ ಶನಿವಾರ ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಆನಂದಸಿಂಧು ಮಹಾಸರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿ.ವಿ. ಕಾರಂತ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿ ಸತತ 50 ನಿಮಿಷಗಳ ಕಾಲ ಶ್ರೀರಾಮ ಭಜಂಗಪ್ರಯಾತ, ಸುಬ್ರಹ್ಮಣ್ಯಭಜಂಗ, ಗೌರೀದಶಕ, ಹರಿಸ್ತುತಿಗಳ ಶ್ಲೋಕಗಳನ್ನು ಪಠಿಸಿದರು. ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಪೀಠಾಧೀಶರಾದ ಶಂಕರಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಎಚ್. ವಿಶ್ವನಾಥ್, ಮಾಜಿ ಸಚಿವ ಎಸ್.ಎ. ರಾಮದಾಸ್, ಆರ್. ರಘು, ಎಚ್. ರಾಮಚಂದ್ರ ಮತ್ತಿತರರು ಇದ್ದರು.
'ದಯಮಾಡಿ ನಮ್ಮನ್ನು ನಕಲಿ ವೈದ್ಯರೆಂದು ಕರೆಯದಿರಿ'
ಮೈಸೂರು: ರಾಜ್ಯ ಸರ್ಕಾರವು ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ 2007 ಮತ್ತು 2009 ರಂತೆ ಖಾಸಗಿಯಾಗಿ ವೈದ್ಯಕೀಯ ವೃತ್ತಿ, ಚಿಕಿತ್ಸಾಲಯ, ಕ್ಲಿನಿಕ್ ಮತ್ತು ಆಸ್ಪತ್ರೆಗಳ ನೋಂದಣಿಗೆ ಚಾಲನೆ ನೀಡುವ ಭರದಲ್ಲಿ ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರನ್ನು ನಕಲಿ ವೈದ್ಯರು ಎಂದು ಕರೆಯುತ್ತಿರುವುದು ತಮಗೆ ತೀವ್ರ ನೋವಾಗಿದೆ ಎಂದು ವೈದ್ಯರ ಸಂಘ ಹೇಳಿದೆ. ರಾಜ್ಯದಲ್ಲಿ ಈ ಕಾಯಿದೆಯ ಜಾರಿಯಿಂದ 30- 40 ವರ್ಷಗಳಿಂದ ವೈದ್ಯಕೀಯ ಸೇವೆ ಮಾಡುತ್ತಿರುವ ಸಾವಿರಾರು ಆರ್ಎಂಪಿ (ರಿಜಿಸ್ಟರ್ ಮೆಡಿಕಲ್ ಪ್ರಾಕ್ಟೀಸ್), ಪಿಎಂಪಿ (ಪ್ರೈವೇಟ್ ಮೆಡಿಕಲ್ ಪ್ರಾಕ್ಟೀಸ್) ವೈದ್ಯರು, ನಾಟಿ ವೈದ್ಯ, ವಂಶ ಪಾರಂಪರಿಕ ವೈದ್ಯ, ಅನುಭವಿ ವೈದ್ಯರು ಕಾಯಿದೆಯಲ್ಲಿ ಉಲ್ಲೇಖಿಸಿರುವ ವಿಶ್ವ ವಿದ್ಯಾನಿಲಯಗಳ, ವೈದ್ಯಕೀಯ, ಆಯುಷ್, ಹೋಮಿಯೋಪಥಿ ಮಂಡಳಿಗಳ ವಿದ್ಯಾರ್ಹತೆ ಹೊಂದಿಲ್ಲದಿರುವುದಿಲ್ಲ. ಹೀಗಾಗಿ ಈ ಸೇವೆ ಮುಂದುವರಿಕೆಗೆ ಆತಂಕ ಎದುರಾಗಿದೆ ಎಂದು ಸಂಯೋಜಕ ಬಿ.ಎಸ್. ಚಂದ್ರು ತಿಳಿಸಿದರು.
ವಿಷವಾಗುತ್ತಿರುವ ಆಹಾರ: ಸಂತೋಷ ಕೌಲಗಿ ಆತಂಕ
ಮೈಸೂರು: ಪ್ರಸ್ತುತ ನಾವು ಸೇವಿಸುತ್ತಿರುವ ಪ್ರತಿ ಆಹಾರ ಪದಾರ್ಥವು ವಿಷಯುಕ್ತವಾಗಿದೆ ಎಂದು ಮೇಲುಕೋಟೆ ಜಾನಪದ ಸೇವಾ ಟ್ರಸ್ಟ್ನ ಕಾರ್ಯದರ್ಶಿ ಸಂತೋಷ ಕೌಲಗಿ ಆತಂಕ ವ್ಯಕ್ತಪಡಿಸಿದರು. ನಗರದ ಬೋಗಾದಿ 2ನೇ ಹಂತದಲ್ಲಿರುವ ಅಮೃತ ವಿದ್ಯಾಲಯಂ ಆಯೋಜಿಸಿರುವ ಆಹಾರಾಮೃತಂ- 2014 ವಸ್ತುಪ್ರದರ್ಶನ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ನಾಲ್ಕು ದಶಕಗಳ ಹಿಂದೆ ದೇಶದಲ್ಲಿ ಆಹಾರೋತ್ಪನ್ನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ಅದರಿಂದ ಆಹಾರ ಧಾನ್ಯಗಳನ್ನು ಉತ್ಪತ್ತಿ ಮಾಡುವುದರಲ್ಲಿ ಪೈಪೋಟಿ ಉಂಟಾಗಿ, ಆಹಾರದ ಪದಾರ್ಥಗಳ ಗುಣಮಟ್ಟ ಕಡಿಮೆ ಆಗಿದೆ. ಇದರ ಪರಿಣಾಮವಾಗಿ ಈಗಿನ ಆಹಾರವು ವಿಷಯುಕ್ತವಾಗಿದೆ ಎಂದು ಅವರು ತಿಳಿಸಿದರು. ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಡಾ.ಮಧುಮತಿ ಮಾತನಾಡಿ, ಶುದ್ಧ ಹಾಗೂ ಪೌಷ್ಟಿಕಾಂಶ ಇರುವ ಆಹಾರವನ್ನು ಸೇವಿಸಬೇಕು ಎಂದರು.
ಎಸ್ಸೆಸ್ಸೆಲ್ಸಿ ಎದುರಿಸುವುದು ಹೇಗೆ? ವಿಶೇಷ ತರಬೇತಿ
ಮೈಸೂರು: ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಹೇಗೆ ಎಂಬ ಬಗ್ಗೆ ಶುಕ್ರವಾರ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಕುರಿತು ತರಬೇತಿ ನೀಡಲಾಯಿತು. ದಕ್ಷಿಣ ವಲಯ ಬಿಇಒ ಕಚೇರಿ ವ್ಯಾಪ್ತಿಯ ಸುಮಾರು 8ಕ್ಕೂ ಹೆಚ್ಚು ಶಾಲೆಗಳಿಂದ 800ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಿದ್ದರು. ತರಬೇತುದಾರ ಚೇತನ್ರಾಮ್ ಅವರು ವಿದ್ಯಾರ್ಥಿಗಳಿಗೆ ಹೇಗೆ ಪರೀಕ್ಷೆಯನ್ನು ಎದುರಿಸಬೇಕು. ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರ ಬರೆಯುವುದು ಹೇಗೆ ಎಂಬ ಮಾಹಿತಿ ನೀಡಿದರು. ಅಶೋಕಪುರಂ ಪ್ರೌಢಶಾಲೆ, ಲಕ್ಷ್ಮೀಪುರಂ ಪ್ರೌಢಶಾಲೆ, ಕನಕಗಿರಿ ಪ್ರೌಢಶಾಲೆ, ಸಿದ್ಧಾರ್ಥ ಪ್ರೌಢಶಾಲೆ, ಅಶೋಕ ಪ್ರೌಢಶಾಲೆ, ಶಾರದಾವಿಲಾಸ ಪ್ರೌಢಶಾಲೆ, ವಾಣಿ ವಿದ್ಯಾಮಂದಿರ ಸೇರಿದಂತೆ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಈ ಶಿಬಿರದ ಪ್ರಯೋಜನ ಪಡೆದರು.
19 ರಂದು ಶಿವಾಜಿ ಜಯಂತಿ ಆಚರಣೆ ನಡೆಸಲು ಸಿದ್ಧತೆ
ಮೈಸೂರು: ಜಿಲ್ಲೆಯಲ್ಲಿ ಫೆ. 19 ರಂದು ಸಂಭ್ರಮ ಸಡಗರದಿಂದ ಅರ್ಥಪೂರ್ಣವಾಗಿ ಛತ್ರಪತಿ ಶಿವಾಜಿ ಜಯಂತಿಯನ್ನು ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ. ಶಿಖಾ ಹೇಳಿದರು. ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫೆ. 19ರ ಬೆಳಗ್ಗೆ 10ಕ್ಕೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದವರಗೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ಸಾಗಲಿದೆ. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಲಿವೆ ಎಂದರು. ಯಾವುದೇ ಲೋಪದೋಷ ಉಂಟಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಸಮಾರಂಭ ಏರ್ಪಡಿಸಬೇಕು. ಸಮಾರಂಭ ನಡೆಯುವ ಸ್ಥಳದಲ್ಲಿ ಸ್ವಚ್ಛತೆ ಶುದ್ಧ ಕುಡಿಯುವ ನೀರು ಹಾಗೂ ಆಸನಗಳ ವ್ಯವಸ್ಥೆ ಮಾಡುವಂತೆ ಮೈಸೂರು ನಗರಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿ
ಸಂಚಾರ ಜಾಗೃತಿಗಾಗಿ ಬುಲ್ ರೈಡರ್ಸ್ ಬುಲೆಟ್ ರ್ಯಾಲಿ
ಮೈಸೂರು: ಸಂಚಾರ ನಿಯಮ ಪಾಲನೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಲುವಾಗಿ ರಾಯಲ್ ಬುಲ್ ರೈಡರ್ಸ್ ಸಂಸ್ಥೆಯ ಸದಸ್ಯರು ಶನಿವಾರ ರಾಯಲ್ ಎನ್ಫೀಲ್ಡ್ ಬುಲೆಟ್ ರ್ಯಾಲಿ ಹಮ್ಮಿಕೊಂಡಿದ್ದರು. ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಈ ರ್ಯಾಲಿಗೆ ನಗರ ಸಂಚಾರ ಉಪ ವಿಭಾಗದ ಎಸಿಪಿ ಪ್ರಭಾಕರ ಬಿ. ಬಾರ್ಕಿ ಚಾಲನೆ ನೀಡಿದರು. ದ್ವಿಚಕ್ರವಾಹನ ಚಾಲನೆ ಮಾಡುವಾಗ ಐಎಸ್ಐ ಗುರುತಿನ ಹೆಲ್ಮೆಟ್ಗಳನ್ನು ಧರಿಸಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಸಂಚಾರ ನಿಯಮಗಳನ್ನು ಪಾಲಿಸಬೇಕೆಂಬ ಉದ್ದೇಶದಿಂದ ಈ ರ್ಯಾಲಿ ಹಮ್ಮಿಕೊಂಡಿರುವುದಾಗಿ ಸಂಸ್ಥೆಯ ಸಂತೋಷ್ ವಿಶ್ವನಾಥ್ ತಿಳಿಸಿದರು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾದ ರ್ಯಾಲಿಯು ಅಶೋಕ ರಸ್ತೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗನ್ಹೌಸ್ ಬಳಿ ಅಂತ್ಯಗೊಂಡಿತು.
'ಯುವ ಭಾರತ ಬ್ಯಾಂಕಿಂಗ್ ದಿಸೆ ಬದಲಾಯಿಸಲಿದೆ'
ಮೈಸೂರು: ಯುವ ಭಾರತ ಬ್ಯಾಂಕಿಂಗ್ ದಿಸೆಯನ್ನು ದೊಡ್ಡ ಮಟ್ಟದಲ್ಲಿ ಬದಲಾಯಿಸಲಿದೆ ಎಂದು ಐಸಿಐಸಿಐ ಬ್ಯಾಂಕಿನ ಮಾಜಿ ಮುಖ್ಯ ಕಾರ್ಯನಿರ್ವಾಹಕ, ಆಡಳಿತ ನಿರ್ದೇಶಕ ಕೆ.ವಿ. ಕಾಮತ್ ಹೇಳಿದರು. ಶುಕ್ರವಾರ ಕೆನರಾ ಬ್ಯಾಂಕ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಮಾರು 25 ಕೋಟಿ ಜನರು ಇಂದು ಇಂಟರ್ನೆಟ್ ಸಂಪರ್ಕ ಹೊಂದಿದ್ದಾರೆ. ಅವರಲ್ಲಿ 17.5 ಕೋಟಿ ಜನರು ಮೊಬೈಲ್ ಮೂಲಕ ಇಂಟರ್ನೆಟ್ ಬಳಸುತ್ತಾರೆ. ಬ್ಯಾಂಕಿಂಗ್ ಸೇವೆಗಾಗಿ ಶಾಖೆಗಳಿಗೆ ಬರುವವರ ಸಂಖ್ಯೆ ಕಡಿಮೆಯಾಗಲಿದ್ದು, ಮೊಬೈಲ್ ಮೂಲಕ ವ್ಯವಹಾರ ನಡೆಸಲಿದ್ದಾರೆ ಎಂದರು. ಅತಿ ಶೀಘ್ರದಲ್ಲಿ ಮೊಬೈಲ್ ತಾಂತ್ರಿಕತೆ ಮೂಲಕ ಗ್ರಾಹಕರು ನೇರವಾಗಿ ಚೆಕ್ ಟ್ರಂಕೇಷನ್ ಸೌಲಭ್ಯವನ್ನು ಬಳಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದೇ ರೀತಿ ಆರ್ಥಿಕ ಸೇರ್ಪಡೆ ಸದ್ಯಕ್ಕೆ ಬ್ಯಾಂಕುಗಳಿಗೆ ಸವಾಲಾಗಿ ಪರಿಣಮಿಸಲಿದೆ. ಮುಂಬರುವ ದಿನಗಳಲ್ಲಿ ಅದರ ಪ್ರಯೋಜನ ಬ್ಯಾಂಕುಗಳಿಗೆ ಒದಗಲಿದೆ ಎಂದು ತಿಳಿಸಿದರು.
'ನರ್ಮ್ನಿಂದ ನಗರಕ್ಕೆ ಸದುಪಯೋಗವಾಗಿಲ್ಲ'
ಮೈಸೂರು: ಮಾದರಿ ಮೈಸೂರು ನಗರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಮಹಾಸಂಸ್ಥೆ ಹಾಗೂ ಎಂಸಿಸಿಐನಿಂದ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಎಫ್ಕೆಸಿಸಿಐ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ, ಎಂಸಿಸಿಐ ಅಧ್ಯಕ್ಷ ಎ.ಎಸ್. ಸತೀಶ್ ಮತ್ತಿತರರು, ನಗರದ ನೀರಿನ ಸಮಸ್ಯೆ, ಕಸ ವಿಲೇವಾರಿ ಸಮಸ್ಯೆ, ಒಳಚರಂಡಿ ಸಮಸ್ಯೆ, ನಗರದ ರಸ್ತೆಗಳ ಜೋಡಣೆಯ ಸಮಸ್ಯೆಗಳು ಬೃಹದಾಕಾರವಾಗಿವೆ. ಎಲ್ಲೋ ಒಂದು ರೀತಿಯಲ್ಲಿ ಕೆಲಸದ ಅರಿವು ಇಲ್ಲದೆ ಇರುವವರು ಮಾಡಿದಂತೆ ಇದೆ. ಈ ಹಿಂದೆ ಎಡಿಬಿ ಬ್ಯಾಂಕ್ 1 ರಿಂದ 130 ಕೋಟಿ ವ್ಯಯವಾಗಿದೆ ಎಂದರು.
ವಿದ್ಯುತ್ ಉಳಿತಾಯಕ್ಕೆ ಸಂದೇಶ್ ಸ್ವಾಮಿ ಸಲಹೆ
ಮೈಸೂರು: ವೆಬ್ ಬೇಸ್ಡ್ ವ್ಯವಸ್ಥೆ ಅಳವಡಿಸಿ, ಬೀದಿ ದೀಪಗಳನ್ನು ನಿರ್ವಹಿಸುವ ಮೂಲಕ ವಿದ್ಯುತ್ ಉಳಿತಾಯ ಮಾಡಬೇಕು ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ಗೆ ಸಲಹೆ ನೀಡಿದ್ದಾರೆ. ಹಾಲಿ ಗುತ್ತಿಗೆ ವಹಿಸಿಕೊಂಡಿರುವವರು ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಆದ್ದರಿಂದ ಬಹಳಷ್ಟು ಕಡೆ ಹಗಲು ವೇಳೆಯಲ್ಲಿಯೆ ಬೀದಿ ದೀಪಗಳು ಉರಿಯುತ್ತಿರುತ್ತದೆ. ಇಂಧನ ಉಳಿತಾಯ ಮಾಡುವ ಬಲ್ಪ್ಗಳನ್ನು ಎಲ್ಲೆಡೆ ಬಳಸಬೇಕು, ಮಧ್ಯರಾತ್ರಿಯಲ್ಲಿ ಡಿಮ್ಮರ್ಗಳನ್ನು ಅಳವಡಿಸಬಹುದು, ಸೋಲಾರ್ ವಿದ್ಯುತ್ ದೀಪ ಅಳವಡಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಏಕರೂಪತೆ ತರುವ ನಿಟ್ಟಿನಲ್ಲಿ ಬೀದಿ ದೀಪ ಅಳವಡಿಸಬಹುದು. ರಸ್ತೆಯ ಅಳತೆ, ರಸ್ತೆಗೆ ಬೇಕಾದ ಬೆಳಕು 40 ವ್ಯಾಟ್, 60 ವ್ಯಾಟ್ ಬೀದಿ ದೀಪಗಳನ್ನು ವೈಜ್ಞಾನಿಕವಾಗಿ ಅಳವಡಿಸಬೇಕು ಎಂದರು.
ಆಧುನಿಕ ಬೇಸಾಯ ಪದ್ಧತಿ ಅನುಸರಿಸಲು ರೈತರಿಗೆ ಕರೆ
ಮೈಸೂರು: ಆಧುನಿಕ ಬೇಸಾಯ ಪದ್ಧತಿ ಅನುಸರಿಸುವ ಮೂಲಕ ನೀರು ಮತ್ತು ರಸಗೊಬ್ಬರದ ಸಮತೋಲನ ಕಾಯ್ದುಕೊಂಡು ನೀರನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚು ಆದಾಯ ಬರುವ ಬೆಳೆ ಬೆಳೆಯುವಂತೆ ಕಬಿನಿ ಯೋಜನಾ ಮಟ್ಟದ ಮಹಾ ಮಂಡಳದ ಅಧ್ಯಕ್ಷ ಗುರುಮೂರ್ತಿ ಹೇಳಿದರು. ಸಂತೇಮರಹಳ್ಳಿ ಕಾಡಾ ಉಪ ವಿಭಾಗದ ವತಿಯಿಂದ ಚಾಮರಾಜನಗರ ತಾಲೂಕಿನ ಬಾಣಹಳ್ಳಿಯಲ್ಲಿ ಆಯೋಜಿಸಿದ್ದ ಒಂದು ದಿನದ ಸಂಚಾರಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು .ನೀರಿನ ಸದ್ಬಳಕೆ ಮಾಡಿಕೊಂಡು ಹೆಚ್ಚು ಆದಾಯ ಬರುವ ಬೆಳೆಗಳನ್ನು ಬೆಳೆಯಬೇಕು. ಅದಕ್ಕಾಗಿ ರೈತರು ಆಧುನಿಕ ಬೇಸಾಯ ಪದ್ಧತಿ ಅನುಸರಿಸಬೇಕು ಎಂದು ಕರೆ ನೀಡಿದರು. ಎಚ್.ಎಂ. ಹೊಂಬಯ್ಯ ಮಾತನಾಡಿ, ರೈತರು ಪೂರ್ಣ ಪ್ರಮಾಣದಲ್ಲಿ ತಾಂತ್ರಿಕತೆ ಅಳವಡಿಸಿಕೊಂಡು ಸುಧಾರಿತ ತಳಿಗಳನ್ನು ಆಯ್ಕೆ ಮಾಡಿಕೊಂಡು, ಮಣ್ಣಿನ ರಚನೆ ವ್ಯತ್ಯಾಸವಾಗಿ ಇಳುವರಿ ಪ್ರಮಾಣ ಕಡಿಮೆ ಆಗುತ್ತಿದೆ ಎಂದರು.
ಸಂಭಾಜಿ ಪ್ರತಿಕೃತಿ ದಹಿಸಿ ಕರವೇ ಪ್ರತಿಭಟನೆ
ಮೈಸೂರು: ಬೆಳಗಾವಿಯ ಎಂಇಎಸ್ ಶಾಸಕ ಸಾಂಭಾಜಿ ಪಾಟೀಲ್ ಅವರ ಕನ್ನಡ ವಿರೋಧಿ ಧೋರಣೆ ಹಾಗೂ ಮಟ್ಕಾ ದಂಧೆ ನಡೆಸುತ್ತಿರುವುದನ್ನು ಖಂಡಿಸಿ ಅವರ ಪ್ರತಿಕೃತಿ ದಹಿಸುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ನಗರದ ರಾಮಸ್ವಾಮಿ ವೃತ್ತದಲ್ಲಿ ಶನಿವಾರ ಪ್ರತಿಭಟಿಸಿದರು. ಸಾಂಭಾಜಿ ಪಾಟೀಲ್ ಅವರು ಕರ್ನಾಟದ ಬೆಳಗಾವಿ ಕ್ಷೇತ್ರದಿಂದ ಆಯ್ಕೆಯಾಗಿ ಈ ನಿಟ್ಟಿನಲ್ಲಿ ಕರ್ನಾಟಕಕ್ಕೆ ಅವಮಾನ ಮಾಡುತ್ತಿದ್ದಾರೆ. ಅಲ್ಲದೆ, ಮಟ್ಕಾ ದಂಧೆ ಸೇರಿದಂತೆ ಇನ್ನಿತರ ಕೆಟ್ಟ ಕೆಲಸ ಮಾಡುತ್ತಿದ್ದಾರೆ. ಸಂಭಾಜಿ ಪಾಟೀಲ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
'ಉನ್ನತ ಶಿಕ್ಷಣದಿಂದ ಮಾತ್ರ ಮಹಿಳೆಯರ ಸಬಲೀಕರಣ'
ಮೈಸೂರು: ಮಹಿಳೆಯರು ಸಮಾಜದಲ್ಲಿ ಸಬಲರಾಗಬೇಕಾದರೆ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಾಗಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಹೇಳಿದರು. ನಗರದ ಎಂಎಂಕೆ ಮತ್ತು ಎಸ್ಡಿಎಂ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಪದವಿ ಪಡೆಯುವವರ ಸಂಖ್ಯೆ ಮಾತ್ರ ಹೆಚ್ಚಾಗುತ್ತಿದೆ. ಆದರೆ, ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿಲ್ಲ. ಯುಜಿಸಿ ಹೊಂದಿರುವ ಗುರಿ ತಲುಪಬೇಕಾದರೆ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ದ್ವಿಗುಣ ಆಗಬೇಕಿದೆ. ಸಮಾಜದಲ್ಲಿ ಮಹಿಳೆಯರು, ಯುವತಿಯರು, ಬಾಲಕಿಯರು ಅತ್ಯಾಚಾರ ಸೇರಿದಂತೆ ವಿವಿಧ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಮಹಿಳೆಯರು ಉನ್ನತ ಶಿಕ್ಷಣ ಪಡೆಯುವ ಮೂಲಕ ಸಮಾಜದಲ್ಲಿ ಸದೃಢರಾಗಬೇಕು. ಈ ಮೂಲಕ ಮಹಿಳೆಯರು ತಾವೇ ರಕ್ಷಿಸಿಕೊಳ್ಳುವಂತಾಗಬೇಕು ಎಂದರು.
ಟೆರಿಷಿಯನ್ ಶಾಲೆಯಲ್ಲಿ ಎಕ್ಸಪೊ ಕಾರ್ಯಕ್ರಮ
ಮೈಸೂರು: ಸಿದ್ಧಾರ್ಥ ಬಡಾವಣೆಯ ಟೆರಿಷಿಯನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಎಕ್ಸಪೊ- 2014 ಕಾರ್ಯಕ್ರಮವನ್ನು ಇನ್ಸ್ಪೆಕ್ಟರ್ ಪೂವಯ್ಯ ಶುಕ್ರವಾರ ಉದ್ಘಾಟಿಸಿದರು. ಮಕ್ಕಳ ಕಲ್ಪನಾ ಶಕ್ತಿ ಅದ್ಭುತವಾಗಿದ್ದು ಅವರಲ್ಲಿರುವ ಪ್ರತಿಭೆ ಹೊರಹಾಕಲು ಇಂತಹ ವಸ್ತು ಪ್ರದರ್ಶನಗಳು ಅವಶ್ಯಕ ಎಂದರು. ಟೆರಿಷಿಯನ್ ಶಾಲೆಯ ಎಲ್ಕೆಜಿಯಿಂದ ಹಿಡಿದು ಏಳನೇ ತರಗತಿಯವರೆಗೆ ಭಾಷೆ, ಗಣಿತ, ಸಮಾಜ, ವಿಜ್ಞಾನ, ಯೋಗ, ಸೌರಶಕ್ತಿ, ಸ್ವಾತಂತ್ರ್ಯ ಯೋಧರ ಟ್ಯಾಬ್ಲೊ, ಜನಪದ, ಹೀಗೆ ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಅಧ್ಭುತ ಕಲಾಜ್ಞಾನ ಶಕ್ತಿಯ ವಿವಿಧ ವಸ್ತುಗಳನ್ನು ತಯಾರಿಸಿ ಎಲ್ಲರಿಗೂ ವಿವರಿಸುವಾಗ ಮಕ್ಕಳಲ್ಲಿ ಸಂಭ್ರಮ ಎದ್ದು ಕಾಣುತ್ತಿತ್ತು. ಹಿರಿಯ ವಿದ್ಯಾರ್ಥಿ ರಾಜು ಅತಿಥಿಯಾಗಿದ್ದರು. ಮುಖ್ಯ ಶಿಕ್ಷಕಿ ಲೆವೀನಾ ಸ್ವಾಗತಿಸಿದರು. ಶಿಕ್ಷಕಿ ಮರ್ಸಿ ವಂದಿಸಿದರು.
ಚಿತ್ರಕಲಾ ಸ್ಪರ್ಧೆ ಬಹುಮಾನ ವಿಜೇತರು
ಮೈಸೂರು: ಸರ್ಕಾರಿ ಹಾಗೂ ಖಾಸಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಲಾರ್ಸನ್ ಅಂಡ್ ಟೊಬ್ರೋ ನಡೆಸಿದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಒಂಟಿಕೊಪ್ಪಲಿನ ಚೆಲುವಾಂಬ ಉದ್ಯಾನವನದಲ್ಲಿ ಸುಷ್ಮಾ ಮುಖಿಜಾ ಸ್ಮರಣಾರ್ಥ ಶುಕ್ರವಾರ ಏರ್ಪಡಿಸಿದ್ದ ಮೂರನೇ ವರ್ಷದ ಈ ಸ್ಪರ್ಧೆಯ 8ನೇ ತರಗತಿ ವಿಭಾಗದಲ್ಲಿ ಸಿಎಫ್ಟಿಆರ್ಐ ಶಾಲೆಯ ಯಶಸ್ವಿನಿ ಪ್ರಥಮ, ಕೌಟಿಲ್ಯದ ರಿಯಾ ದ್ವಿತೀಯ ಹಾಗೂ ಸಿಎಫ್ಟಿಆರ್ಐನ ನಿಧಿ ತೃತೀಯ ಬಹುಮಾನ ಪಡೆದರು. 9 ನೇ ತರಗತಿ ವಿಭಾಗದಲ್ಲಿ ವಿಜಯವಿಠಲ ಶಾಲೆಯ ಅನುಷಾ ಪ್ರಥಮ, ಮನೋಜ್ಞ ದ್ವಿತೀಯ ಹಾಗೂ ಸದ್ವಿದ್ಯಾದ ಶ್ರೀವತ್ಸ ತೃತೀಯ ಬಹುಮಾನ, 10 ನೇ ತರಗತಿ ವಿಭಾಗದಲ್ಲಿ ರೋಟರಿ ಪಶ್ಚಿಮ ಶಾಲೆಯ ಎನ್. ವಿಜಯಕುಮಾರ್ ಪ್ರಥಮ, ಸಿಕೆಸಿಯ ದಿಕ್ಷಾ ಅರಸ್ ದ್ವಿತೀಯ ಹಾಗೂ ರೋಟರಿ ಪಶ್ಚಿಮದ ಡಿ. ಹೇಮಂತರಾಜ್ ತೃತೀಯ ಬಹುಮಾನ ಪಡೆದರು.