ರಾಜ್ಯದ ಮಕ್ಕಳಲ್ಲಿ ಅಪೌಷ್ಟಿಕತೆ ಇಳಿಮುಖ: ಸಚಿವ ರತ್ನಾಕರ
ಸುತ್ತೂರು: ರಾಜ್ಯದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಇಳಿಮುಖವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು. ನಂಜನಗೂಡು ತಾಲೂಕಿನ ಸುತ್ತೂರು ಶ್ರೀಕ್ಷೇತ್ರದ ಗದ್ದುಗೆ ಅವರಣದಲ್ಲಿ ಶನಿವಾರ ಏರ್ಪಡಿಸಿದ್ದ ಜೆಎಸ್‌ಎಸ್ ವಸತಿ ಪ್ರೌಢಶಾಲೆಯ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಶೇ. 40 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು ರು.400 ಕೋಟಿ ವೆಚ್ಚದಲ್ಲಿ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು. ಇದರಿಂದಾಗಿ 22- 23 ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಪ್ರಮಾಣ ಕಡಿಮೆಯಾಗಿದೆ. ಇದರಲ್ಲಿ ಮೈಸೂರು ಜಿಲ್ಲೆಯು ಸೇರಿದೆ ಎಂದರು.
ಹಸಿವು ನೀಗಿಸುವುದು ಸರ್ಕಾರ ಹಾಗೂ ಸಮಾಜದ ಆದ್ಯ ಕರ್ತವ್ಯ. ಯಾರೂ ಹಸಿವಿನಿಂದ ಬಳಲಬಾರದು. ಇಂತಹ ಅವ್ಯವಸ್ಥೆ ಹೋಗಲಾಡಿಸಿ ಬದಲಾವಣೆ ತರಲು ಲಕ್ಷಾಂತರ ಜನರಾಗಲಿ ಅಥವಾ ಕೋಟ್ಯಂತರ ಜನರಾಗಲಿ ಅಗತ್ಯವಿಲ್ಲ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರಂತ ಒಬ್ಬೊಬ್ಬರು ಸಾಕು. ಇಂದಿನ ವ್ಯವಸ್ಥೆ ಬದಲಾವಣೆಗೆ ಮತ್ತೊಬ್ಬ ಗಾಂಧಿ ಹುಟ್ಟಿಬರಬೇಕು ಎಂದು ಅವರು ಹೇಳಿದರು.
ಶಿಕ್ಷಣದಿಂದ ಬದಲಾವಣೆ: ಈ ಹಿಂದೆ ಶೇ. 20 ರಷ್ಟು ವಿದ್ಯಾವಂತರಿದ್ದಾಗ ಸಮಾಜ ಸುಧಾರಣೆಯಾಗಿತ್ತು. ಅನಕ್ಷರಸ್ಥರು ಸಹ ಪ್ರಾಮಾಣಿಕತೆಗೆ ಒತ್ತು ನೀಡುತ್ತಿದ್ದರು. ಆದರೆ ಇಂದು ಸುಶಿಕ್ಷಿತರು ಹೆಚ್ಚಾದರೂ ಸಮಾಜದಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಸ್ಥೆ ತಪ್ಪಿಲ್ಲ. ಇಂದಿನ ವ್ಯವಸ್ಥೆಯ ಬದಲಾವಣೆ ಗುಣಮಟ್ಟದ ಶಿಕ್ಷಣದಿಂದ ಸಾಧ್ಯ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗಗಳಲ್ಲಿ ಕಾರ್ಯ ನಿರ್ವಹಿಸುವವರು ವಿದ್ಯಾವಂತರೇ ಆಗಿರುವುದರಿಂದ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು. 1ನೇ ತರಗತಿಯಿಂದ 12 ನೇ ತರಗತಿಯವರೆಗೆ ಸುಮಾರು 1 ಕೋಟಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ಉತ್ತಮ ಹಾಗೂ ಗುಣಮಟ್ಟದ ಉಚಿತ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಈ ದಿಸೆಯಲ್ಲಿ ಸರ್ಕಾರದ ಭಾಗವಾಗಿ ಸುತ್ತೂರು ಶ್ರೀಮಠವು ಶೈಕ್ಷಣಿಕ ಕಾರ್ಯಕ್ರಮದಲ್ಲಿ ಕೈಜೋಡಿಸಿ ಸಮಾಜದ ಎಲ್ಲಾ ಮಕ್ಕಳಿಗೂ ಉಚಿತ ವಿದ್ಯೆ ನೀಡುವಲ್ಲಿ ಮುಂದಾಗಿರುವುದು ಮಾದರಿ ಕಾರ್ಯ ಎಂದು ಅವರು ಪ್ರಶಂಸಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಸುತ್ತೂರು ಸಿರಿ ಶಾಲಾ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿದರು.
ಶಾಲೆ ನಡೆದು ಬಂದ ಹಾದಿ ಚಿತ್ರ ಪ್ರದರ್ಶನ ಉದ್ಘಾಟಿಸಿದ ಮಾಜಿ ಸಚಿವ ಬಿ. ಸೋಮಶೇಖರ್, ಶಾಲಾ ಪರಿಚಯ ಪತ್ರ ಬಿಡುಗಡೆಗೊಳಿಸಿದರು.
ಮಾಜಿ ಸಚಿವ ಬಸವರಾಜ ಹೊರಟ್ಟಿ, ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿದರು. ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಸುವರ್ಣ ಮಹೋತ್ಸವ ಲಾಂಛನ ಬಿಡುಗಡೆಗೊಳಿಸಿದರು. ಮಾಜಿ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ಸುತ್ತೂರು ಶಾಲಾ ವೆಬ್‌ಸೈಟ್ ಚಾಲನೆಗೊಳಿಸಿದರು. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಿಕ್ಷಕರಾದ ಅಂದಯ್ಯ ಶಿರೂರಮಠ ಸ್ವಾಗತಿಸಿದರು. ನಿರ್ಮಲಾ ನಿರೂಪಿಸಿದರು. ಸಿದ್ದಪ್ಪ ವಂದಿಸಿದರು. ಆರಂಭದಲ್ಲಿ ಶಾಲಾ ಮಕ್ಕಳು ವಚನ ಗಾಯನ ನಡೆಸಿಕೊಟ್ಟರು.
'ಜನರ ಕಲ್ಯಾಣ ಶ್ರೀಮಠದ ಆಶಯ'
ಮೈಸೂರು: ಲೋಕ ಕಲ್ಯಾಣ ಹಾಗೂ ಜನರ ಕಲ್ಯಾಣ ಸುತ್ತೂರು ಶ್ರೀಮಠದ ಆಶಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು. ಸುತ್ತೂರು ಶ್ರೀಕ್ಷೇತ್ರದಲ್ಲಿ ಶನಿವಾರ ಏರ್ಪಡಿಸಿದ್ದ ಜೆಎಸ್‌ಎಸ್ ವಸತಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರೀಮಠಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಆಗಿನ ಶ್ರೀಗಳು ಎಲ್ಲಾ ಜನರ ಕಲ್ಯಾಣಕ್ಕಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ಶ್ರೀಮಠ ಸ್ಥಾಪಿಸಿದರು ಎಂದರು. ಆರ್‌ಟಿಇ ಕಾಯ್ದೆ ಬರುವ ಮುನ್ನವೇ ಮಠಗಳು ಶಿಕ್ಷಣದಲ್ಲಿ ಬಹುದೊಡ್ಡ ಕಾಂತ್ರಿ ಮಾಡಿವೆ. ಅನ್ನ ದಾಸೋಹ ಹಾಗೂ ಅಕ್ಷರ ದಾಸೋಹ ನಡೆಸುವ ಮೂಲಕ ಸಮಾಜದ ಪರಿವರ್ತನೆಗೆ ಅಪಾರ ಕೊಡುಗೆ ನೀಡಿವೆ ಎಂದರು.
ಪಂಚ ಪಾಂಡವರು...
ಶ್ರೀಕ್ಷೇತ್ರದಲ್ಲಿ ಶನಿವಾರ ನಡೆದ ಜೆಎಸ್‌ಎಸ್ ವಸತಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಈಗಿನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ ಸೇರಿದಂತೆ ಐದು ಮಂದಿ ಮಾಜಿ ಶಿಕ್ಷಣ ಸಚಿವರು ಒಂದೇ ವೇದಿಕೆಯಲ್ಲಿ ಭಾಗವಹಿಸಿದ್ದು ವಿಶೇಷ. ಈ ಹಿಂದಿನ ಸರ್ಕಾರಗಳಲ್ಲಿ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದ ವಿವಿಧ ಪಕ್ಷಗಳ ವಿಶ್ವೇಶ್ವರಹೆಗಡೆ ಕಾಗೇರಿ, ಬಸವರಾಜ ಹೊರಟ್ಟಿ, ಪ್ರೊ. ಬಿ.ಕೆ. ಚಂದ್ರಶೇಖರ್ ಹಾಗೂ ಬಿ. ಸೋಮಶೇಖರ್ ಭಾಗವಹಿಸಿದ್ದರು. ಇದನ್ನು ಗಮನಿಸಿದ ಸಚಿವ ವಿ.ಶ್ರೀನಿವಾಸಪ್ರಸಾದ್, ಇಂದಿನ ಶಿಕ್ಷಣ ಸಚಿವರೊಂದಿಗೆ ಮಾಜಿ ಶಿಕ್ಷಣ ಸಚಿವರು ಭಾಗವಹಿಸಿದ್ದು, ಈ ಐದು ಮಂದಿಯನ್ನು ನೋಡಿದರೆ ಪಂಚ ಪಾಂಡವರು ಎನ್ನಿಸುತ್ತಿದೆ ಎಂದರು. ಮುಂದುವರೆದು ಮಾತನಾಡಿದ ಅವರು, ಇನ್ನೂ ಇಬ್ಬರು ಮಾಜಿ ಶಿಕ್ಷಣ ಸಚಿವರಾದ ಎಚ್. ವಿಶ್ವನಾಥ್ ಹಾಗೂ ಎಂ. ರಘುಪತಿ ಬರಬೇಕಿತ್ತು ಎಂದರು.