ಬಂಡಾಯ ಸಾಹಿತ್ಯ ಬೆಳೆಸಿದ ಜಿಎಸ್ಎಸ್
ಮೈಸೂರು: ಬಂಡಾಯ ಮತ್ತು ದಲಿತ ಸಾಹಿತ್ಯವನ್ನು ಬೆಳೆಸಿದ ಕೀರ್ತಿ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರಿಗೆ ಸಲ್ಲುತ್ತದೆ ಎಂದು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಕುಲಸಚಿವ ಡಾ.ಎಂ.ಎಸ್. ಶೇಖರ್ ಹೇಳಿದರು.
ಮಹಾರಾಜ ಕಾಲೇಜಿನ ಸ್ನಾತಕ ಗ್ರಂಥಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಜಿ.ಎಸ್. ಶಿವರುದ್ರಪ್ಪ ಸಂಸ್ಮರಣೆ ಹಾಗೂ ಪುಸ್ತಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಎಸ್ಎಸ್ ಪ್ರತ್ಯೇಕ ಜಾತಿ ಆಚರಣೆಯ ಮೂಲಕ ಸಂಸ್ಕಾರವನ್ನು ಮಾಡಬೇಡಿ ಎಂಬ ಮಹತ್ ಸಂದೇಶವನ್ನು ನೀಡಿ ವಿಶೇಷ ಮೆರೆದರು. ಅವರು ದಲಿತ ಸಾಹಿತಿಗಳು, ಕವಿಗಳನ್ನು ಬೆಳೆಸಿ ವಿಶೇಷ ಕೊಡುಗೆ ನೀಡಿದರು. ಕುವೆಂಪು ಅವರ ನೆಚ್ಚಿನ ಶಿಷ್ಯರಾಗಿದ್ದ ಶಿವರುದ್ರಪ್ಪ ಗುರುವಿನಂತೆಯೇ ವಿಶ್ವಮಾನವ ತತ್ವವನ್ನು ಸಮಾಜಕ್ಕೆ ಬೋಧಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಎಂ. ಗೋವಿಂದೇಗೌಡ, ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಚ್. ನಂಜೇಗೌಡ, ಮಹಾರಾಜ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ತಿಮ್ಮಯ್ಯ, ಪುಸ್ತಕಪ್ರೀತಿ ಮಾಸಿಕ ವಿಶೇಷ ಉಪನ್ಯಾಸ ಮಾಲಿಕೆ ಸಂಚಾಲಕ ಡಾ.ಸಿ.ಡಿ. ಪರಶುರಾಮ, ಸ್ನಾತಕ ಗ್ರಂಥಾಲಯದ ಉಪ ಗ್ರಂಥಪಾಲಕ ಆರ್.ಕೆ. ಸೋಮಶೇಖರ್ ಭಾಗವಹಿಸಿದ್ದರು.