ಬಾಳೆಲೆಗೀಗ ಭಾರಿ ಬೆಲೆ
ಮೈಸೂರು: ಧನುರ್ಮಾಸ ಕಳೆದು ಸಂಕ್ರಾಂತಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಿದ ಜನರು ಇದೀಗ ಮದುವೆ ಸಮಾರಂಭಗಳತ್ತ ಹೊರಳುತ್ತಿರುವಾಗಲೇ ಬಾಳೆ ಎಲೆ ದರ ಎಂಟು ಪಟ್ಟು ಹೆಚ್ಚಾಗಿದ್ದು, ಮದುವೆ ಮನೆಗಳಿಗೆ ಇದರ ಬಿಸಿ ತಗುಲಿದೆ.
ಒಂದು ವಾರದ ಹಿಂದೆ ಅಗ್ರ ಎಲೆ (ತುದಿ ಎಲೆ)ಗೆ 1.40 ಇದ್ದ ದರ ಒಂದೆರಡು ದಿನಗಳಲ್ಲಿಯೇ ಎಂಟು ಪಟ್ಟು ಹೆಚ್ಚಾಗಿದೆ. ಅಂದರೆ ಒಂದು ಬಾಳೆ ಎಲೆಗೆ 6ರಿಂದ 10 ನೀಡಿ ಖರೀದಿಸುವ ದುಸ್ಥಿತಿ ಗ್ರಾಹಕರಿಗೆ ಒದಗಿದೆ. ಈ ಬೆಲೆ ಏರಿಕೆ ಕೇವಲ ಗ್ರಾಹಕರಿಗಲ್ಲದೆ ವ್ಯಾಪಾರಸ್ಥರಿಗೂ ತಗುಲಿದ್ದು, ಕಡಿಮೆ ಬೆಲೆಗೆ ಪೂರೈಸಲು ಒಪ್ಪಿಕೊಂಡವರು ಅದೇ ಬೆಲೆಗೆ ನೀಡಲು ಪರದಾಡುತ್ತಿದ್ದಾರೆ. ಈ ನಡುವೆ ಬಾಳೆ ಬೆಳೆಯುವ ರೈತರು ಎಲೆಗಳನ್ನು ನೀಡದೆ, ಇನ್ನೂ ಉತ್ತಮ ಬೆಲೆ ಬಂದಲ್ಲಿ ಕೊಡುವುದಾಗಿ ತಿಳಿಸುತ್ತಿದ್ದಾರೆ.
ಯಾಕೀ ಬಿಸಿ?: ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಮೈಸೂರು ಸುತ್ತಮುತ್ತಲಿನ ಟಿ. ನರಸೀಪುರ, ಪಾಂಡವಪುರ, ಶ್ರೀರಂಗಪಟ್ಟಣ, ಎಚ್.ಡಿ. ಕೋಟೆ, ನಂಜನಗೂಡು ಕಡೆಗಳಿಂದ ನಗರಕ್ಕೆ ಬಾಳೆ ಎಲೆಯನ್ನು ಪೂರೈಸಲಾಗುತ್ತಿತ್ತು. ತಮಿಳುನಾಡಿನಲ್ಲಿ ಮಳೆ ಕಡಿಮೆಯಾದ್ದರಿಂದ ಫಸಲು ಕೈಕೊಟ್ಟಿದೆ. ಅದೇ ರೀತಿ ಟಿ. ನರಸೀಪುರಕ್ಕೆ ಈ ಬಾರಿ ಕಡಿಮೆ ಮಳೆಯಾಗಿ, ಬರ ತಾಲೂಕುಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಇದಕ್ಕೆ ಕಾರಣವಾಗಿದೆ. ಅಲ್ಲದೇ ಆಷಾಢ, ಧನುರ್ಮಾಸದ ಸಂದರ್ಭದಲ್ಲಿ ಬೆಳೆ ಇದ್ದರೂ ಬಾಳೆ ಎಲೆಗೆ ಬೇಡಿಕೆ ಕಡಿಮೆ ಇರುತ್ತದೆ.
ನಗರದ ದೇವರಾಜ ಮಾರುಕಟ್ಟೆಯಲ್ಲಿ ದಾಖಲಾದ ವ್ಯಾಪಾರದ ಪ್ರಕಾರ ಫೆ.4ರಂದು ಒಂದು ಅಗ್ರ ಬಾಳೆ ಎಲೆಗೆ 1.60, ಫೆ.8ರಂದು 6 , ಫೆ. 9ರಂದು 10ಕ್ಕೆ ಏರಿಕೆಯಾಗಿದೆ. ಈ ಮಾಹಿತಿ ತಿಳಿದ ಬಾಳೆ ಬೆಳೆಗಾರರು ಮಾರುಕಟ್ಟೆಗೆ ನಿಗದಿತ ಸಮಯಕ್ಕೆ ಪೂರೈಸಿಲ್ಲ. ಹೆಚ್ಚು ಬೇಡಿಕೆ ಬಂದಲ್ಲಿ ನೀಡುವುದು ಅವರ ಉದ್ದೇಶ. ಈಗ ನಾವು ಆರ್ಡರ್ ಒಪ್ಪಿಕೊಂಡವರಿಗೆ ಯಾವ ಬೆಲೆಗೆ ನೀಡುವುದು, ರೈತರಿಂದ ಎಷ್ಟು ಬೆಲೆಗೆ ಖರೀದಿಸುವುದು ಎಂಬುದು ತಿಳಿಯದಾಗಿದೆ. ನಿನ್ನೆಯಿಂದ ನಮಗೆ ಎಲೆಗಳು ಬಂದಿಲ್ಲ ಎಂದು ವ್ಯಾಪಾರಿ ರಾಜು ಕನ್ನಡಪ್ರಭಕ್ಕೆ ತಿಳಿಸಿದರು.
ಬೆಂಗಳೂರಿನಿಂದ ಇಲ್ಲಿಗೆ: ಮೈಸೂರಿನಲ್ಲಿ ಸಮಸ್ಥಿತಿಯಲ್ಲಿ ನಡೆಯುತ್ತಿದ್ದ ಬಾಳೆ ಎಲೆ ವ್ಯಾಪಾರಕ್ಕೆ ತಣ್ಣೀರು ಎರಚಿದವರೆಂದರೆ ಬೆಂಗಳೂರಿನ ವ್ಯಾಪಾರಿಗಳು. ಬೆಂಗಳೂರಿಗೆ ಎಲೆಗಳು ಹೋಗದಿದ್ದರಿಂದ ಅವರು ಮೈಸೂರಿನತ್ತ ಮುಖ ಮಾಡಿ ಖರೀದಿಸಿದರು. ಇಲ್ಲಿ ಹೆಚ್ಚಿನ ಬೇಡಿಕೆ ಉಂಟಾದಾಗ ಇಲ್ಲಿಯೂ ದರವನ್ನು ಏರಿಸಲಾಯಿತು. ಒಟ್ಟಾರೆಯಾಗಿ ಗ್ರಾಹಕರು ಚಿಂತಿಸುವಂತಾಯಿತು.
ಬೆಂಗಳೂರಿನಲ್ಲಿ 2ಕ್ಕೆ ಒಪ್ಪಿಕೊಂಡು ಆರ್ಡರ್ ಪಡೆದಿದ್ದೇವೆ. ಆದರೆ, ಅಲ್ಲಿಗೆ ಬಾಳೆ ಎಲೆ ಬರುತ್ತಿಲ್ಲ. ಮೈಸೂರಿನಿಂದ ತೆಗೆದುಕೊಂಡು ಹೋಗಲು ಬಂದಿದ್ದೇವೆ. ಇಲ್ಲಿಯೂ ಬಾಳೆ ಎಲೆಗೆ ಕೊರತೆ ಉಂಟಾಗಿದ್ದು, ದುಪ್ಪಟ್ಟು ಬೆಲೆ ನಿಗದಿಯಾಗಿದೆ.
ಸಲೀಂ, ಬೆಂಗಳೂರಿನ ವ್ಯಾಪಾರಿ.
ನಮ್ಮಲ್ಲಿ ಹೆಚ್ಚು ಮಳೆಯಾಗಿಲ್ಲ. ಈ ಬಾರಿ ಫಸಲು ಕೈಕೊಟ್ಟಿದ್ದರಿಂದ ಬಾಳೆ ಬರುತ್ತಿಲ್ಲ. ಬೇಡಿಕೆ ಬರುತ್ತಿದ್ದರೂ ಪೂರೈಸಲು ಸಾಧ್ಯವಾಗುತ್ತಿಲ್ಲ.
ರಾಜೇಂದ್ರ, ರೈತ, ಕೆಂಪಯ್ಯನಹುಂಡಿ
- ಜೆ. ಮಹದೇವ