ಹನಗೋಡು ಅಣೆಕಟ್ಟೆಗಳ ಆಧುನೀಕರಣಕ್ಕೆ ಸರ್ವೆ
ಹುಣಸೂರು: ಹನಗೋಡು ಅಣೆಕಟ್ಟೆಯ ಎಡ ಹಾಗೂ ಬಲದಂಡೆ ನಾಲೆಗಳ ಆಧುನೀಕರಣಗೊಳಿಸುವ ಹಿನ್ನೆಲೆಯಲ್ಲಿ ನಾಲೆಗಳ ಅಚ್ಚುಕಟ್ಟು ಪ್ರದೇಶ ಹಾಗೂ ನಾಲೆಗಳ ಸರ್ವೆ ಕಾರ್ಯಕ್ಕೆ ಶಾಸಕ ಎಚ್.ಪಿ.ಮಂಜುನಾಥ್ ಚಾಲನೆ ನೀಡಿದರು.
ತಾಲೂಕಿನ ಹನಗೋಡಿನಲ್ಲಿ ಬುಧವಾರ 69 ಲಕ್ಷ ವೆಚ್ಚದ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
200 ವರ್ಷಗಳ ಹಿಂದಿನಿಂದಲೂ ಹನಗೋಡು ಅಣೆಕಟ್ಟೆಯ ನಾಲೆಯನ್ನು ಅಭಿವೃದ್ಧಿ ಹಾಗೂ ಆಧುನೀಕರಣಗೊಳಿಸದೆ ಅಣೆಕಟ್ಟೆಯಿಂದ ಭಾರಿ ಪ್ರಮಾಣದ ನೀರು ನಾಲೆ ಮೂಲಕ ಹರಿಸಿದರೂ ಅಣೆಕಟ್ಟೆ ವ್ಯಾಪ್ತಿಗೆ ಬರುವ ತಾಲೂಕಿನ ಕೆರೆ ಕಟ್ಟೆಗಳಿಗೆ ನಿಗದಿತ ವೇಳೆಯಲ್ಲಿ ನೀರು ತುಂಬಿಸಲು ಸಾಧ್ಯವಾಗಿಲ್ಲ. ರೈತರು ತಮ್ಮ ಬೆಳೆಗಳಿಗೆ ನೀರು ಹಾಯಿಸದೆ ಕಷ್ಟ ಪಡುತ್ತಿರುವುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಬಜೆಟ್ನಲ್ಲಿ 200 ಕೋಟಿಯನ್ನು ಹನಗೋಡು ಅಣೆಕಟ್ಟೆಯ ನಾಲೆಗಳ ಆಧುನೀಕರಣಕ್ಕೆ ಮೀಸಲಿಡುವಂತೆ ಮನವಿ ಮಾಡಿದ್ದೇನೆ ಎಂದರು.
ಹನಗೋಡು ಗ್ರಾಪಂ ಅಧ್ಯಕ್ಷೆ ಮಂಜುಳ, ಉಪಾಧ್ಯಕ್ಷೆ ಪ್ರಭಾವತಿ, ನೇರಳಕುಪ್ಪೆ ಗ್ರಾಪಂ ಉಪಾಧ್ಯಕ್ಷ ಕೃಷ್ಣೇಗೌಡ, ಸದಸ್ಯರಾದ ಎಚ್.ಬಿ. ಮಧು, ನಾಗಮ್ಮ, ಕೆ.ಎಸ್. ಆನಂದ್, ಸಾವರ್, ಚಂದ್ರೇಶ್, ಹಾರಂಗಿ ಇಲಾಖೆಯ ಎಇಇ ಕುಶುಕುಮಾರ್, ಎಇ ರಂಗಯ್ಯ, ಲಕ್ಷ್ಮೀಕಾಂತ್, ಕಾಂಗ್ರೆಸ್ ಅಧ್ಯಕ್ಷ ಬಿಳಿಕೆರೆ ಬಸವರಾಜ್, ಎಪಿಎಂಸಿ ನಾಮ ನಿರ್ದೇಶನ ಸದಸ್ಯ ರಾಧಾಕೃಷ್ಣ, ಮುಖಂಡರಾದ ಉಜ್ಜನಿಗೌಡ, ಶಿವಕುಮಾರ್, ಕಿರಂಗೂರು ಸ್ವಾಮಿ, ಸಂಜೀವ, ಇಮ್ತಿಯಾಜ್, ಪಟೇಲ್ ರವಿಗೌಡ ಇದ್ದರು.