ಇಂದು ಯಕ್ಷಗಾನ, ಬಯಲಾಟ
ಮೈಸೂರು: ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನವು ನಗರದ ಎಲ್ಲ ಕರಾವಳಿ ಮೂಲದ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಫೆ.14ರಿಂದ 16ರವರೆಗೆ ಜಗನ್ಮೋಹನ ಅರಮನೆ ಆವರಣದಲ್ಲಿ 9ನೇ ಅಖಿಲ ಭಾರತ ಯಕ್ಷಗಾನ- ಬಯಲಾಟ ಸಾಹಿತ್ಯ ಸಮ್ಮೇಳನ ಆಯೋಜಿಸಿದೆ.
ಫೆ.14ರ ಸಂಜೆ 4.30ಕ್ಕೆ ಸಮ್ಮೇಳನಾಧ್ಯಕ್ಷ ಜಿ.ಎಸ್. ಭಟ್ಟ ಅವರ ಮೆರವಣಿಗೆ ನಡೆಯಲಿದ್ದು, ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಉದ್ಘಾಟಿಸುವರು. ಸಂಜೆ 5.30ಕ್ಕೆ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಸಂಜೆ 7.30ಕ್ಕೆ ಕೃಪಾ ಪಡ್ಕೆ ಮತ್ತು ಪ್ರದೀಪ ಸಾಮಗ ತಂಡದಿಂದ ಭರತ-ಯಕ್ಷ ನಾಟ್ಯ ವೈಭವ ನಡೆಯಲಿದೆ.
ಫೆ.15ರ ಬೆಳಗ್ಗೆ 10ಕ್ಕೆ ಯಕ್ಷಗಾನ ಸಾಹಿತ್ಯ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಿಳೆಯರಿಂದ ಯಕ್ಷಗಾನ, ಮಧ್ಯಾಹ್ನ 2ಕ್ಕೆ ತುರುವೇಕೆರೆಯ ವಿದ್ವಾನ್ ಕ.ನಾ. ದಾಸಾಚಾರ್ ಅವರಿಂದ ಮೂಡಲಪಾಯ ಯಕ್ಷಗಾನದ ಹಾಡುಗಳು, ಮಧ್ಯಾಹ್ನ 2.30ಕ್ಕೆ ಗೋಕಾಕ್‌ನ ಕಲಾಶ್ರೀ ನಿಂಗಯ್ಯಸ್ವಾಮಿ ಪೂಜಾರಿ ಪ್ರತಿಷ್ಠಾನದ ವತಿಯಿಂದ ಸಣ್ಣಾಟ, ಮಧ್ಯಾಹ್ನ 3.30ಕ್ಕೆ ಯಕ್ಷಗಾನ ಸಾಹಿತ್ಯ ಗೋಷ್ಠಿ, ಸಂಜೆ 5.30ಕ್ಕೆ ಮಕ್ಕಳಿಂದ ಬಡಗು, ಸಂಜೆ 5.30ಕ್ಕೆ ಚಾಮುಂಡೇಶ್ವರಿ ಮಕ್ಕಳ ಮೇಳದ ವತಿಯಿಂದ ಚಕ್ರವ್ಯೂಹ, ಸಂಜೆ 6.30ಕ್ಕೆ ತುಮಕೂರು ಜಿಲ್ಲೆಯ ನೊಣವಿನಕೆರಯ ಮೂಡಲಪಾಯ ಯಕ್ಷಗಾನ ಕೇಂದ್ರದ ವತಿಯಿಂದ ದೊಡ್ಡಾಟ ಯಕ್ಷಗಾನ ನಡೆಯಲಿದೆ. ಸಂಜೆ 7ಕ್ಕೆ ಪಿ.ಡಿ. ಭಟ್, ಹೊದಿಕೆ ಶಿರೂರು ಮತ್ತು ಬಳಗದ ವತಿಯಿಂದ ಬಡಬಡಗು ಯಕ್ಷಗಾನ ಪ್ರಾತ್ಯಕ್ಷಿಕೆ, ಸಂಜೆ 7.30ಕ್ಕೆ ಕರಾವಳಿ ಯಕ್ಷಗಾನ ಕೇಂದ್ರದ ವತಿಯಿಂದ ಬಡಗು ಯಕ್ಷಗಾನ ನಡೆಯಲಿದೆ. ಫೆ. 16ರ ಬೆಳಗ್ಗೆ 10ಕ್ಕೆ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 12ರಿಂದ 2ರವರೆಗೆ ಯಕ್ಷಗಾನ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ. ಸಂಜೆ 4 ಮತ್ತು 5ಕ್ಕೆ ಯಕ್ಷಗಾನ ನಡೆಯಲಿದೆ. ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಶಾಸಕ ವಾಸು ಅಧ್ಯಕ್ಷತೆ ವಹಿಸುವರು. ಸಚಿವ ಬಿ. ರಾಮನಾಥ ರೈ ಇತರರು ಮುಖ್ಯಅತಿಥಿಗಳಾಗಿ ಭಾಗವಹಿಸುವರು.