ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಿಗೆ ಸನ್ಮಾನ

Vishwanath S
Updated On : 14 Feb 2014, 12:19 pm

ಹುಣಸೂರು: ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಜಿ.ಡಿ. ಹರೀಶ್‌ಗೌಡ ಮತ್ತು ಎ.ಟಿ. ಸೋಮಶೇಖರ್ ಅವರನ್ನು  ಪಿಎಲ್‌ಡಿ ಬ್ಯಾಂಕ್ ವತಿಯಿಂದ ಅಭಿನಂದಿಸಲಾಯಿತು. ಸನ್ಮಾನ ಸ್ವೀಕರಿಸಿ ಹರೀಶ್‌ಗೌಡ ಮತ್ತು ಎ.ಟಿ. ಸೋಮಶೇಖರ್ ಕೃತಜ್ಞತೆ ವ್ಯಕ್ತಪಡಿಸಿದರು. ತಾಲೂಕು ಪ್ರಾಥಮಿಕ ಕೃಷಿ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಕೆ.ಜಿ. ದೇವರಾಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕಿನ ಉಪಾಧ್ಯಕ್ಷ ಪ್ರಕಾಶ್, ನಿರ್ದೇಶಕರಾದ ಜಗದೀಶ್, ಸತ್ಯನಾರಾಯಣ್, ರುದ್ರೇಗೌಡ, ಜವರನಾಯ್ಕ, ಶ್ರೀನಿವಾಸ್, ವಸಂತಮ್ಮ, ಸೋಮಶೇಖರ್, ಎಪಿಎಂಸಿ ನಿರ್ದೇಶಕ ರವಿಗೌಡ ಹಾಗೂ ಎಂಡಿಸಿಸಿ ಬ್ಯಾಂಕಿನ ಹಿರಿಯ ಮೇಲ್ವಿಚಾರಕ ಮಂಜುಗೌಡ, ಪಿಎಲ್‌ಡಿ ಬ್ಯಾಂಕಿನ ವ್ಯವಸ್ಥಾಪಕ ಬೆಟ್ಟಸ್ವಾಮಿ ಮಾತನಾಡಿದರು.
ಕೇಂದ್ರ ಯೋಜನೆಗಳ ಲಾಭ ಪಡೆಯಲು ಕರೆ
ಹುಣಸೂರು: ಕೇಂದ್ರ ಸರ್ಕಾರವು ರೂಪಿಸಿರುವ ಕಾರ್ಯಕ್ರಮಗಳ ಲಾಭ ಪಡೆಯಬೇಕಾದ್ದು ಜನರ ಹಕ್ಕಾಗಿರುವಂತೆ, ಅದರ ಬಗ್ಗೆ ತಿಳಿವಳಿಕೆ ಪಡೆದುಕೊಳ್ಳಬೇಕಾದ ಹೊಣೆಗಾರಿಕೆಯೂ ಅವರ ಮೇಲಿದೆ ಎಂದು ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಮೈಸೂರು ಘಟಕದ ಸಹಾಯಕ ನಿರ್ದೇಶಕಿ ಡಾ.ಟಿ.ಸಿ. ಪೂರ್ಣಿಮಾ ಹೇಳಿದರು.
ತಾಲೂಕಿನ ಹಿಂಡಗುಡ್ಲು ಗ್ರಾಮದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಮೈಸೂರು ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಗ್ರಾಪಂ, ಹುಣಸೂರು ಶಿಶು ಅಭಿವೃದ್ಧಿ ಯೋಜನೆಯ ಸಂಯುಕ್ತಾಶ್ರಯದಲ್ಲಿ ನಡೆದ ಭಾರತ ನಿರ್ಮಾಣ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳ ವಿಷಯದಲ್ಲಿ ಗ್ರಾಮೀಣ ಜನರಲ್ಲಿ ತಿಳಿವಳಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ವ್ಯಾಪಕ ಸೇವೆ ಮಾಡುತ್ತಿದೆ. ಈ ಮೂಲಕ ಅರಿವು ಪಡೆದ ಗ್ರಾಮಸ್ಥರು ಯೋಜನೆಗಳನ್ನು ಅನುಷ್ಠಾನಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಸಲಹೆ ನೀಡಿದರು. ಗ್ರಾಪಂ ಸದಸ್ಯೆ ಜಯಮ್ಮ, ಗ್ರಾಪಂ ಕಾರ್ಯದರ್ಶಿ ಶೇಖರ್, ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶೋಭಾ, ಅಂಗನವಾಡಿ ಮತ್ತು ಆಶಾ ರ್ಕಾಯಕರ್ತೆಯರು, ಸ್ತ್ರೀ ಶಕ್ತಿ ಸಂಘದವರು, ಗ್ರಾಮಸ್ಥರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಮಹಿಳೆಯರಿಗೆ ನಡೆಸಿದ ಗ್ರಾಮೀಣ ಕ್ರೀಡಾ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಚಿರತೆ ದಾಳಿಗೆ ಕರು ಬಲಿ; ಗ್ರಾಮಸ್ಥರ ಆತಂಕ
ಹುಣಸೂರು: ತಾಲೂಕಿನ ಶಾಂತಿಪುರ, ಕಾಡುವಡ್ಡರಗುಡಿ, ಕರಿಮುದ್ದನಹಳ್ಳಿ ಸೇರಿದಂತೆ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಕಂಗಾಲಾಗಿದ್ದಾರೆ. ಇತ್ತೀಚೆಗೆ ಶಾಂತಿಪುರದ ಎಲಿಜಬೆತ್ ರಾಣಿ ಅವರ ಕೊಟ್ಟಿಗೆಗೆ ನುಗ್ಗಿದ ಚಿರತೆಯು ಕರುವೊಂದನ್ನು ತಿಂದಿದೆ. ಈ ಹಿಂದೆ ಕೋಳಿ ಫಾರಂಗೆ ನುಗ್ಗಿ ಕೋಳಿಗಳನ್ನು ತಿಂದು ಹಾಕಿತ್ತು. ಅಲ್ಲದೆ ಹಗಲು ವೇಳೆ ಚಿರತೆಗಳು ಜಾನುವಾರು ಅಡ್ಡಾಡುವಂತೆ ಕಾಣಿಸಿಕೊಳ್ಳುತ್ತಿರುವುದು ರೈತರು, ಮಹಿಳೆಯರು ಮತ್ತು ಶಾಲಾ ಮಕ್ಕಳಲ್ಲಿ ಭಯವನ್ನುಂಟು ಮಾಡಿದೆ. ಬೋನಿನ ಕೊರತೆಯಿಂದ ಚಿರತೆ ಹಿಡಿಯಲಾಗುತ್ತಿಲ್ಲ ಎಂದು ಅರಣ್ಯಾಧಿಕಾರಿಗಳು ಹೇಳುತ್ತಿರುವುದಾಗಿ ಎಲಿಜಬೆತ್ ರಾಣಿ ಆರೋಪಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಗಮನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನಾಗರಿಕ ವೇದಿಕೆ ಧರಣಿ
ಕೆ.ಆರ್. ನಗರ: ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಖಾಸಗಿ ಬಡಾವಣೆಗಳಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಗಟ್ಟಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ, ಪಟ್ಟಣದ ನಾಗರಿಕ ವೇದಿಕೆ ವತಿಯಿಂದ ಪುರಸಭಾ ವೃತ್ತದಲ್ಲಿ ಧರಣಿ ನಡೆಸಲಾಯಿತು. ಪಟ್ಟಣದ ಸುತ್ತಮುತ್ತ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು, ಮೂಲಭೂತ ಸೌಕರ್ಯಗಳನ್ನು ಬಡಾವಣೆಗಳಲ್ಲಿ ಕಲ್ಪಿಸದೆ, ಯೋಜನ ಪ್ರಾಧಿಕಾರವಾಗಲಿ, ಪುರಸಭೆಯಿಂದಾಗಲಿ ಅಧಿಕೃತ ಮಾನ್ಯತೆ ಪಡೆಯದೆ ಸುಳ್ಳು ದಾಖಲೆ ಸೃಷ್ಟಿಸಿ ಮುಗ್ಧ ಜನರಿಗೆ ಮಾರಾಟ ಮಾಡುವ ಮೂಲಕ ವಂಚನೆ ಮಾಡುತ್ತಿದ್ದಾರೆ. ಈ ರೀತಿ ಖರೀದಿಸಿದ ಬಡ ಜನರು ನಿವೇಶನದಲ್ಲಿ ಮನೆ ನಿರ್ಮಿಸಲಾಗದೆ ತೊಂದರೆ ಅನಿಭವಿಸುತ್ತಿದ್ದು, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಅನ್ಯಾಯ ಅಕ್ರಮಗಳನ್ನು ತಡೆಗಟ್ಟಿ, ಇದಕ್ಕೆ ಕಾರಣರಾದ ಬಡಾವಣೆ ನಿರ್ಮಾಣದಾರರು ಮತ್ತು ಸಂಬಂಧಪಟ್ಟ ಭ್ರಷ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಕೆ.ಬಿ. ಅರವಿಂದ್ ಹಿರಿಯ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ. ಧರಣಿಯಲ್ಲಿ ನಾಗರಿಕ ವೇದಿಕೆಯ ಶಿವಾನಂದ್, ಉದಯಕುಮಾರ್, ರಘು ಭಾಗವಹಿದ್ದರು.
ರಸ್ತೆ ಕಾಮಗಾರಿಗೆ ಚಾಲನೆ
ಕೆ.ಆರ್. ನಗರ: ತಾಲೂಕಿನ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾದ ಶ್ರೀ ಕಪ್ಪಡಿ ಕ್ಷೇತ್ರಕ್ಕೆ ಹೋಗುವ ಮುಖ್ಯರಸ್ತೆ ಡಾಂಬರೀಕರಣಕ್ಕೆ ಶಾಸಕ ಸಾ.ರಾ. ಮಹೇಶ್ ಚಾಲನೆ ನೀಡಿದರು. ಹೆಬ್ಬಾಳಿನ ಪ್ರವೇಶದ್ವಾರದಿಂದ ಹೆಬ್ಬಾಳು ಬಡಾವಣೆವರೆಗೆ ಒಂದು ಕಿ.ಮೀ. ರಸ್ತೆಯು ಕಳೆದ ಹಲವು ತಿಂಗಳಿಂದ ಸಂಪೂರ್ಣ ಹದಗೆಟ್ಟಿತ್ತು. ಇದರಿಂದ ಕಪ್ಪಡಿ ಮತ್ತು ಈ ಮಾರ್ಗದ ಇತರ ಗ್ರಾಮಕ್ಕೆ ತೆರಳುವವರಿಗೆ ತೊಂದರೆಯಾಗಿತ್ತು. ಹೀಗಾಗಿ ಗುರುವಾರ 40 ಲಕ್ಷ ವೆಚ್ಚದ ಈ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಾ.ರಾ. ಮಹೇಶ್, ಹೆಬ್ಬಾಳು ಜಿಪಂ ವ್ಯಾಪ್ತಿಯ ಸಿದ್ದನಕೊಪ್ಪಲು, ಬ್ಯಾಡರಹಳ್ಳಿ ರಸ್ತೆ ಹೆಬ್ಬಾಳು ಬೀರನಹಳ್ಳಿ ರಸ್ತೆ ಮಳಲಿ- ಮಾವತ್ತೂರು ರಸ್ತೆ ಚಂದಗಾಲು ಮುಖ್ಯರಸ್ತೆ, ಡೋರ್‌ನಹಳ್ಳಿ ದೊಡ್ಡೇಕೊಪ್ಪಲು ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದೆ. ಅಲ್ಲದೆ 4 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರು ಯೋಜನೆ ಕಾಮಗಾರಿ ಕೈಗೊಳ್ಳುವುದಾಗಿ ಹೇಳಿದರು.ಈ ವೇಳೆ ಹೆಬ್ಬಾಳು ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಜೆ. ಹರೀಶ್, ಮಾದೇಗೌಡ, ತಾಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸುಜಯ್, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಬಾಲು, ಎಪಿಎಂಸಿ ಮಾಜಿ ನಿರ್ದೇಶಕ ಪಿ. ಶಂಕರೇಗೌಡ ಇದ್ದರು.
ಗ್ರೀನ್‌ಬಡ್ಸ್ ಏಜೆಂಟರ ಸಭೆ
ಹುಣಸೂರು: ಕೋಟ್ಯಂತರ ರು. ಹಣ ಸಂಗ್ರಹಿಸಿ ಠೇವಣಿದಾರರಿಗೆ, ಏಜೆಂಟರಿಗೆ ವಂಚಿಸಿರುವ ಗ್ರೀನ್ ಬಡ್ಸ್ ಕಂಪನಿ ವಿರುದ್ಧ ಫೆ.19ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮೂಲಕ ವಿಧಾನಸೌಧ ಚಲೋ ನಡೆಸಲಾಗುವುದು ಎಂದು ಠೇವಣಿದಾರರ ರಕ್ಷಣಾ ಸಮಿತಿಯ ಅಧ್ಯಕ್ಷೆ ಲಕ್ಷ್ಮಿದೇವಿ ಮನವಿ ಮಾಡಿದರು. ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಮೈಸೂರು, ಕೊಡಗು ಜಿಲ್ಲೆಯ ಏಜೆಂಟರ ಸಭೆಯಲ್ಲಿ ಮಾತನಾಡಿ, ನಮ್ಮ ಮೂಲಕ ಕೋಟ್ಯಂತರ ರು. ಸಂಗ್ರಹಿಸಿ, ಗ್ರಾಹಕರನ್ನು ವಂಚಿಸಲಾಗಿದೆ. ಠೇವಣಿ ಸಂಗ್ರಹಿಸಿರುವ ನಾವು ಜನರಿಂದ ಉಗಿಸಿಕೊಳ್ಳಬೇಕಿದೆ. ಹಲವರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ ಎಂದರು. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗಿದ್ದು, ಎಲ್ಲೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಏಜೆಂಟರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಗೌರವಾಧ್ಯಕ್ಷ ಶಿವಪ್ಪ, ಪದಾಧಿಕಾರಿಗಳಾದ ನಾಗರಾಜು, ಮಹದೇವಸ್ವಾಮಿ, ಮಂಗಳಮ್ಮ, ನಿರ್ಮಲ ಇದ್ದರು.
ವ್ಯಕ್ತಿ ನಾಪತ್ತೆ
ಕೆ.ಆರ್. ನಗರ: ಬೆಂಗಳೂರಿನ ಅಕ್ಕನ ಮಗನ ಮದುವೆಗೆ ಹೋಗಿ ಬರುವುದಾಗಿ ಹೇಳಿ ಹೋದ ಪಟ್ಟಣದ ನಿವಾಸಿ ಸೋಮಶೇಖರ್ (55) ಫೆ. 2ರಿಂದ ಕಾಣೆಯಾಗಿದ್ದಾರೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಕೆ.ಆರ್. ನಗರ ಪೊಲೀಸ್ ಠಾಣೆ ಅಥವಾ ಕಂಟ್ರೋಲ್ ರೂಂ ಸಂಪರ್ಕಿಸಬಹುದು.
ಕಾವೇರಿಗಾಗಿ ಕೊಡಗಿನ ಪರಿಸರ ಉಳಿಸಿ
ಮೈಸೂರು: ಕರ್ನಾಟಕ ಮತ್ತು ತಮಿಳುನಾಡಿನ ರಾಜ್ಯಗಳಿಗೆ ಜೀವ ನದಿಯಾಗಿರುವ ಕಾವೇರಿ ನದಿಯ ಉಳಿವಿಗೆ ಉಭಯ ಸರ್ಕಾರಗಳು ಮುಂದಾಗಿ ಕೊಡಗಿನ ಪರಿಸರವನ್ನು ಉಳಿಸಬೇಕು ಎಂದು ಕಾವೇರಿ ಬಚಾವೋ ಆಂದೋಲನದ ಡಾ.ಬಿ.ಸಿ. ನಂಜಪ್ಪ ಕರೆ ನೀಡಿದರು.
ಕನ್ನಂಬಾಡಿ ಕಟ್ಟೆ ತುಂಬಲು ಪ್ರಮುಖ ಮೂಲಸ್ಥಾನವಾದ ಕೊಡಗಿನ ಪರಿಸರವನ್ನು ಭೂ ಮಾಫಿಯಾ, ಟಿಂಬರ್ ಮಾಫಿಯಾ, ಮೈನಿಂಗ್ ಮಾಫಿಯಾ ಹಾಗೂ ಮತ ಬ್ಯಾಂಕ್ ಹಾಳು ಮಾಡುತ್ತಿವೆ. ಕಡಿಮೆ ಸಂಖ್ಯೆಯಲ್ಲಿರುವ ಕೊಡಗಿನಲ್ಲಿ ಕೇರಳ ಮೂಲದಿಂದ ಬಂದವರು ನೆಲೆಸಿ ಪರಿಸರ ಹಾಳು ಮಾಡುತ್ತಿದ್ದಾರೆ. ಜತೆಗೆ ಕೈಗಾದಿಂದ ಕೇರಳದ ಕೋಯಿಕೋಡು ಪ್ರದೇಶಕ್ಕೆ ವಿದ್ಯುತ್ ಲೈನ್ ಎಳೆಯಲು ಕೊಡಗಿನಲ್ಲಿ ಈಗಾಗಲೇ 50 ಸಾವಿರ ಮರಗಳನ್ನು ಕಡಿಯಲಾಗಿದೆ. ಇನ್ನೂ 1.50 ಲಕ್ಷ ಮರಗಳನ್ನು ಹನನ ಮಾಡಲು ಪಟ್ಟಭದ್ರ ಹಿತಾಸಕ್ತಿ ವರ್ಗ ಸನ್ನದ್ಧವಾಗಿದ್ದು ಕೂಡಲೇ ಅವರ ಕಾರ್ಯಚರಣೆಗೆ ತಡೆಯೊಡ್ಡಬೇಕಾಗಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆ ಪ್ರತಿಭಟನೆ: ಮೈಸೂರು- ಕೊಡಗಿನ ಗಡಿಯಲ್ಲಿರುವ ಡಿ- ಲೈನ್ ರೂಪಿಸಲು ಸಿದ್ಧತೆ ನಡೆಸಲಾಗಿದ್ದು, ಇದನ್ನು ವಿರೋಧಿಸಿ ಫೆ.15ರಂದು ಮೈಸೂರಿನ ಇಲವಾಲ ಬಳಿ ಇರುವ ವಿದ್ಯುತ್ ಸ್ಥಾವರದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪರಿಸರ ಪ್ರೇಮಿಗಳು ಭಾಗವಹಿಸುವಂತೆ ಅವರು ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement