ಕುಡಿಯುವ ನೀರಿಗೆ ಪ್ರಥಮ ಆದ್ಯತೆ
ಎಚ್.ಡಿ. ಕೋಟೆ: ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಕೂರ್ಗಳ್ಳಿ ಮಹದೇವ್ ಭಾಗವಹಿಸಿದ್ದರು.
ತಾಲೂಕಿನ ವಿವಿಧ ಭಾಗಗಳಿಂದ ಬಂದ 25ಕ್ಕೂ ಹೆಚ್ಚು ಕರೆಗಳ ಪೈಕಿ ಸಮರ್ಪಕ ಕುಡಿಯುವ ನೀರು ಪೂರೈಸುತ್ತಿಲ್ಲ. ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಕ್ಕೆ ಸ್ವಂತ ಕಟ್ಟಡ ಇಲ್ಲ. 120 ಹಾಡಿಗಳಲ್ಲಿ ಗಿರಿಜನರು ವಾಸಿಸುತ್ತಿದ್ದು 2 ಕಡೆಗಳಲ್ಲಿ ಗಿರಿಜನರಿಗೆ ಆಸ್ಪತ್ರೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಚಾರಿ ವಾಹನವನ್ನು ಸಹ ಅಂತರಸಂತೆ ಆಸ್ಪತ್ರೆಗೆ ನೀಡಿದ್ದರೂ ಇಲ್ಲಿನ ವೈದ್ಯ ಡಾ. ರಘುನಾಥಾಚಾರ್ ಆರು ತಿಂಗಳಿಗೆ ಒಮ್ಮೆಯೂ ಭೇಟಿ ನೀಡುತ್ತಿಲ್ಲ. ಇದರಿಂದ ಗಿರಿಜನರಿಗೆ ವೈದ್ಯಕೀಯ ಸೌಲಭ್ಯ ಲಭ್ಯವಾಗುತ್ತಿಲ್ಲ ಎಂದು ಜಿಪಂ ಮಾಜಿ ಸದಸ್ಯ ವೆಂಕಟಸ್ವಾಮಿ ಆರೋಪಿಸಿದರು.
ಉಳಿದಂತೆ ರಸ್ತೆ, ಗಿರಿಜನರಿಗೆ ಉದ್ಯೋಗ ಖಾತರಿ ಯೋಜನೆಯ ಅರಿವನ್ನು ಅಧಿಕಾರಿಗಳು ಮೂಡಿಸಿಲ್ಲ. ಜಿಪಂ ಸದಸ್ಯ ಚಿಕ್ಕಣ್ಣೇಗೌಡರು ತಮ್ಮ ಕ್ಷೇತ್ರದ ಅಭಿವೃದ್ಧಿ ಅನುದಾನವನ್ನು ತಮ್ಮ ಜಮೀನಿಗೆ ಹೋಗುವ ರಸ್ತೆಯ ಡಾಂಬರೀಕರಣಕ್ಕೆ ಬಳಸಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.
ತಾಲೂಕಿನ ಗಿರಿಜನ ಹಾಡಿಗಳಲ್ಲಿ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸದೆ ಇರುವುದರಿಂದ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು. ಬೇಸಿಗೆಯಲ್ಲಿ ಪ್ರತಿ ಹಳ್ಳಿಗೂ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರದಿಂದ 130 ಕೋಟಿ ಬಿಡುಗಡೆಯಾಗಿದೆ. ಈ ಪೈಕಿ 20 ಕೋಟಿ ವೆಚ್ಚವಾಗಿದೆ ಎಂದರು.
ತಾಪಂ ಇಒ ಲಿಂಗರಾಜು, ಸೆಸ್ಕ್ ಎಇಇ ರಾಮುಸ್ವಾಮಿ, ತಾಲೂಕು ಸಮಾಜಕಲ್ಯಾಣಾಧಿಕಾರಿ ಭಿಂದ್ಯಾ, ಶಿಶು ಅಭಿವೃದ್ಧಿ ಅಧಿಕಾರಿ ರಾಮಕೃಷ್ಣಪ್ಪ, ಜಿಪಂ ತಾಂತ್ರಕ ಉಪ ವಿಭಾಗದ ಎಂಜಿನಿಯರ್‌ಗಳು ಭಾಗವಹಿಸಿದ್ದರು.