ಕೌಶಲ್ಯ ತರಬೇತಿ ಸದುಪಯೋಗಕ್ಕೆ ಕರೆ
ಮೈಸೂರು: ವಸಂತನಗರದ ಕೊಳಚೆ ಪ್ರದೇಶದ ಸಮುದಾಯ ಭವನದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ವತಿಯಿಂದ ನಡೆದ ಹೊಲಿಗೆ ತರಬೇತಿಯ ಸಮಾರೋಪ ಸಮಾರಂಭ ಹಾಗೂ ಪ್ರಮಾಣ ಪತ್ರ ವಿತರಣೆ ಸಮಾರಂಭವನ್ನು ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ ಉದ್ಘಾಟಿಸಿದರು.
ನಗರಪಾಲಿಕೆ ಸದಸ್ಯ ಜೆ.ಎಸ್. ಜಗದೀಶ್ ಮಾತನಾಡಿ, ಶಿಬಿರಾರ್ಥಿಗಳು ಕಲಿತ ಕೌಶಲ್ಯವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು. ಆರ್ಎಲ್ಎಚ್ಪಿ ಸಂಸ್ಥೆಯ ನಿರ್ದೇಶಕ ಸರಸ್ವತಿ ಮಾತನಾಡಿ, ಹೆಣ್ಣು ಮಕ್ಕಳು ಆತ್ಮವಿಶ್ವಾಸದಿಂದ ಸಮಾಜದಲ್ಲಿನ ಸಂಕೋಲೆಗಳನ್ನು ಕಳಚಿ ಅಭಿವೃದ್ಧಿ ಕಡೆಗೆ ಮುನ್ನುಗ್ಗಬೇಕೆಂದು ಸಲಹೆ ನೀಡಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪ್ರಭಾ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪುಟ್ಟರಾಜು ಭಾಗವಹಿಸಿ, ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಿಸಿ, ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತರಬೇತಿ ಪಡೆದ 28 ಹೆಣ್ಣು ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಧ್ವನಿ ಮಹಿಳಾ ಒಕ್ಕೂಟದ ಅಧ್ಯಕ್ಷ ಷಾಹಿನ್ತಾಜ್, ಮುಖಂಡರಾದ ನಳಿನ, ಮಂಗಳಗೌರಿ, ಸ್ಥಳೀಯ ಅಭಿವೃದ್ಧಿ ಸಂಘದ ಮೆಹಬೂಬ್ ಹಾಗೂ ಮಹಿಳಾ ಸಂಘದ ಪಾರ್ವತಿ ಭಾಗವಹಿಸಿದ್ದರು.
ಅಂಚೆ ನೌಕರರ ಮುಷ್ಕರ ಅಂತ್ಯ
ಮೈಸೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅಂಚೆ ನೌಕರರು ಹಮ್ಮಿಕೊಂಡಿದ್ದ 48 ಗಂಟೆಗಳ ಮುಷ್ಕರವು ಗುರುವಾರ ಸಂಜೆ ಅಂತ್ಯಗೊಂಡಿದ್ದು, ಶುಕ್ರವಾರದಿಂದ ಎಲ್ಲ ಅಂಚೆ ನೌಕರರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಅಂಚೆ ನೌಕರರು ನಗರದ ಅಶೋಕ ರಸ್ತೆಯ ನೆಹರು ವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿಯಿಂದ ಗಾಂಧಿಚೌಕದವರೆಗೆ ಗುರುವಾರ ಮೆರವಣಿಗೆ ಹಮ್ಮಿಕೊಂಡು ತಮ್ಮ ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಶೇ.50 ತುಟ್ಟಿಭತ್ಯೆ ವಿಲೀನ, ಮಧ್ಯಂತರ ಪರಿಹಾರ, 7ನೇ ವೇತನ ಆಯೋಗವನ್ನು 2014ರ ಜ.1ರಿಂದ ಜಾರಿಗೊಳಿಸುವುದು, ಗ್ರಾಮೀಣ ಅಂಚೆ ನೌಕರರನ್ನು 7ನೇ ವೇತನ ಆಯೋಗದ ವ್ಯಾಪ್ತಿಗೆ ಸೇರಿಸಬೇಕು. ಹಂಗಾಮಿ, ಅರೆಕಾಲಿಕ ನೌಕರರ ವೇತನ ಪರಿಷ್ಕರಿಸಬೇಕು. 6ನೇ ವೇತನ ಆಯೋಗದ ವೇತನ ತಾರತಮ್ಯ ನಿವಾರಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿ 5 ವರ್ಷಕ್ಕೊಮ್ಮೆ ವೇತನ ಆಯೋಗ ರಚಿಸಬೇಕು. ಎಲ್ಲ ನೌಕರರಿಗೂ 5 ಮುಂಬಡ್ತಿ ನೀಡಬೇಕು. ಹೊಸ ಪಿಂಚಣಿ ನೀತಿಯನ್ನು ರದ್ದುಗೊಳಿಸಬೇಕು. ಅನುಕಂಪ ಆಧಾರಿತ ನೌಕರರಿಗೆ ಕಾನೂನು ತಿದ್ದುಪಡಿ ಮಾಡಬೇಕು. ಗ್ರಾಮೀಣ ಅಂಚೆ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಸ್ಥಾನಮಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಅಂಚೆ ನೌಕರರ ಒಕ್ಕೂಟದ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ವಸಂತಕುಮಾರ್, ಸಿ.ಆರ್. ದೀನಬಂಧು, ಮೈಲಾರಪ್ಪ, ಶಿವಶಂಕರರಾವ್, ಎಚ್.ಎಸ್. ನಾಗರಾಜ್, ಎನ್. ಕೃಷ್ಣ, ಮುರಳೀಧರ್, ವೆಂಕಟೇಶ್, ಸುಬ್ರಮಣ್ಯ, ಆರ್. ಮಹದೇವ, ಸುಂದರಯ್ಯ, ಕೃಷ್ಣಸ್ವಾಮಿ, ಪುಟ್ಟಸಿದ್ದನಾಯಕ, ಅಂಬರೀಷ್, ಮಹದೇವಶೆಟ್ಟಿ, ರಾಜ್ಕುಮಾರ್, ಸಿ. ರಾಮಮೂರ್ತಿ ಇದ್ದರು.
16ರಂದು ಪ್ರೊ. ಉಮೇಶ್ಗೆ ಅಭಿನಂದನೆ
ಮೈಸೂರು: ರಂಗಕರ್ಮಿ ಪ್ರೊ. ಎಚ್.ಎಸ್.ಉಮೇಶ್ ಅವರಿಗೆ ಅಭಿನಂದನಾ ಕಾರ್ಯಕ್ರಮವು ಫೆ.16ರಂದು ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ. ಸ್ನೇಹ ಬಳಗವು ಪ್ರೊ. ಉಮೇಶ್ ಅವರ 60ನೇ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿರುವ ವ್ಯಕ್ತಿ ಶಕ್ತಿ ಎಂಬ ವಿಚಾರ ಸಂಕಿರಣ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ರಂಗಾಯಣ ಮಾಜಿ ನಿರ್ದೇಶಕ ಪ್ರಸನ್ನ ಉದ್ಘಾಟಿಸುವರು ಎಂದರು ಬಳಗದ ಸಂಚಾಲಕ ಡಾ. ಹಾಲತಿ ಸೋಮಶೇಖರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಕೆ.ಜೆ ನಾರಾಯಣ ಕಿಕ್ಕೇರಿ ಅವರು ಸಂಪಾದಿಸಿರುವ ಪ್ರಶಿಕ್ಷಣ - ಒಳ ಹೊರಗು ಕೃತಿಯನ್ನು ರಂಗತಜ್ಞ ಹಾಗೂ ಚಲನಚಿತ್ರ ನಿರ್ದೇಶಕ ಬಿ. ಸುರೇಶ್ ಲೋಕಾರ್ಪಣೆಗೊಳಿಸುವರು. ನಂತರ ಗೋಷ್ಠಿಗಳು ನಡೆಯಲಿವೆ. ಸಂಜೆ 6.30ಕ್ಕೆ ನಡೆಯುವ ಸಮಾರೋಪದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ವಿ. ಗೋವಿಂದರಾವ್, ಪ್ರೊ. ಎಚ್. ಎಸ್.ಉಮೇಶ್ ಅವರನ್ನು ಅಭಿನಂದಿಸುವರು ಎಂದು ತಿಳಿಸಿದರು. ಸದಸ್ಯರಾದ ರಾಜಶೇಖರ ಕದಂಬ, ಬಿ.ಎಂ. ರಾಮಚಂದ್ರ, ಎಚ್.ಕೆ. ರಾಮನಾಥ್, ಕೆ.ಜೆ ನಾರಾಯಣ ಕಿಕ್ಕೇರಿ ಇದ್ದರು.
16ರಂದು ಮಹಿಳಾ ಬ್ಯಾಂಕ್ಗೆ ಚುನಾವಣೆ
ಮೈಸೂರು: ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ಗೆ ಫೆ.16ರಂದು ಚುನಾವಣೆ ನಡೆಯಲಿದೆ ಎಂದು ಮಾಜಿ ಅಧ್ಯಕ್ಷೆ ಡಾ.ಎಂ.ವಿ. ಬೃಹದಾಂಬ ತಿಳಿಸಿದರು.ಅಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಪೀಪಲ್ಸ್ ಪಾರ್ಕ್ ಕಾಲೇಜಿನಲ್ಲಿ 2014- 19ನೇ ಸಾಲಿಗೆ ನಡೆಯಲಿರುವ ಈ ಚುನಾವಣೆಯಲ್ಲಿ ಬ್ಯಾಂಕಿನ ಹಾಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಶಿವಕುಮಾರಿ ನೇತೃತ್ವದಲ್ಲಿ 17 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದೇವೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಲವು ಬಾರಿ ಅಧ್ಯಕ್ಷರಾಗಿ ಹಾಗೂ ಇತರೆ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿರುವ 9 ಮಂದಿ ಹಾಗೂ ಹೊಸದಾಗಿ 8 ಮಂದಿ ಸೇರಿದಂತೆ ನಮ್ಮ ಗುಂಪಿನ ವತಿಯಿಂದ 17 ಮಂದಿ ಸದಸ್ಯರು ಸ್ಪರ್ಧಿಸಿದ್ದೇವೆ ಎಂದರು.
1994ರಲ್ಲಿ ಕಾರ್ಯ ಆರಂಭಿಸಿದ ಈ ಮಹಿಳಾ ಬ್ಯಾಂಕ್ 7500 ಮಂದಿ ಸದಸ್ಯರನ್ನೂ ಹೊಂದಿದೆ. 1 ಕೋಟಿ ಷೇರು ಧನವನ್ನೂ, 20 ಕೋಟಿ ಠೇವಣಿ ಹಾಗೂ 15 ಕೋಟಿ ಸಾಲ ನೀಡಿದೆ. 7 ಕೋಟಿ ಹೂಡಿಕೆ ಹೊಂದಿದೆ ಎಂದರು.