ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪೊಲೀಸ್ ಭ್ರಷ್ಟಾಚಾರ ನಿಯಂತ್ರಣಕ್ಕೆ ದೂರವಾಣಿ

Vishwanath S
Updated On : 14 Feb 2014, 12:17 pm

ಮೈಸೂರು: ನಗರ ಪೊಲೀಸ್ ಆಯುಕ್ತರಿಂದ ಸಾರ್ವಜನಿಕರಿಗೆ ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ಭ್ರಷ್ಟಾಚಾರದ ಕುರಿತು ದೂರು ಸ್ವೀಕಾರಕ್ಕೆ ವಿಶೇಷ ದೂರವಾಣಿ ಸಂಖ್ಯೆಗೆ ಪೊಲೀಸ್ ಆಯುಕ್ತ ಡಾ.ಎಂ.ಎಂ. ಸಲೀಂ ಚಾಲನೆ ನೀಡಿದ್ದಾರೆ.
ಪೊಲೀಸ್ ಇಲಾಖೆಯು ಸಾರ್ವಜನಿಕರ ಆಸ್ತಿ ಪಾಸ್ತಿ ರಕ್ಷಣೆ, ಉತ್ತಮವಾದ ಕಾನೂನು ಮತ್ತು ಸುವ್ಯವಸ್ಥೆ, ಕಾನೂನು ಬಾಹಿರ ಚಟುವಟಿಕೆ, ರೌಡಿ ಚಟುವಟಿಕೆ, ಸಮಾಜಘಾತುಕ ಶಕ್ತಿಗಳ ನಿಯಂತ್ರಣ, ಉತ್ತಮ ಸಂಚಾರ ನಿಯಂತ್ರಣ, ಅಪರಾಧ ರಹಿತ ನಿರ್ಭೀತ ವಾತಾವರಣದ ಸಮಾಜವನ್ನು ನೀಡುವ ನಿಟ್ಟಿನಲ್ಲಿ ಅವಿರತ ಪರಿಶ್ರಮ ವಹಿಸಿ ಕರ್ತವ್ಯ ನಿರ್ವಹಿಸುತ್ತಿದೆ.
ಹೀಗಿದ್ದರೂ ಕೆಲವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರು, ಅಪರಾಧಿಗಳು ಹಾಗೂ ಪ್ರಭಾವಿ ವ್ಯಕ್ತಿಗಳು ತಮ್ಮ ಕಾರ್ಯ ಸಾಧನೆಗಾಗಿ ಪೊಲೀಸರಿಗೆ ಹಣ ನೀಡಿ, ಹಣದ ವ್ಯಾಮೋಹ ಉಂಟಾಗುವಂತೆ ಮಾಡುತ್ತಿರುವುದು, ಸಾರ್ವಜನಿಕರು ಕಾನೂನಿಗೆ ವಿರುದ್ಧವಾಗಿ ವರ್ತಿಸಿದಾಗ ಅಥವಾ ಅಪರಾಧವನ್ನು ಎಸಗಿದಾಗ ಅದರಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೆ ಲಂಚ ನೀಡುವುದು, ಅಪರಾಧವನ್ನು ಮಾಡಿದ ವ್ಯಕ್ತಿಯ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳದೆ ಆತನೊಂದಿಗೆ ಶಾಮೀಲಾಗಿ ಲಂಚ ಪಡೆಯುತ್ತಿರುವ ಪೊಲೀಸರಿಂದ ಇಲಾಖೆಯ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ.
ನಗರದ ಸಾರ್ವಜನಿಕರಿಗೆ ಪಾರದರ್ಶಕ ಆಡಳಿತ ಹಾಗೂ ಭ್ರಷ್ಟಾಚಾರ ಮುಕ್ತ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ದೂರವಾಣಿ ಸಂಖ್ಯೆಗೆ ಚಾಲನೆ ನೀಡಲಾಗಿದೆ. ನಗರದ ಯಾವುದೇ ಪೊಲೀಸ್ ಅಧಿಕಾರಿಗಳು ಅಥವಾ ಸಿಬ್ಬಂದಿ ಸಾರ್ವಜನಿಕರ ಬಳಿ ಲಂಚ ಕೇಳಿದಾಗ ಅಥವಾ ಹಣದ ಬೇಡಿಕೆ ಇಟ್ಟಾಗ ಅಂತಹ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಬಗ್ಗೆ ದೂರವಾಣಿ ಮೂಲಕ ದೂರು ನೀಡಬಹುದಾಗಿದೆ.
ಈ ಬಗ್ಗೆ ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ದೂ. 0821- 2418500 ಗೆ ಸಾರ್ವಜನಿಕರು ಕರೆ ಮಾಡಿ ಬೆಳಗ್ಗೆ 10ರಿಂದ ರಾತ್ರಿ 9ರವರೆಗೂ ದೂರು ನೀಡಬಹುದು.
ಸಾರ್ವಜನಿಕರು ಈ ಮೇಲ್ಕಂಡ ದೂರವಾಣಿಗೆ ಕರೆ ಮಾಡಿ ತಮ್ಮ ಸ್ವವಿವರವನ್ನು ನೀಡಿ, ನಂತರ ಪೊಲೀಸರ ವಿವರವನ್ನು ನೀಡಬೇಕಾಗುತ್ತದೆ. ಸಾರ್ವಜನಿಕರು ನೀಡುವ ಎಲ್ಲ ಮಾಹಿತಿಯನ್ನು ಒಂದು ರಿಜಿಸ್ಟಾರ್‌ನಲ್ಲಿ ವಿವರವಾಗಿ ದಾಖಲಿಸಲಾಗುತ್ತದೆ. ನಂತರ ಈ ಬಗ್ಗೆ ವಿಚಾರಣೆ ಕೈಗೊಂಡು ಸದರಿ ಪೊಲೀಸರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಸಾರ್ವಜನಿಕರು ಈ ವ್ಯವಸ್ಥೆಯನ್ನು ಸದುಪಯೋಗ ಪಡೆದುಕೊಳ್ಳಬೇಕು. ದೂರು ಸಲ್ಲಿಸುವಾಗ ಸುಳ್ಳು, ವೈಯಕ್ತಿಕ ಹಾಗೂ ದುರುದ್ದೇಶಪೂರಿತ ಆರೋಪಗಳನ್ನು ಮಾಡದೆ ನೈಜವಾದ ದೂರುಗಳನ್ನು ನೀಡಬೇಕು ಎಂದು ಸಲೀಂ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement