ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಹಿಳಾ ಉದ್ಯಮ; ಸಮಸ್ಯೆ ಹಲವು

Vishwanath S
Updated On : 14 Feb 2014, 12:18 pm

ಕ.ಪ್ರ.ವಾರ್ತೆ ,  ಮೈಸೂರು ,  ಫೆ. 13
ಮಹಿಳಾ ಉದ್ಯಮಕ್ಕೆ ಸರ್ಕಾರ ಸಾಕಷ್ಟು ಯೋಜನೆ ರೂಪಿಸಿದ್ದರೂ ಉದ್ಯಮ ನಡೆಸಲು ಹಲವು ಸವಾಲು ಎದುರಿಸಬೇಕಿದೆ. ಬ್ಯಾಂಕ್‌ಗಳ ಬಿಗಿ ನೀತಿ, ಸರ್ಕಾರಿ ಇಲಾಖೆಯಲ್ಲಿ ನಮ್ಮ ಯೋಜನೆಗಳಿಗೆ ಅಡೆತಡೆ, ಸೂಕ್ತ ಮಾರುಕಟ್ಟೆ ಕೊರತೆ ಇದೆ ಎಂದು ವಿವಿಧ ಮಹಿಳಾ ಉದ್ಯಮಿಗಳು ತಮ್ಮ ಅನುಭವ ಹಂಚಿಕೊಂಡರು.
ನಗರದ ಡಿ. ದೇವರಾಜ ಅರಸು ರಸ್ತೆಯಲ್ಲಿನ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು, ಎಫ್‌ಕೆಸಿಸಿಐ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕದಲ್ಲಿ ಮಹಿಳಾ ಉದ್ಯಮದ ಬೆಳವಣಿಗೆ- ಸವಾಲು ಮತ್ತು ಪರಿಹಾರ ಕುರಿತ ವಿಚಾರ ಸಂಕಿರಣದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳಾ ಉದ್ಯಮಿಗಳು ತಮ್ಮ ಸಮಸ್ಯೆ ತಿಳಿಸಿದರು.
ಮೊದಲಿಗೆ ಮಹಿಳಾ ಉದ್ಯಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಆದರೆ ಅದನ್ನು ಬಳಸಿಕೊಳ್ಳಲು ಹಲವು ತೊಡಕುಗಳಿವೆ. ಬ್ಯಾಂಕ್‌ಗಳು ಆರ್‌ಬಿಐ ನಿಯಮವನ್ನು ಪಾಲಿಸಬೇಕಿದೆ. ಆದರೆ ಆರ್‌ಬಿಐ ನಿಯಮ ಸಾಕಷ್ಟು ಜಟಿಲವಾಗಿರುವುದರಿಂದ ಮಹಿಳೆಯರು ಉದ್ಯಮದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಿಯಮಗಳ ಸಡಿಲಿಕೆ ಆಗಬೇಕು ಎಂದರು.
ನಮ್ಮ ಯೋಜನೆಯ ಅನೇಕ ಕಡತಗಳು ಸರ್ಕಾರದ ಇಲಾಖೆಯ ವಿವಿಧ ಹಂತಗಳಲ್ಲಿ ಅಡೆತಡೆ ಅನುಭವಿಸುತ್ತವೆ. ಅಲ್ಲದೆ ನಾವು ತಯಾರಿಸಿದ ವಸ್ತುಗಳನ್ನು ಸರ್ಕಾರಿ ಇಲಾಖೆಗಳು ಖರೀದಿಸಿದರೆ ಅದರ ಬಿಲ್ ಪಾವತಿಗೆ ನಾವು ಸಾಕಷ್ಟು ತಾಳ್ಮೆಯಿಂದ ಕಾಯಬೇಕು ಎಂದು ಮತ್ತೆ ಕೆಲವು ಉದ್ಯಮಿಗಳು ತಮ್ಮ ಸಮಸ್ಯೆ ಹೇಳಿಕೊಂಡರು.
ಬಳಿಕ ಮಾತನಾಡಿದ ಎಫ್‌ಕೆಸಿಸಿಐನ ಜಿಲ್ಲಾ ಸಮನ್ವಯಕಾರ ಸುಧಾಕರ ಎಸ್. ಶೆಟ್ಟಿ, ಮಹಿಳಾ ಉದ್ಯಮಕ್ಕೆ ಭಾರತದಲ್ಲಿ ಸಾಕಷ್ಟು ಅವಕಾಶ ಇದೆ. ಸರ್ಕಾರದಿಂದಲೂ ಉತ್ತಮ ಸಹಕಾರ ಇದೆ. ಆದರೆ ಉದ್ಯಮಿಗಳಿಗೆ ಉಂಟಾಗುವ ತೊಂದರೆಗೆ ಎಫ್‌ಕೆಸಿಸಿಐ ಸಂಪರ್ಕಿಸಬಹುದು. ನಾವು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ. ವಿದೇಶಿ ಪ್ರವಾಸಕ್ಕೆ ತೆರಳುವ ಉದ್ಯಮದಾರರಿಗೆ ಐದು ಬಾರಿ ಸರ್ಕಾರ ಶೇ. 75ರಷ್ಟು ರಿಯಾಯಿತಿ ನೀಡುತ್ತದೆ. ನಿಮಗೆ ಭಾಷೆಯ ಸಮಸ್ಯೆ ಇದ್ದರೆ ತಮಗೆ ಅನುವಾದ ವ್ಯವಸ್ಥೆಯನ್ನು ಮಾಡಿಕೊಡುತ್ತದೆ. ಅಲ್ಲದೆ ತಾವು ಬ್ಯಾಂಕ್‌ನಿಂದ ಸಾಲ ನಿರೀಕ್ಷಿಸಿದ್ದರೆ, ತಾವು ಸಲ್ಲಿಸುವ ದಾಖಲಾತಿ ಸರಿಯಾಗಿರಬೇಕು. ಆಗ ಎಲ್ಲ ಬ್ಯಾಂಕ್‌ಗಳು ತಮಗೆ ಸಾಲ ಸೌಲಭ್ಯ ನೀಡಲು ಮುಂದೆ ಬರುತ್ತವೆ ಎಂದು ತಿಳಿಸಿದರು.
ಆನೇಕಲ್‌ನ ಮಹಿಳಾ ಉದ್ಯಮಿಯೊಬ್ಬರು ಮಾತನಾಡಿ, ಸ್ವಸಹಾಯ ಗುಂಪುಗಳು ತಯಾರಿಸುವ ಹಪ್ಪಳ, ಸಂಡಿಗೆ ಮುಂತಾದ ಅನೇಕ ಉತ್ಪನ್ನಗಳನ್ನು ಖರೀದಿಸಲು ಅನೇಕರು ಮುಂದಾಗುವುದಿಲ್ಲ. ಏಕೆಂದರೆ ಇತ್ತೀಚೆಗೆ ಹಲವರು ವಿವಿಧ ಕಂಪನಿಯ ಉತ್ಪನ್ನಗಳೇ ಬೇಕು ಎನ್ನುತ್ತಾರೆ. ಇದರಿಂದ ಮಹಿಳಾ ಉದ್ಯಮಿಗಳಿಗೆ ಸೂಕ್ತ ಮಾರುಕಟ್ಟೆ ದೊರಕುತ್ತಿಲ್ಲ ಎಂದರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎ.ಎಸ್. ಸತೀಶ್, ವೈಸ್‌ನ ಅಧ್ಯಕ್ಷೆ ಗಾಯತ್ರಿ, ಇ-ಮರ್ಜ್‌ನ ಸಂಸ್ಥಾಪಕ ಅಧ್ಯಕ್ಷೆ ಉಮಾ ರೆಡ್ಡಿ, ಅಧ್ಯಕ್ಷೆ ರಾಜಲಕ್ಷ್ಮಿ, ಕೋಲಾರ ಡಿಐಸಿಯ ಉಪ ನಿರ್ದೇಶಕ ಎನ್. ಸುರೇಶ, ಎಂ. ಶಿವಶಂಕರ್, ಜಂಟಿ ನಿರ್ದೇಶಕ ಎಂ. ರಾಮನಾರಾಯಣ ಗೌಡ, ವೈಸ್ ಕಾರ್ಯದರ್ಶಿ ರುಕ್ಮಿಣಿ ಚಂದ್ರನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement