ವಕೀಲರ ಮೇಲೆ ಸುಳ್ಳು ಆರೋಪ; ಪ್ರತಿಭಟನೆ
ಕೆ.ಆರ್. ನಗರ: ತಾಲೂಕಿನ ಚಂದಗಾಲು ಗ್ರಾಮದ ವಕೀಲ ಸಿ.ಕೆ. ಮಂಜುನಾಥ್ ಮೇಲೆ ಪೊಲೀಸರು ಸುಳ್ಳು ಆರೋಪದ ಮೇಲೆ ದೂರು ದಾಖಲಿಸಿರುವುದನ್ನು ಖಂಡಿಸಿ, ವಕೀಲರ ಸಂಘದ ಎಲ್ಲ ಸದಸ್ಯರು ಕಲಾಪ ಬಹಿಷ್ಕರಿಸಿ, ಧಿಕ್ಕಾರ ಕೂಗಿದರು.
ಚಂದಗಾಲು ಗ್ರಾಮದಲ್ಲಿ ಫೆ. 11ರ ಸಂಜೆ ಎಪಿಎಂಸಿ ಸದಸ್ಯ ನಂಜುಂಡಸ್ವಾಮಿ ಮತ್ತು ಪತ್ನಿ ಸರಸ್ವತಮ್ಮ ಇಬ್ಬರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಹರೀಶ್ ಮತ್ತು ಮಳ್ಳೆಗೌಡರ ಮೇಲೆ ಚುಣಾವಣೆ ಹಿನ್ನೆಲೆ ಹಲ್ಲೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ಸಿ.ಕೆ. ಯೋಗೇಶ್ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪೊಲೀಸರಿಗೆ ನಂಜುಂಡಸ್ವಾಮಿ ವಿರುದ್ಧ ದೂರು ನೀಡಲು ಹೋದಾಗ ಪೊಲೀಸರು ದೂರು ದಾಖಲಿಸದೆ ಎನ್ಸಿಆರ್ ನೀಡಿ ಕಳುಹಿಸಿದ್ದಾರೆ. ಹಲ್ಲೆ ಮಾಡಿದ ನಂಜುಂಡಸ್ವಾಮಿ ಅವರು ನಂತರ ನೀಡಿದ ದೂರನ್ನು ದಾಖಲಿಸಿಕೊಂಡು ಸ್ಥಳದಲ್ಲೆ ಇಲ್ಲದ ವಕೀಲ ಸಿ.ಕೆ. ಮಂಜುನಾಥ್ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.
ವಿಷಯ ತಿಳಿದ ವಕೀಲರ ಸಂಘದ ಸದಸ್ಯರು ಸಂಘದ ಸದಸ್ಯನ ಮೇಲೆ ವಿನಾ ಕಾರಣ ಪೊಲೀಸರು ದೂರು ದಾಖಲಿಸಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಂಡು ಅನ್ಯಾಯ ಸರಿಪಡಿಸಬೇಕೆಂದು ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಹಿರಿಯ ವಕೀಲರಾದ ಜಿ.ಆರ್.ರಾಮೇಗೌಡ, ಬಿ.ಕೆ. ಕೃಷ್ಣೇಅರಸ್, ರುದ್ರಮೂರ್ತಿ, ಜಯರಾಮೇಗೌಡ, ಪಿ. ವಿಶ್ವನಾಥ್, ತಿಮ್ಮಪ್ಪ, ನಾಗೇಶ್, ಕೃಷ್ಣಮೂರ್ತಿ, ಮಂಜುನಾಥ್, ಶಿವರಾಜ್, ಸುರೇಶ್, ಶಿವಶಂಕರ್, ಉದಯ್, ನಾಗೇಶ್, ಮಹೇಶ್, ಪೂರ್ಣಿಮ, ಪ್ರಭಾವತಿ, ಗಾಯಿತ್ರಿ, ರಾಧಿಕ, ಪದ್ಮ, ನೇತ್ರಾವತಿ, ವಕೀಲರ ಸಂಘದ ಎಲ್ಲ ಸದಸ್ಯರು ಇದ್ದರು.