ಹೈನುಗಾರಿಕೆಯಿಂದ ಆರ್ಥಿಕ ಸುಧಾರಣೆ: ಸುರೇಶ್
ಸುತ್ತೂರು: ತಾಲೂಕಿನ ಸಿದ್ದರಾಮನಹುಂಡಿಯಲ್ಲಿ ಪಶುಪಾಲನಾ ಇಲಾಖೆ ವತಿಯಿಂದ ಮಿಶ್ರತಳಿ ಕರುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಕಾವೇರಿ ಗ್ರಾಮೀಣ ಬ್ಯಾಂಕ್ ಸಹಯೋಗದಲ್ಲಿ ಗ್ರಾಮದ ಪಶು ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಿಶ್ರತಳಿಯ 200ಕ್ಕೂ ಹೆಚ್ಚಿನ ಕರುಗಳ ಪ್ರದರ್ಶನ ನಡೆಯಿತು. ಇವುಗಳಲ್ಲಿ ಸಿದ್ದರಾಮನಹುಂಡಿಯ ಕೃಷ್ಣ ಎಂಬವರ ಕರುಗೆ ಮೊದಲ ಬಹುಮಾನ ಲಭಿಸಿತು.
ಬಹುಮಾನ ವಿತರಿಸಿ ಮಾತನಾಡಿದ ಜಿಪಂ ಸದಸ್ಯ ಎಂ.ಬಿ. ಸಿದ್ದೇಗೌಡ, ರೈತರ ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಲು ಪ್ರತಿ ಮನೆಯಲ್ಲೂ ರೈತರು ಹಸು ಸಾಕಾಣಿಕೆಗೆ ಮುಂದಾಗಬೇಕು. ಆ ಮೂಲಕ ಮನುಷ್ಯನ ಆರೋಗ್ಯ ಹಾಗೂ ಮಣ್ಣಿನ ಆರೋಗ್ಯ ಕಾಪಾಡಬೇಕು ಎಂದರು.
ಪಶು ಇಲಾಖೆ ಅಧಿಕಾರಿ ಸುರೇಶ್ ಮಾತನಾಡಿ, ಮುಂದಿನವಾರ ಹಸು ಸಾಕಿರುವ ಪ್ರತಿ ಮನೆಗೂ ಭೇಟಿ ನೀಡಿ ರೋಗನಿರೋಧಕ ಔಷಧಗಳನ್ನು ಉಚಿತವಾಗಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆತ್ಮಯೋಜನೆಯಡಿ ಒಣಮೇವನ್ನು ಹಾಗೂ ಭಾಗವಹಿಸಿರುವ ಎಲ್ಲ ಕರುಗಳಿಗೂ ಉಚಿತವಾಗಿ ಜಂತುಹುಳು ಔಷಧವನ್ನು ವಿತರಿಸಲಾಗುವುದು ಎಂದರು.
ತಾಂಪ ಅಧ್ಯಕ್ಷೆ ನಿರ್ಮಲಾ ಹೊನ್ನಪ್ಪ, ಸದಸ್ಯರಾದ ಮಹೇಂದ್ರ, ಸುಂದರಮ್ಮ, ಮುಖಂಡರಾದ ರಾಮೇಗೌಡ, ಇಲಾಖೆ ಸಹಾಯಕ ನಿರ್ದೇಶಕ ಆರ್. ಮಂಜುನಾಥ್, ಶೇಖರ್‌ಮೂರ್ತಿ, ವರದರಾಜ್. ತಿಮ್ಮರಾಜ್, ನಾಗಣ್ಣ, ಶ್ರೀನಿವಾಸ್, ನಾಗರಾಜ್ ಹಾಗೂ ಸುತ್ತಮುತ್ತ ಗ್ರಾಮಗಳ ರೈತರು ಭಾಗವಹಿಸಿದ್ದರು.