ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪ್ರಾಧ್ಯಾಪಕರಿಗೆ ಉದ್ಯೋಗ ಬದ್ಧತೆ ಬೇಕು: ಪ್ರೊ.ವಾಲಿಕರ್

Vishwanath S
Updated On : 14 Feb 2014, 11:26 am

ಮೈಸೂರು: ಪ್ರಾಧ್ಯಾಪಕರು ಮತ್ತು ಉಪನ್ಯಾಸಕರಿಗೆ ಸಂಬಳವೇ ಮುಖ್ಯವಲ್ಲ. ಉದ್ಯೋಗದಲ್ಲಿನ ಬದ್ಧತೆಯೂ ಮುಖ್ಯ ಎಂದು ಕರ್ನಾಟಕ ವಿವಿ ಕುಲಪತಿ ಪ್ರೊ.ಎಚ್.ಬಿ. ವಾಲಿಕರ್ ಹೇಳಿದರು.
ಮೈಸೂರು ವಿವಿ ಯುಜಿಸಿ- ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯವು ಶುಕ್ರವಾರ ಏರ್ಪಡಿಸಿದ್ದ 9ನೇ ಜೀವ ವಿಜ್ಞಾನ ಪುನಶ್ಚೇತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಶ್ವದ ಯಾವುದೆ ದೇಶ ನೀಡದಷ್ಟು ಸಂಬಳವನ್ನು ನಮ್ಮ ದೇಶದಲ್ಲಿ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರಿಗೆ ನೀಡಲಾಗುತ್ತಿದೆ. ವಿದೇಶದಲ್ಲಿನ ಪ್ರಾಧ್ಯಾಪಕರು ಡಾಲರ್ ಲೆಕ್ಕದಲ್ಲಿ ಸಂಬಳ ಪಡದರೆ ನಾವು ರುಪಾಯಿ ಲೆಕ್ಕದಲ್ಲಿ ಪಡೆಯುತ್ತೇವೆ.
ಒಬ್ಬ ಪ್ರಾಧ್ಯಾಪಕ ತಿಂಗಳಿಗೆ ಕನಿಷ್ಠ 40ರಿಂದ 50 ಸಾವಿರ ಉಳಿಸಬಹುದಾದಷ್ಟು ಸಂಬಳ ಇಲ್ಲಿ ದೊರಕುತ್ತಿದೆ. ಆದರೂ ಸಂಬಳ ಸಾಲದು ಎನ್ನುವವರಿದ್ದಾರೆ. ಆದರೆ ಕೆಲಸದ ವಿಷಯದಲ್ಲಿ ಬದ್ಧತೆ ಇಲ್ಲ ಎಂದು ಅವರು ವಿಷಾದಿಸಿದರು.
30 ವರ್ಷಗಳಿಂದ ಒಂದೇ ರೀತಿಯ ಪಾಠ ಮಾಡಲಾಗುತ್ತಿದೆ. ಅದರಲ್ಲಿ ಸ್ವಲ್ಪವೂ ಬದಲಾವಣೆ ಆಗಿಲ್ಲ. ಆದ್ದರಿಂದ ತರಗತಿಗೆ ತೆರಳುವ ಮುನ್ನ ಒಂದು ಗಂಟೆಗಳ ಕಾಲ ಸಂಬಂಧಿಸಿದ ಪುಸ್ತಕಗಳನ್ನು ಓದಬೇಕು. ಆಗ ಹೊಸ ವಿಷಯ ತಿಳಿಯುತ್ತದೆ. ಅಲ್ಲದೆ ತಮ್ಮ ಬೋಧನೆಯಲ್ಲೂ ಬದಲಾವಣೆ ಆಗುತ್ತದೆ. ಶಿಕ್ಷಕರು ಎಂದರೆ ಕೇವಲ ನಿವೃತ್ತಿಯ ತನಕ ಮಾತ್ರವಲ್ಲ. ನಮ್ಮ ಜೀವನ ಪರ್ಯಂತ ಶಿಕ್ಷಕರೇ. ಇದೊಂದು ಗೌರವಾನ್ವಿತ ವೃತ್ತಿ. ಅದರ ಮಹತ್ವವನ್ನು ನಾವು ಅರಿಯಬೇಕು ಎಂದರು.
ಸಾವಿರಾರು ರು. ಸಂಬಳ ಪಡೆಯುವ ನಾವು ಚೆನ್ನಾಗಿ ದುಡಿದು ವಿದೇಶಕ್ಕೆ ಹೋಗಿ ನೆಲಸುವುದು ದೊಡ್ಡದಲ್ಲ. ಆದರೆ ನಾವು ಈ ಸಮಾಜಕ್ಕೆ ಬದ್ಧರಾಗಿ ಕೆಲಸ ಮಾಡಬೇಕು. ಕುಲಪತಿ ಹುದ್ದೆ ಶಾಶ್ವತವಲ್ಲ. ಆದರೆ ಶಿಕ್ಷಕ ಎನ್ನುವುದು ಶಾಶ್ವತ ಎಂದರು.
ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ಮುಂದಿನ ಶೈಕ್ಷಣಿಕ ವರ್ಷದಿಂದ ಅನುವಂಶೀಯ ಮತ್ತು ಜಿನೊಮಿಕ್ಸ್ ವಿಭಾಗ ತೆರೆಯಲಾಗುವುದು ಎಂದರು.
ಯುಜಿಸಿ- ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯದ ನಿರ್ದೇಶಕ ಪ್ರೊ. ಲಿಂಗರಾಜ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಎಚ್.ಎನ್. ಯಜುರ್ವೇದಿ, ಶಿಬಿರ ಸಂಯೋಜಕ ಪ್ರೊ.ಎನ್.ಬಿ. ರಾಮಚಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement