ಬಸವ, ಗಾಂಧಿ ಮನುಕುಲದ ಮೇರು ಶಿಖರ
ಮೈಸೂರು: ಪ್ರಪಂಚದಲ್ಲಿಯೇ ಬಸವ ಹಾಗೂ ಗಾಂಧಿ ಮನುಕುಲದ ಮೇರು ಶಿಖರಗಳು ಎಂದು ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಬಣ್ಣಿಸಿದರು.
ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ಬಸವ ಅಧ್ಯಯನ ಪೀಠದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ವಚನ ಸಾಹಿತ್ಯ ಚಿಂತನೆ ವಿಶೇಷ ಉಪನ್ಯಾಸ ಮಾಲೆ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಅಸ್ಪೃಶ್ಯತೆ, ಬಡತನ, ಅಸಮಾನತೆ ನಿವಾರಣೆ ಹಾಗೂ ಮಹಿಳೆಯರ ಸಮಾನತೆಗಾಗಿ ಬಸವಣ್ಣ ಅವರು 12ನೇ ಶತಮಾನದಲ್ಲಿ ನಡೆಸಿದ ಹೋರಾಟಕ್ಕೂ ಹಾಗೂ ಮಹಾತ್ಮ ಗಾಂಧೀಜಿ ಅವರು 20ನೇ ಶತಮಾನದಲ್ಲಿ ನಡೆಸಿದ ಹೋರಾಟ ನೋಡಿದಾಗ ಈ ಇಬ್ಬರು ಮಹನೀಯರು ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದವರು. ಅವರು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಲ್ಲೇ ಮೇರು ಶಿಖಿರದ ವ್ಯಕ್ತಿಗಳು ಎಂದರು.
ಗಾಂಧೀಜಿ ಹಾಗೂ ಬಸವಣ್ಣ ನುಡಿದಂತೆ ನಡೆದವರು. ಉನ್ನತ ವರ್ಗದಲ್ಲಿ ಹುಟ್ಟಿದರೂ, ಅಹಂ ತ್ಯಜಿಸಿ ಕೆಳ ವರ್ಗದವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು. ಅವರ ಬರಹಗಳು ಅಮೂಲ್ಯವಾದುದು. ಅದನ್ನು ಸಂರಕ್ಷಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
8 ಲಕ್ಷ ರು: ಸರ್ಕಾರ ವಿವಿಗೆ ಮಂಜೂರು ಮಾಡಿರುವ ಬಸವ ಪೀಠವು ಅಧ್ಯಯನ, ಸಂಶೋಧನೆ ಹಾಗೂ ಗ್ರಂಥ ಪ್ರಕಟಣೆಗೆ ಮುಂದಾಗಬೇಕು. ಉದ್ದೇಶಿತ ವಚನ ಸಾಹಿತ್ಯ ಚಿಂತನಾ ಮಾಲೆಯ ಗ್ರಂಥಗಳ ಪ್ರಕಟಣೆಗೆ 8 ಲಕ್ಷ ಬಿಡುಗಡೆ ಮಾಡಲಾಗಿದೆ. ಪೀಠದ ಅಭ್ಯುದಯಕ್ಕೆ ಅಗತ್ಯ ಪ್ರೋತ್ಸಾಹ ನೀಡಲಾಗುವುದು ಎಂದರು.
ಬಸವಣ್ಣ - ಗಾಂಧಿ ಎಂಬ ವಿಷಯ ಕುರಿತು ಬಸವ ಪೀಠದ ಸಂದರ್ಶಕ ಪ್ರಾಧ್ಯಾಪಕ ಹಾಗೂ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಉಪನ್ಯಾಸ ನೀಡಿದರು. ಸಂಸ್ಥೆಯ ನಿರ್ದೇಶಕ ಪ್ರೊ. ನೀಲಗಿರಿ ತಳವಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಜಿ.ಆರ್. ತಿಪ್ಪೇಸ್ವಾಮಿ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿ ಭೈರಪ್ಪ ನಿರೂಪಿಸಿದರು.