ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಸಿದ್ಧತಾ ತರಬೇತಿ
ಎಚ್.ಡಿ. ಕೋಟೆ: ಬೆಂಗಳೂರಿನ ಬಿ.ಜಿ. ಫೌಂಡೇಷನ್ ಸಂಸ್ಥೆಯು ತಾಲೂಕಿನ ಎಲ್ಲ ಸರ್ಕಾರಿ, ಖಾಸಗಿ ಪ್ರೌಢಶಾಲೆ, ಪಿಯು ಹಾಗೂ ಪದವಿ ವಿದ್ಯಾರ್ಥಿಗಳಿಗೆ ಒಂದು ದಿನದ ಪರೀಕ್ಷಾ ಪೂರ್ವ ಸಿದ್ಧತೆ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿತ್ತು.
ಸಂಪನ್ಮೂಲ ವ್ಯಕ್ತಿಗಳಾದ ಆನಂದರಾವ್ ಮತ್ತು ಗೀತಾಲತಾ ಅವರು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಕೌಶಲ್ಯಾಭಿವೃದ್ಧಿ, ಮುಂದಿನ ಶೈಕ್ಷಣಿಕ ಉದ್ದೇಶಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಎಂ. ಶಿವಣ್ಣ ಮಾತನಾಡಿದರು. ಗ್ರಾಮೀಣ ಪ್ರದೇಶದ ಮಕ್ಕಳು ಬಾವಿಯಲ್ಲಿನ ಕಪ್ಪೆಗಳಂತೆ. ದೂರದ ಗ್ರಾಮಾಂತರ ಪ್ರದೇಶದಿಂದ ಪಟ್ಟಣಕ್ಕೆ ಬಂದು ಹೋಗುವಷ್ಟರಲ್ಲಿ ಸಮಯ ಮೀರಿ ಹೋಗಿರುತ್ತದೆ. ಇನ್ನು ಹೆಚ್ಚಿನ ವಿಷಯ ತಿಳಿದುಕೊಳ್ಳುವುದು ಎಲ್ಲಿಂದ ಬಂತು? ಇಲ್ಲಿ ಇರುವ ತರಗತಿಗಳು ಮಾತ್ರ ಗೊತ್ತಿತ್ತು. ಈಗ ಈ ಕಾರ್ಯಕ್ರಮದಿಂದ ಶಿಕ್ಷಣ ಪಡೆಯುವುದು ಹೇಗೆ ಎಂದು ತಿಳಿಯಿತು. ಪರೀಕ್ಷೆ ಎದುರಿಸುವುದು ಹೇಗೆ, ಹೇಗೆ ಬರೆಯಬೇಕು, ನಮ್ಮ ವ್ಯಕ್ತಿತ್ವವನ್ನು ಹೇಗೆ ವೃದ್ಧಿಸಿಕೊಳ್ಳಬೇಕು ಎಂಬುದು ತಿಳಿದಿದೆ ಎಂದು ವಿದ್ಯಾರ್ಥಿಗಳಾದ ಶಿವಕುಮಾರ್ ಮತ್ತು ಶ್ರುತಿ ಅಭಿಪ್ರಾಯಪಟ್ಟರು.
ಸಂಸ್ಥೆ ಅಧ್ಯಕ್ಷ ಬಿ. ಚಂದನ್‌ಕುಮಾರ್, ತಾಪಂ ಅಧ್ಯಕ್ಷೆ ಚಂದ್ರಮ್ಮ, ಪಪಂ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ಕಸಾಪ ಅಧ್ಯಕ್ಷ ಮಹೇಶ್, ಸಂಸ್ಥೆ ಕಾರ್ಯದರ್ಶಿ ಎಸ್.ಎನ್. ರಾಜಶೇಖರ್, ಪ್ರಾಂಶುಪಾಲರಾದ ಸ್ವರೂಪ್ ರಾಣಿ, ಪುಟ್ಟಯ್ಯ ಇದ್ದರು.