ವಿಶ್ವಕರ್ಮ ಸಹಕಾರ ಸಂಘಕ್ಕೆ ಆಯ್ಕೆ
ಮೈಸೂರು: ಶ್ರೀ ವಿಶ್ವಕರ್ಮ ಪತ್ತಿನ ಸಹಕಾರ ಸಂಘಕ್ಕೆ 12 ಮಂದಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಸ್ಥಾನಕ್ಕೆ ಎಸ್.ವಿಜಯಕುಮಾರ್, ಎಸ್.ಬಿ.ಅರುಣಾಚಲ, ಬಿ.ನರಸಿಂಹಮೂರ್ತಿ, ಬಿ.ಭದ್ರಚಾರ್ ದೇಸಾಣಿ, ಟಿ.ನಾಗರಾಜು, ಟಿ.ರಾಜಗೋಪಾಲ, ವೆಂಕಟರಾಜಚಾರ್, ಪುಷ್ಪಲತಾ, ಎನ್.ಕುಮಾರ್, ಹಿಂದುಳಿದ ವರ್ಗ ಮೀಸಲಾತಿಗೆ ಎಂ.ಮೊಗಣ್ಣಾಚಾರ್, ಮಹಿಳಾ ಮೀಸಲಾತಿ ಕ್ಷೇತ್ರದಿಂದ ಕೆ.ಎನ್.ಲತಾ ಮತ್ತು ಕೆ.ಲತಾ ಅಯ್ಕೆಯಾಗಿದ್ದಾರೆ. ಆದ್ದರಿಂದ ಫೆ. 15ರಂದು ನಡೆಯಬೇಕಿದ್ದ ಚುನಾವಣೆ ರದ್ದಾಗಿದೆ ಎಂದು ಚುನಾವಣಾಧಿಕಾರಿ ಎಚ್.ಬಿ. ಭರತ್ಕುಮಾರ್ ತಿಳಿಸಿದ್ದಾರೆ.
ನಾಳೆ ಲಯನ್ಸ್- 9ರ ಪ್ರಾಂತ್ಯೋತ್ಸವ
ಲಯನ್ಸ್ ಜಿಲ್ಲೆ 317ಎ, ಪ್ರಾಂತ್ಯ 9ರ ಪ್ರಾಂತ್ಯೋತ್ಸವವನ್ನು ಫೆ.16ರಂದು ಜಯಲಕ್ಷ್ಮೀಪುರಂನ ಚಿನ್ಮಯ ವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ. ಮೊಬೈಲ್ ಬಳಕೆಯಲ್ಲಿ ಅಯಸ್ಕಾಂತ ವಿಕಿರಣಗಳಿಂದ ಮನುಷ್ಯ ಮೆದುಳಿನ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಂದೇಶದೊಂದಿಗೆ ನಡೆಯುವ ಸಮಾರಂಭವು ಜಿಲ್ಲಾ ರಾಜ್ಯಪಾಲ ಪ್ರೊ.ಟಿ.ಜೆ. ರಾಮಮೂರ್ತಿ ಸಮ್ಮುಖದಲ್ಲಿ ನಡೆಯಲಿದೆ. ಹೈದರಾಬಾದ್ನ ಎಫ್ಎಆರ್ ಸಂಸ್ಥೆಯ ಉಪಾಧ್ಯಕ್ಷ ಎಸ್.ರಘುರಾಮ್ ಭಾಷಣ ಮಾಡುವರು ಎಂದು ಪ್ರಾಂತೀಯ ಅಧ್ಯಕ್ಷ ಬಾಬು ನರೇಂದ್ರ ಪ್ರಸಾದ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದೇ ವೇಳೆ ಕೇಂದ್ರ ಕಾರಾಗೃಹದಿಂದ ಇಬ್ಬರು ಕೈದಿಗಳು ಕಟ್ಟಬೇಕಿದ್ದ ದಂಡವನ್ನು ಭರಿಸಿ ಬಿಡುಗಡೆಗೊಳಿಸಲಾಗುವುದು. ಕಾರಾಗೃಹದ ಆಸ್ಪತ್ರೆಗೆ 500 ಲೀ. ಸಾಮರ್ಥ್ಯದ ಸೋಲಾರ್ ವಾಟರ್ ಹೀಟರ್ ಅಳವಡಿಕೆ, ಕೈದಿಗಳ ಮಕ್ಕಳಿಗೆ ಸಮವಸ್ತ್ರ, ನೋಟ್ ಪುಸ್ತಕ ವಿತರಣೆ, ಅಂಗವಿಕಲರಿಗೆ ವ್ಹೀಲ್ಚೇರ್, ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ, ಸ್ತನ ಕ್ಯಾನ್ಸರ್ ಪತ್ತೆ ಮಾಡುವ ಯಂತ್ರ ವಿತರಿಸಲಾಗುವುದು ಎಂದರು. ಪದಾಧಿಕಾರಿಗಳಾದ ಎಂ.ವಿ. ನಂದೀಶ್, ಮುಕ್ರಮುಲ್ಲಾ, ಎ.ಪಿ. ಭರತೇಶ್, ವೆಂಕಟರಮಣಪ್ಪ, ನರೇಶ್ ಇದ್ದರು.
ಗೃಹ ಸಾಲ ಮಾಹಿತಿ ಕಾರ್ಯಕ್ರಮ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಫೆ.16ರಂದು ಕುವೆಂಪುನಗರ ಶಾಖೆಯ ಆವರಣದಲ್ಲಿ ಗೃಹ ಸಾಲ ಕುರಿತ ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
'ಜಾಗತೀಕರಣದಿಂದ ರಾಜಕೀಯ ಬದಲಾವಣೆ'
ಮೈಸೂರು: ಭಾರತದಲ್ಲಿ ಜಾಗತೀಕರಣದ ಪರಿಣಾಮದಿಂದ ರಾಜಕೀಯ ಬದಲಾವಣೆಯಾಗಿದೆ ಎಂದು ಮೈಸೂರು ವಿವಿಯ ರಾಜ್ಯಶಾಸ್ತ್ರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮುಜಾಫರ್ ಅಸಾದಿ ಹೇಳಿದರು.
ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗವು ಯುಜಿಸಿ ನೆರವಿನೊಂದಿಗೆ ಆಯೋಜಿಸಿರುವ ಜಾಗತೀಕರಣ - ರಾಜಕಾರಣದ ವಿವಿಧ ಬಯಕೆಗಳು ಎಂಬ ವಿಷಯ ಕುರಿತು ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಶುಕ್ರವಾರ ಆಶಯ ನುಡಿಗಳಾಡಿದರು.
ಮಾಹಿತಿ ಹಕ್ಕು, ಆಹಾರ ಖಾತ್ರಿ ಹಕ್ಕು, ಕಡ್ಡಾಯ ಶಿಕ್ಷಣ ಹಕ್ಕು ಈ ಮುಂತಾದ ಹಕ್ಕುಗಳು ಜಾರಿಗೆ ಬಂದಿದ್ದು, ಆ ಮೂಲಕ ರಾಜಕೀಯದ ಮೇಲೆ ಜಾಗತೀಕರಣ ಪ್ರಭಾವ ಬೀರಿದೆ. ಸಮಾಜ ಸಹ ಜಾಗತೀಕರಣವನ್ನು ಬದುಕಿನ ಭಾಗವಾಗಿಸಿಕೊಂಡಿದೆ ಎಂದರು. ಇನ್ಸ್ಟಿಟ್ಯೂಷನ್ ಆಫ್ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಎಚ್.ಎನ್.ನಾಗರಾಜ್, ಟ್ರಸ್ಟಿ ಎಂ.ಪುಟ್ಟಸ್ವಾಮಿ ಮುಖ್ಯ ಅತಿಥಿಗಳಾಗಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಆರ್. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕರಾದ ಎಚ್.ಪಿ. ಭವ್ಯ ಹಾಗೂ ಡಾ.ಟಿ. ರಮೇಶ್ ಇದ್ದರು. ನಂತರ ನಡೆದ ಗೋಷ್ಠಿಯಲ್ಲಿ ತಜ್ಞರು ವಿವಿಧ ವಿಷಯ ಮಂಡಿಸಿದರು.
ಶಿಕ್ಷಕರ ಭರ್ತಿಗೆ ಅನುಮತಿ ನೀಡಿ; ಪ್ರತಿಭಟನೆ
ಮೈಸೂರು: ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಲು ಆಗ್ರಹಿಸಿ ಪ್ರಜಾಶಕ್ತಿ ಆಂದೋಲನ ವೇದಿಕೆಯವರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.
ರಾಜ್ಯದ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ 2002ರಿಂದ ಮತ್ತು ಪ್ರೌಢಶಾಲೆಗಳಲ್ಲಿ 2009ರಿಂದ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿಲ್ಲ. ಇದರಿಂದ ಈ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ ಎಂದು ಅವರು ಆರೋಪಿಸಿದರು.
ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ, ಉಪಾಧ್ಯಕ್ಷ ಎಸ್.ಶ್ರೀಧರಬೆಟ್ಟ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಹುಣಸೂರು, ವಿವಿಧ ಸಂಘಟನೆಗಳ ಮುಖಂಡರಾದ ಹಂ. ಲಕ್ಕೇಗೌಡ, ಬಿ.ಎಚ್. ಗೋವಿಂದೇಗೌಡ, ಎಚ್.ಎನ್. ನಂಜುಂಡರಾಜು, ಪುಷ್ಪಲತಾ, ಯಮುನಾ, ರವಿಪ್ರಕಾಶ್, ರಘು, ಪಚ್ಚಯ್ಯ, ಎಂ. ಮಹದೇವಯ್ಯ, ಶ್ರೀನಿವಾಸ, ತಿಮ್ಮನಾಯಕ ಇದ್ದರು.
ತಾಲೂಕಿನ ಹಲವು ಕೆರೆಗಳ ಒತ್ತುವರಿ ತೆರವು
ಹುಣಸೂರು: ಪಟ್ಟಣದ ಚಿಕ್ಕಹುಣಸೂರು ಕೆರೆ ಸೇರಿದಂತೆ ತಾಲೂಕಿನ ವಿವಿಧೆಡೆಯ 5 ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಗಡಿ ಗುರುತಿಸಲಾಗಿದೆ ಎಂದು ತಹಸೀಲ್ದಾರ್ ವೆಂಕಟಾಚಲಪ್ಪ ತಿಳಿಸಿದರು.
ಪಟ್ಟಣದ ಚಿಕ್ಕಹುಣಸೂರು ಕೆರೆ ಒತ್ತುವರಿಯನ್ನು ತೆರವುಗೊಳಿಸಿ ಗಡಿರೇಖೆ ನಿರ್ಮಿಸುವ ಕಾಮಕಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ತಹಸೀಲ್ದಾರ್, ತಾಲೂಕಿನ ಸೋಮನಹಳ್ಳಿಯ ಕೆರೆಯ ಒಟ್ಟು ವಿಸ್ತೀರ್ಣ 11.6 ಎಕರೆಯಿದ್ದು, ಒತ್ತುವರಿಯಾಗಿದ್ದ 1.26 ಎಕರೆಯನ್ನು ವಶಪಡಿಸಿಕೊಳ್ಳಲಾಗಿದೆ. ಅಂತೆಯೆ ಕೆಂಪನಹಳ್ಳಿ ಕೆರೆ 6.5 ಎಕರೆ(38 ಗುಂಟೆ ಒತ್ತುವರಿ), ಬೋಳನಹಳ್ಳಿ ಕೆರೆ 15.29 ಎಕರೆ(29 ಗುಂಟೆ ಒತ್ತುವರಿ) ಹಾಗೂ ಹಂದನಹಳ್ಳಿ ಕೆರೆ 9.25 ಎಕರೆ(1.28 ಎಕರೆ ಒತ್ತುವರಿ) ಹಾಗೂ ಉಯಿಗೌಡನಹಳ್ಳಿ ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ ಎಂದರು.
ಜಿಪಂ ಸದಸ್ಯ ರಮೇಶ್, ಹನಗೋಡು ಸಹಾಯಕ ತಹಸೀಲ್ದಾರ್ ನರಸಿಂಹಯ್ಯ, ಜಿಪಂ ಎಂಜಿನಿಯರ್ ಎನ್. ಜವರೇಗೌಡ, ಭೂಮಾಪಕರಾದ ಶ್ರೀಕಂಠಶಾಸ್ತ್ರಿ, ರವೀಶ್ ಇದ್ದರು.
ಯುವಕರಿಗೆ ಉದ್ಯೋಗ ನೀಡದ ಆರೋಪ
ಹುಣಸೂರು: ರಾಜೀವಗಾಂಧಿ ಚೈತನ್ಯ ಯೋಜನೆಯಡಿಯಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡದೆ ಗ್ರಾಪಂ ಕಾರ್ಯದರ್ಶಿ ಹಾಗೂ ಪಿಡಿಒ ಅನ್ಯಾಯವೆಸಗಿದ್ದಾರೆ ಎಂದು ಗ್ರಾಮದ ಮೋಹನ್ ಹಾಗೂ ಶಶಿಕುಮಾರ್ ಆರೋಪಿಸಿದ್ದಾರೆ. ಜನವರಿಯಲ್ಲಿ ಕೇವಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ, ಸಭೆ ಬಗ್ಗೆ ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡದೆ ಸದಸ್ಯರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರನ್ನು ಆಯ್ಕೆ ಮಾಡಿದ್ದಾರೆ. ಜಿಪಂ ಸಿಇಒ ಕೂಡಲೆ ಈ ಬಗ್ಗೆ ತನಿಖೆ ನಡೆಸಿ ನಿರುದ್ಯೋಗಿಗಳಿಗೆ ನ್ಯಾಯ ಒದಗಿಸುವಂತೆ ಅವರು ಒತ್ತಾಯಿಸಿದ್ದಾರೆ.
ಸರಗೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಪತ್ತೆ ಆರೋಪ
ಸರಗೂರು: ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕರಿಬಸವಯ್ಯ ಅವರು 10 ದಿನದಿಂದ ಕಚೇರಿಗೆ ಬಂದಿಲ್ಲ ಎಂದು ನಾಗರಿಕರು ದೂರಿದ್ದಾರೆ. ಪಪಂನಲ್ಲಿ ಸಾರ್ವಜನಿಕರ ಕೆಲಸ ಕಾರ್ಯಕ್ಕೆ ತೊಂದರೆ ಆಗಿದೆ. ಮುಖ್ಯಾಧಿಕಾರಿ ಕರಿಬಸವಯ್ಯ ಅವರ ಗೈರು ಹಾಜರು ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ದಿನಕ್ಕೊಂದು ಉತ್ತರ ನೀಡುತ್ತಾರೆ. ಪಪಂ ಸಿಬ್ಬಂದಿ ಯಾವಾಗ ರಜೆ ಹಾಕುತ್ತಾರೆ, ಯಾವಾಗ ಬರುತ್ತಾರೆ ಎಂಬುದೇ ತಿಳಿಯುವುದಿಲ್ಲ. ಈ ಬಗ್ಗೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಪ್ರಶ್ನಿಸುತ್ತಿಲ್ಲ. ಸದಸ್ಯರ ತಪ್ಪನ್ನು ಅಧಿಕಾರಿಗಳು, ಅಧಿಕಾರಿಗಳ ತಪ್ಪನ್ನು ಸದಸ್ಯರು ಮುಚ್ಚುತ್ತಾ ಸಾರ್ವಜನಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸರಗೂರು ಪಟ್ಟಣ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್. ರಾಜಣ್ಣ ದೂರಿದ್ದಾರೆ. ಸರಗೂರು ಪಪಂ ನಾಮ ನಿರ್ದೇಶಿತ ಸದಸ್ಯರಾಗಿ ರಂಗನಾಥ್, ಗೋವಿಂದರಾಜು, ಸುಶೀಲಮ್ಮ ಅವರನ್ನು ಸರ್ಕಾರ ನೇಮಿಸಿದ್ದರೂ ಯಾವುದೆ ಕ್ರಮ ಜರುಗಿಸಿಲ್ಲ ಎಂದಿದ್ದಾರೆ.
ಮಾ. 2ರಂದು ಗ್ರಾಪಂ ಚುನಾವಣೆ
ಕೆ.ಆರ್.ನಗರ: ತಾಲೂಕಿನ ಹಳಿಯೂರು ಗ್ರಾಪಂ ವ್ಯಾಪ್ತಿಯ ಹೊಸೂರು ಗ್ರಾಮದ 1ನೇ ಬ್ಲಾಕಿನ ಸದಸ್ಯ ಸ್ಥಾನಕ್ಕೆ ಮಾ. 2ರಂದು ಚುನಾವಣೆ ನಡೆಯಲಿದೆ. ಫೆ. 12ರಿಂದ ನಾಮಪತ್ರ ಸಲ್ಲಿಸುವ ಕಾರ್ಯ ಆರಂಭವಾಗಿದ್ದು, ಫೆ.19 ಕೊನೆ ದಿನವಾಗಿದೆ. ಫೆ.20ರಂದು ನಾಮಪತ್ರ ಪರಿಶೀಲನೆ ನಡೆಸಲಾಗುತ್ತದೆ. ಫೆ.22 ನಾಮಪತ್ರ ವಾಪಾಸ್ ಪಡೆಯಲು ಕೊನೆ ದಿನ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬೊಮ್ಮಯ್ಯ ನಿಧನದಿಂದ ಚುನಾವಣೆ ನಡೆಯುತ್ತಿದ್ದು ಸದಸ್ಯತ್ವದ ಅವಧಿ 16 ತಿಂಗಳು ಇರುವುದರಿಂದ ಸ್ಪರ್ಧಿಸಲು ಯಾರೂ ಆಸಕ್ತಿ ವಹಿಸುತ್ತಿಲ್ಲ.
ವೀಕ್ಷಕರಾಗಿ ನೇಮಕ
ಕೆ.ಆರ್. ನಗರ: ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆ ಮತ್ತು ಕಾಂಗ್ರೆಸ್ ಸದಸ್ಯತ್ವ ನೋಂದಣಿಯ ವಿಚಾರವಾಗಿ ಕಾರ್ಯೋನ್ಮುಖರಾಗುವಂತೆ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಲ್.ಪಿ. ಧರ್ಮಮಂಜುನಾಥ್ ಅವರನ್ನು ಬಿಳಿಕೆರೆ ಬ್ಲಾಕ್ ಕಾಂಗ್ರೆಸ್ ಪಕ್ಷದ ವೀಕ್ಷಕರನ್ನಾಗಿ ನೇಮಕ ಮಾಡಿದ್ದಾರೆ.
ಕುರಿ ಕಳ್ಳನ ಸೆರೆ
ಎಚ್.ಡಿ. ಕೋಟೆ: ಕುರಿ ಮಂದೆಯಿಂದ ನಾಲ್ಕು ಕುರಿಗಳನ್ನು ಕದ್ದಿದ್ದ ಆರೋಪಿಯನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.ಬೊಪ್ಪನಹಳ್ಳಿಯ ಗೋವಿಂದ(30) ಬಂಧಿತ ಆರೋಪಿ. ಎಚ್. ಮಟಕೆರೆ ಗ್ರಾಮದ ಗೇಟ್ನಲ್ಲಿ ಕುರಿಗಳೊಂದಿಗೆ ನಿಂತಿದ್ದಾಗ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪಟ್ಟಣ ಠಾಣೆಯ ಅಪರಾಧ ವಿಭಾಗದ ಎಚ್.ಬಿ. ಮಹಾಲಿಂಗರಾಜು, ಮುಖ್ಯಪೇದೆ ವೆಂಕಟೇಶ್, ಪೇದೆ ಶ್ರೀಕಂಠಸ್ವಾಮಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ವಾರ್ಷಿಕೋತ್ಸವ
ಕೆ.ಆರ್. ನಗರ: ಚುಂಚನಕಟ್ಟೆ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಫೆ.17ರ ಸಂಜೆ 4ಕ್ಕೆ ನಡೆಯಲಿದ್ದು, ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿ, ಶಾಸಕ ಸಾ.ರಾ. ಮಹೇಶ್, ಮೈಸೂರು ವಿವಿಯ ಕುಲಪತಿ ಪ್ರೊ.ರಂಗಪ್ಪ, ಶ್ರೀ ಸೋಮನಾಥೇಶ್ವರ ಸ್ವಾಮೀಜಿ ಭಾಗವಹಿಸುವರು.
ಇಂದು ಮಾಸಿಕ ಸಭೆ
ಕೆ.ಆರ್. ನಗರ: ತಾಲೂಕಿನ ಕಾವೇರಿ ಗ್ರಾಮಾಂತರ ಕೇಬಲ್ ಆಪರೇಟರ್ಗಳ ಮಾಸಿಕ ಸಭೆಯು ಫೆ.15ರ ಬೆಳಗ್ಗೆ 11ಕ್ಕೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಚುಂಚನಕಟ್ಟೆ ಸಿ.ಜಿ. ಮಧುಸೂದನ ತಿಳಿಸಿದ್ದಾರೆ.
ನಾಳೆಯಿಂದ ಉತ್ತನಹಳ್ಳಿ ಜಾತ್ರೆ ಆರಂಭ
ಮೈಸೂರು: ಉತ್ತನಹಳ್ಳಿ ಗ್ರಾಮದಲ್ಲಿರುವ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವವು ಫೆ.16ರಿಂದ 18ರವರೆಗೆ ನಡೆಯಲಿದೆ.
ಫೆ.16ರ ಬೆಳಗ್ಗೆಯಿಂದ ಅಗ್ರೋಧಕ ಸಮೇತ ಆಲಯ ಪ್ರವೇಶ, ರುದ್ರಾಭಿಷೇಕ, ಸುವರ್ಣಾಲಂಕಾರ, ಸರಾಷ್ಟ್ರಾಶೀರ್ವಾದ ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ 1ಕ್ಕೆ ಪ್ರಸಾದ ವಿನಿಯೋಗ, ರಾತ್ರಿ 9.30ಕ್ಕೆ ಅಮ್ಮನವರ ಕನ್ಯಾಕನ್ನಡಿ ಉತ್ಸವ ಪುಣ್ಯಾಹ ಮಂಟಪೋತ್ಸವ ನಡೆಯಲಿದೆ.
ಫೆ.17ರಂದು ತೃತೀಯ ಉತ್ತರ ನಕ್ಷತ್ರ ಶ್ರೀಯವರಿಗೆ ಏಕದಶವಾರ ರುದ್ರಾಭಿಷೇಕ ಸಹಸ್ರ ನಾಮಾರ್ಚನೆ, ವಿಶೇಷ ಪೂಜೆ, ಫೆ.18ರಂದು ತೃತೀಯ ಹಸ್ತ ನಕ್ಷತ್ರ ಶ್ರೀಯವರಿಗೆ ಏಕದಶವಾರ ರುದ್ರಾಭಿಷೇಕ ಇತ್ಯಾದಿ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ದೇವಸ್ಥಾನದ ಆಗಮಿಕರಾದ ಎಸ್.ಸಿ. ಮಹದೇವಪ್ರಸಾದ್ ತಿಳಿಸಿದ್ದಾರೆ.
ಭಕ್ತ ಪ್ರಹ್ಲಾದ ನಾಟಕ: ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ಹಾಗೂ ಸಂಗೊಳ್ಳಿ ರಾಯಣ್ಣ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಫೆ.17ರ ಸಂಜೆ 6.30ಕ್ಕೆ ರಂಗಗೀತೆ, ಪೌರಾಣಿಕ ನಾಟಕದ ದೃಶ್ಯಾವಳಿ, ರಾತ್ರಿ 8ಕ್ಕೆ ಸುಗಮ ಸಂಗೀತ ಕಾರ್ಯಕ್ರಮ ಹಾಗೂ ರಾತ್ರಿ 9.30ಕ್ಕೆ ಭಕ್ತ ಪ್ರಹ್ಲಾದ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ. ಅರಸೀಕೆರೆಯ ಬಂದೂರು ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಡ್ರಾಮಿ ಸೀನರಿಯ ಜ್ವಾಲಾಮುಖಿ ಕಲಾವೇದಿಕೆಯಲ್ಲಿ ಗ್ರಾಮಸ್ಥರೇ ಅಭಿನಯಿಸಲಿರುವ ನಾಟಕ ಪ್ರದರ್ಶನವಾಗಲಿದೆ.
ರಾಜಕೀಯ ದ್ವೇಷ; ಕುಟುಂಬಕ್ಕೆ ಬಹಿಷ್ಕಾರ
ಮೈಸೂರು: ಹಳೆ ರಾಜಕೀಯ ದ್ವೇಷದಿಂದ ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದು, ಜಿಲ್ಲಾಡಳಿತ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಹುಣಸೂರು ತಾಲೂಕಿನ ಕಲ್ಕುಣಿಕೆ ಗ್ರಾಮದ ನರಸಿಂಹಸ್ವಾಮಿ ಕೋರಿದ್ದಾರೆ.
ಕಲ್ಕುಣಿಕೆ ಬಡಾವಣೆಯ 2ನೇ ವಾರ್ಡ್ನಲ್ಲಿ ನಾವು ವಾಸವಾಗಿದ್ದೇವೆ. ಕಳೆದ ವರ್ಷ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶಿವರಾಜು ಎಂಬವರ ಪತ್ನಿ ಎದುರು ನಮ್ಮ ಚಿಕ್ಕಮ್ಮಳನ್ನು ಪ್ರತಿಸ್ಪರ್ಧಿಯಾಗಿ ನಿಲ್ಲಿಸಿದ್ದರಿಂದ ಶಿವರಾಜ್ ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ ಎಂದು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ಕುರುಬ ಸಮುದಾಯಕ್ಕೆ ಸೇರಿದ ನಮಗೆ ಸ್ವಜಾತಿಯವರೇ ತೊಂದರೆ ನೀಡುತ್ತಿದ್ದಾರೆ. ಇತ್ತೀಚೆಗೆ ಗ್ರಾಮದಲ್ಲಿ ಪಂಚಾಯಿತಿ ನಡೆಸಿ ನನ್ನಿಂದ 1.75 ಲಕ್ಷವನ್ನು ದಂಡ ರೂಪದಲ್ಲಿ ಕಟ್ಟಿಸಿಕೊಂಡಿದ್ದಾರೆ.
ಆದರೂ ಕಿರುಕುಳ ಮಾತ್ರ ತಪ್ಪಿಲ್ಲ. ಊರಿನಲ್ಲಿ ಯಾರೊಂದಿಗೆ ಮಾತನಾಡುವಂತಿಲ್ಲ ಎಂದು ನಿರ್ಬಂಧ ವಿಧಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.