ಆರ್ಥಿಕ ಪ್ರಗತಿಗೆ ಪರಿಸರದ ಪಾತ್ರ ಪ್ರಮುಖ
ಮೈಸೂರು: ದೇಶದ ಆರ್ಥಿಕ ಪ್ರಗತಿಯಲ್ಲಿ ಪರಿಸರ ಸಂರಕ್ಷಣೆಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅರಣ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಎ.ಸಿ. ಲಕ್ಷ್ಮಣ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಅಧ್ಯಯನ ವಿಭಾಗ ಸೋಮವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲೆ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆ ಮತ್ತು ಆರ್ಥಿಕತೆ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಸರ್ಕಾರ ವನ್ಯಜೀವಿಗಳು ಕಾಡಿನಿಂದ ಹೊರ ಬಾರದಂತೆ ಕ್ರಮ ಕೈಗೊಳ್ಳಲು 200 ಕೋಟಿ ಮೀಸಲಿಟ್ಟಿದೆ. ಆದರೆ ಇದು ಆನೆ ಮುಂತಾದ ಪ್ರಾಣಿಗಳಿಗೆ ದಿಗ್ಬಂಧನ ವಿಧಿಸಿದಂತೆ. ನಾವು ಮಾಡಬೇಕಿರುವುದು ಆನೆಗಳಿಗೆ ಬೇಕಾದ ಮೇವು ನೀಡಬೇಕು. ಅದು ಬಿಟ್ಟು ಕಾಡಿನಿಂದ ಆಚೆ ಬರದಂತೆ ಮಾಡುವುದಲ್ಲ ಎಂದರು.
ಕಾಡಿನಲ್ಲಿ ಸರಿಯಾಗಿ ಮೇವು ಸಿಗದಿದ್ದಾಗ ಆನೆಗಳು ಕಾಡಿನಿಂದ ಹೊರ ಬರುತ್ತವೆಯಷ್ಟೆ. ಆದ್ದರಿಂದ ನಾವು ಪ್ರಾಣಿಗಳಿಗೆ ಆಹಾರ ಸಿಕ್ಕರೆ ಸಾಕಷ್ಟೆ. ಪರಿಸರ ಉಳಿಯದಿದ್ದರೆ ಮಳೆ ಕಡಿಮೆ ಆಗಿ ಬೆಳೆ ನಷ್ಟವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಉತ್ತಮ ಮಳೆಯಾದರೆ ರೈತರು ಸಂತೋಷದಿಂದ ಇರುತ್ತಾರೆ. ಆಗ ದೇಶದ ಆರ್ಥಿಕ ಸ್ಥಿತಿಯು ಉತ್ತಮವಾಗಿ ಇರುತ್ತದೆ. ಕೇವಲ ಜನರನ್ನು ಮೆಚ್ಚಿಸಲು ಹಣ ಬಿಡುಗಡೆ ಮಾಡಬಾರದು ಎಂದು ಅವರು ಹೇಳಿದರು.
ಎಪಿಪಿಸಿಸಿಎಫ್ ಅಜಯ್ ಎ.ದೇಸಾಯಿ ಮಾತನಾಡಿ, ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಕಾಡಿನ ಪ್ರಮಾಣ ಕಡಿಮೆ ಇದೆ. ಆದ್ದರಿಂದ ನಾವು ಕಾಡನ್ನು ಹೆಚ್ಚು ಹೆಚ್ಚು ಬೆಳೆಸಬೇಕಿದೆ. ಅಲ್ಲದೆ ಗಿರಿಜನರು ಕಾಡಿನಲ್ಲಿಯೇ ಏಕೆ ಇರಬೇಕು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದರು.
ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ಮೈಸೂರು ವಿವಿಯ ಶತಮಾನೋತ್ಸವ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸರಣಿ ಉಪನ್ಯಾಸ ಆರಂಭಿಸಲು ಎಲ್ಲಾ ವಿಭಾಗಗಳಿಗೂ ಸೂಚನೆ ನೀಡುವುದಾಗಿ ತಿಳಿಸಿದರು.
ವಿಭಾಗದ ಅಧ್ಯಕ್ಷ ಪ್ರೊ.ಎಸ್.ಎಲ್. ಬೆಳಗಲಿ, ಪ್ರಾಧ್ಯಾಪಕ ಡಾ.ಎಸ್. ಶ್ರೀಕಂಠಸ್ವಾಮಿ ಇದ್ದರು.