ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕನ್ನಡ ಸಾಹಿತಿಗಳ ಇಂಗ್ಲಿಷ್ ಪಿಂಚಣಿ

Rashmi Kasaragodu
Updated On : 18 Feb 2014, 2:21 am

ಕ.ಪ್ರ.ವಾರ್ತೆ   ಮೈಸೂರು   ಫೆ. 17
ಕನ್ನಡದಲ್ಲೆ ಶಿಕ್ಷಣ ನೀಡಬೇಕು ಎನ್ನುವ ಕೆಲವು ಸಾಹಿತಿಗಳು ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತಿ ವೇತನ ಪಡೆಯುತ್ತಿರುತ್ತಾರೆ ಎಂದು ಖ್ಯಾತ ಸಾರೋದ್ ವಾದಕ ಪಂಡಿತ್ ಡಾ.ರಾಜೀವ್ ತಾರಾನಾಥ್ ಟೀಕಿಸಿದರು.
ಮೈಸೂರು ವಿವಿ ಯುಜಿಸಿ ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯವು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಸಂಸ್ಕೃತ ಅಧ್ಯಯನ ವಿಭಾಗದ ಸಹಯೋಗದಲ್ಲಿ 8ನೇ ಭಾರತೀಯ ಸಾಹಿತ್ಯ ಪುನಶ್ಚೇತನ ಶಿಬಿರದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಅನೇಕ ಸಾಹಿತಿಗಳು ಕನ್ನಡ ಮಾತ್ರ ಓದಿ, ಇಂಗ್ಲಿಷ್ ಬೇಡ ಎನ್ನುತ್ತಾರೆ. ಅವರು ಮಾತ್ರ ಸರ್ಕಾರದ ದುಡ್ಡಿನಲ್ಲಿ ವಿದೇಶಕ್ಕೆ ತೆರಳಿ ಇಂಗ್ಲಿಷ್ ವಿಷಯದಲ್ಲಿಯೇ ಪಿಎಚ್.ಡಿ ಪಡೆಯುತ್ತಾರೆ. ಇಂಗ್ಲಿಷ್ ವಿಭಾಗದಲ್ಲಿ ಕೆಲಸ ಮಾಡಿ ನಿವೃತ್ತಿ ಬಳಿಕ ಪಿಂಚಣಿ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವು ಬುದ್ಧಿಜೀವಿಗಳ ಹೇಳಿಕೆ ಇದೆಯಲ್ಲ, ಅದು ನೊರೆಯಂತೆ, ತೂಕ ಇರುವುದಿಲ್ಲ ಎಂದು ಟೀಕಿಸಿದರು.
ಪುನಶ್ಚೇತನ ಎಂಬ ಪದ ಕನ್ನಡವೋ, ಸಂಸ್ಕೃತವೋ ಗೊತ್ತಿಲ್ಲ. ಆದರೆ ರಿಫ್ರೆಷರ್ ಎಂಬ ಪದವನ್ನೇ ನಮ್ಮದಾಗಿಸಿಕೊಳ್ಳಬಹುದು. ಅಂತೆಯೇ ಪ್ರಾಂಶುಪಾಲರ ಪರಿಪ್ರೇಕ್ಷಣ ಎಂಬ ಪದ ಇದೆ. ಇದು ಯಾರಿಗೆ ಅರ್ಥವಾಗುತ್ತದೆ. ರಿಫ್ರೆಷರ್ ಎಂದರೆ ನಮ್ಮ ಹಲ್ಲು ಉದುರಿ ಹೋಗುವುದಿಲ್ಲ. ತಮಿಳು ತನ್ನತನ ಕಂಡುಕೊಂಡು ಚೆನ್ನಾಗಿ ಬೆಳೆದಿದೆ. ಆದರೆ ನಾವು ಕನ್ನಡತನ ಕಂಡುಕೊಂಡಿಲ್ಲ. ನಮ್ಮ ನಮ್ಮ ಭಾಷೆಗಳು ಭಿನ್ನವಾದರೂ ಸಂಗೀತ ಮತ್ತು ಅಡುಗೆ ನಮ್ಮನ್ನು ಒಂದುಗೂಡಿಸುತ್ತದೆ ಎಂದರು.
ಹೊಟ್ಟೆ ಕಿಚ್ಚಾಗುತ್ತದೆ: ನಾನು ಇಂಗ್ಲಿಷ್ ಶಿಕ್ಷಕನಾಗಿ ಕೆಲಸ ಮಾಡಿದ್ದೇನೆ. ಆಗ ನಮಗೆ 1,500 ಸಂಬಳ ನೀಡುತ್ತಿದ್ದರು. ಆದರೆ ಈಗ ಸರ್ಕಾರ ನೀಡುತ್ತಿರುವ ಸಂಬಳ ನೋಡಿದರೆ ನನಗೆ ಹೊಟ್ಟೆ ಕಿಚ್ಚು ಬರುತ್ತದೆ. ಈಗ ನಿಮಗೆ ಪುನಶ್ಚೇತನ ಶಿಬಿರಗಳನ್ನು ನಡೆಸಲಾಗುತ್ತದೆ.
ಉಳಿಯಲು ಉತ್ತಮ ಕೊಠಡಿಗಳು, ಊಟದ ವ್ಯವಸ್ಥೆಯೂ ಇರುತ್ತದೆ. ಆದರೆ ನಾವು ಕೆಲಸ ಮಾಡುವಾಗ ಇದು ಇರಲಿಲ್ಲ. ಆದರೂ ಉತ್ತಮ ಶಿಕ್ಷಕರಿದ್ದರು. ಬದ್ಧತೆಯಿಂದ ಕೆಲಸ ಮಾಡುತ್ತಿದ್ದರು. ಈ ಶಿಬಿರದ ಸಮಾರೋಪದಲ್ಲಿ ತಾವು ಪಡೆಯುವ ಸಂಬಳಕ್ಕೆ ಬದ್ಧರಾಗಿ ಕೆಲಸ ಮಾಡುತ್ತಿದ್ದೇವಾ ಎಂಬ ಪ್ರಶ್ನೆ ಕೇಳಿಕೊಳ್ಳಬೇಕು ಎಂದು ಹೇಳಿದರು.
ಯುಜಿಸಿ ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯದ ನಿರ್ದೇಶಕ ಪ್ರೊ.ಲಿಂಗರಾಜ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಎಂ.ಆರ್. ವೀರಭದ್ರಸ್ವಾಮಿ, ಪ್ರೊ.ಪ್ರೀತಿ ಶ್ರೀಮಂಧರ ಕುಮಾರ್ ಮತ್ತು ಡಾ.ಕೆ. ನಾರಾಯಣ ಭಟ್ಟ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement