ಖಾತೆ ಮಾಡಿಕೊಡಲು ಲಂಚಕ್ಕೆ ಒತ್ತಡ: ಆರೋಪ
ಕೆ.ಆರ್. ನಗರ: ತಾಲೂಕಿನ ದೊಡ್ಡೇಕೊಪ್ಪಲು ಗ್ರಾಪಂ ವ್ಯಾಪ್ತಿಯಲ್ಲಿ ನೂತನ ಬಡಾವಣೆಗಳು ನಿರ್ಮಾಣಗೊಳ್ಳುತ್ತಿದ್ದು, ಅಧ್ಯಕ್ಷ ಮತ್ತು ಅಭಿವೃದ್ಧಿ ಅಧಿಕಾರಿ ನಿವೇಶನಗಳ ಖಾತೆ ಮಾಡಿಕೊಡಲು ಹಣ ಕೇಳುತ್ತಿದ್ದು, ಪ್ರಶ್ನಿಸುವವರಿಗೆ ಬಡಾವಣೆ ನಿರ್ಮಾಣ ಅಕ್ರಮ ಎಂದು ಬ್ಲಾಕ್ಮೇಲ್ ಮಾಡುತ್ತಾರೆ ಎಂದು ಗ್ರಾಪಂ ಸದಸ್ಯ ರಾಜು ಆರೋಪಿಸಿದರು.
ಪಟ್ಟಣ ಸಮೀಪದ ಕಾಳೇನಹಳ್ಳಿ ಸರ್ವೆ ನಂ.138/2, 136/1 ರಲ್ಲಿ ಸುಮಾರು 4 ಎಕರೆ ಜಮೀನನ್ನು ನಾನು ಚಂದ್ರೇಗೌಡ ಎಂಬವರಿಂದ ಖರೀದಿಸಿ, ಜಮೀನನ್ನು ನಿವೇಶನಗಳಾಗಿ ಪರಿವರ್ತಿಸಲು ನಗರಾಭಿವೃದ್ಧಿ ಇಲಾಖೆಗೆ 4.75 ಲಕ್ಷ, ಪಂಚಾಯಿತಿಗೆ 1.52 ಲಕ್ಷ ಕಂದಾಯ ಪಾವತಿಸಿ ಸರ್ಕಾರದ ನಿಯಮದಂತೆ ಬಡಾವಣೆ ನಿರ್ಮಿಸಿದ್ದೇನೆ. ಆದರೂ ಪಂಚಾಯಿತಿ ಅಧ್ಯಕ್ಷ ಬಿ.ಎಂ. ಗಿರೀಶ್ ವಿನಾಕಾರಣ ನನ್ನ ವಿರುದ್ಧ ಇಲ್ಲ -ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇದೇ ಬಡಾವಣೆಯ 20 ನಿವೇಶನಗಳನ್ನು ಖಾತೆ ಮಾಡಿ, ಅಧ್ಯಕ್ಷರ ಆದೇಶದಂತೆ ರಿಜಿಸ್ಟ್ರಾರ್ ಮಾಡಲು 9 ಪತ್ರ ನೀಡಿದ್ದಾರೆ.
ಇದನ್ನು ನೀಡಲು ಪಿಡಿಒ ನನ್ನಿಂದ ಒಂದು ನಿವೇಶನಕ್ಕೆ ಎರಡು ಸಾವಿರ ಲಂಚ ಪಡೆದಿರುತ್ತಾರೆ. ಇನ್ನುಳಿದ ನಿವೇಶನಗಳನ್ನು ಖಾತೆ ಮಾಡಿ 9 ಪತ್ರ ನೀಡುವಂತೆ ಮನವಿ ಮಾಡಿದಾಗ, ಲಂಚ ನೀಡಲಿಲ್ಲವೆಂಬ ಕಾರಣಕ್ಕಾಗಿ ನನ್ನ ನಿವೇಶನಗಳಲ್ಲಿ ಹಾರಂಗಿ ನಾಲೆ ಹೋಗಿದೆ ಎಂದು ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಬ್ಲಾಕ್ಮೇಲ್ ಮಾಡುತ್ತಿದ್ದಾರೆಂದು ದೂರಿದರು.
ಇಷ್ಟೆಲ್ಲಾ ಆರೋಪ ಮಾಡುವ ಅಧ್ಯಕ್ಷರು ಮತ್ತು ಪಿಡಿಒಗೆ ನಾನು ಸದಸ್ಯ ಎಂಬುವುದನ್ನು ತಿಳಿಯದೇ ನನ್ನಿಂದಲೇ 60 ಸಾವಿರ ಲಂಚ ಪಡೆದು 20 ನಿವೇಶನಗಳಿಗೆ 9 ಕೊಡುವಾಗ ಹಾರಂಗಿ ನಾಲೆ ಹೋಗಿರಲಿಲ್ಲವೇ ಎಂದು ಪ್ರಶ್ನಿಸಿದರಲ್ಲದೆ, ಅಧ್ಯಕ್ಷ ಗಿರೀಶ್ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದು, ರಾಜಕೀಯ ದ್ವೇಷದಿಂದ ನನ್ನ ವಿರುದ್ದ ಅಪ-ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು. ಗ್ರಾಪಂ ಸದಸ್ಯರಾದ ಶಿವಾಜಿ, ಬಸವರಾಜನಾಯಕ, ರಾಮಲಿಂಗೇಗೌಡ, ಕೆ.ಎನ್. ರವಿ, ಮುಖಂಡರಾದ ನಟರಾಜು ಇದ್ದರು.
ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ
ಟಿ. ನರಸೀಪುರ: ವಿಶೇಷ ಘಟಕ ಯೋಜನೆ ಅನುದಾನದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಿಮೆಂಟ್ ರಸ್ತೆಗಳ ನಿರ್ಮಾಣವಾಗುತ್ತಿವೆ ಎಂದು ತಾಪಂ ಅಧ್ಯಕ್ಷ ಚಿದರವಳ್ಳಿ ನಟರಾಜು ಹೇಳಿದರು. ತಾಲೂಕಿನ ಮಲಿಯೂರು ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವಿಶೇಷ ಘಟಕ ಯೋಜನೆಯಡಿ 25 ಲಕ್ಷ ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್, ಮಾಜಿ ಶಾಸಕ ಎಸ್. ಕೃಷ್ಣಪ್ಪ, ತಾಪಂ ಸದಸ್ಯ ಕೊಡಗಹಳ್ಳಿ ರಾಮಕೃಷ್ಣ, ಉಕ್ಕಲಗೆರೆ ರಾಜು, ಎಂ. ರಾಜು, ಪುರಸಭಾ ಸದಸ್ಯರಾದ ಮುನಾವರ ಪಾಷ, ರವೀಂದ್ರಕುಮಾರ್, ಮಂಜುನಾಥ್ ಇದ್ದರು.