ದುಗ್ಗುಲ್ಲಮ್ಮ ಜಾತ್ರಾ ಮಹೋತ್ಸವ
ದೂರ ಗ್ರಾಮ (ಮೈಸೂರು ತಾ): ಗ್ರಾಮದೇವತೆ ದುಗ್ಗುಲ್ಲಮ್ಮನ ಜಾತ್ರಾ ಮಹೋತ್ಸವ ಫೆ.18 ಮತ್ತು 19 ರಂದು ತಾಲೂಕಿನ ದೂರ ಗ್ರಾಮದಲ್ಲಿ ನಡೆಯಲಿದೆ. ಫೆ.18 ರಂದು ಊರ ಮುಂಭಾಗ ಇರುವ ಹರಕೆ ಕಟ್ಟೆಯಲ್ಲಿ ಸೇರುವ ಗ್ರಾಮದ ರೈತರು, ತಾವು ಬೆಳೆದ ದವಸ ಧಾನ್ಯಗಳನ್ನು ತಂದು ದೇವರಿಗೆ ಹರಕೆ ಸಮರ್ಪಿಸುವರು. ಆದಾದ ನಂತರ ಊರಿನ ಮಧ್ಯೆ ಭಾಗದಲ್ಲಿ ರಾತ್ರಿ ಮದ್ದು ಸಿಡಿಸಲಾಗುವುದು. ಅಲ್ಲಿಂದ ಉತ್ಸವವು ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಗ್ರಾಮದಿಂದ ಹೊರಭಾಗದಲ್ಲಿರುವ ದುಗ್ಗುಲ್ಲಮ್ಮ ದೇವಸ್ಥಾನಕ್ಕೆ ತಲುಪುವುದು. ಬೆಳಗಿನ ಜಾವ ಮತ್ತೆ ಉತ್ಸವವು ಗ್ರಾಮಕ್ಕೆ ಹಿಂದಿರುಗುವುದು. 19 ರಂದು ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ ನಡೆಸಲಾಗುವುದು. ಇದಾದ ನಂತರ ಸಂಜೆ ಮತ್ತೆ ದೇವಿಯ ಉತ್ಸವ ನಡೆಯಲಿದೆ. ಈ ಜಾತ್ರೆಯಲ್ಲಿ ಅಕ್ಕಪಕ್ಕದ ಗ್ರಾಮದವರು ಭಾಗವಹಿಸುವರು.
ದೇವಸ್ಥಾನದ ಅಭಿವೃದ್ಧಿಗಾಗಿ 2 ಲಕ್ಷ ಅನುದಾನ: ವಿಶ್ವನಾಥ್
ಕಿತ್ತೂರು: ಪಿರಿಯಾಪಟ್ಟಣ ತಾಲೂಕು ಕಿತ್ತೂರಿನಲ್ಲಿ ಶ್ರೀ ಮಲ್ಲಿಕಾರ್ಜುನಸ್ವಾಮಿ ಹಾಗೂ ನಂದೀಶ್ವರಸ್ವಾಮಿ ದೇವಸ್ಥಾನ ಮತ್ತು ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಮುಖ್ಯ ಅತಿಥಿಯಾಗಿದ್ದ ಸಂಸದ ಎಚ್.ವಿಶ್ವನಾಥ್ ಮಾತನಾಡಿ, ದೇವಸ್ಥಾನದ ಅಭಿವೃದ್ಧಿಗಾಗಿ ಎರಡು ಲಕ್ಷ ರು. ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು. ವಿಶ್ವಕರ್ಮ ಸಮಿತಿಯ ಸದಸ್ಯರನ್ನು ಕರೆದು ಸಭೆ ನಡೆಸುವುದಾಗಿ ತಿಳಿಸಿದರು. ರಾಜ್ಯದಲ್ಲಿ ವಿಶ್ವಕರ್ಮ ಜನಾಂಗದವರು ಕಡಿಮೆ ಸಂಖ್ಯೆಯಲ್ಲಿದ್ದು, ಅವರ ಅಭಿವೃದ್ಧಿಗೆ ಸಹಕರಿಸುವುದಾಗಿ ಹೇಳಿದರು. ಜಿಪಂ ಮಾಜಿ ಸದಸ್ಯರಾದ ಕೆ.ಸಿ. ಕೃಷ್ಣಪ್ಪ, ಎಚ್.ಎಸ್. ದೇವರಾಜ, ಚುಂಚನಕಟ್ಟೆ ಹೋಬಳಿಯ ಕಾಂಗ್ರೆಸ್ ಅಧ್ಯಕ್ಷರು, ಕೃಷ್ಣಮೂರ್ತಿ, ನಾಗೇಶ್, ಮಂಜು, ರವಿಕುಮಾರ್, ಮೋನೇಶ್ ಆಚಾರ್ ಇದ್ದರು.