ನಾಳೆಯಿಂದ ರಂಗಾಯಣದಲ್ಲಿ ದೆಹಲಿ ತಂಡದ ಎರಡು ನಾಟಕ
ಮೈಸೂರು: ಹಿರಿಯ ನಿರ್ದೇಶಕ ಎಂ.ಎಸ್. ಸತ್ಯು ಅವರು ನಿರ್ದೇಶಿಸಿರುವ ನಾಟಕ ಸೇರಿದಂತೆ ಎರಡು ಹಿಂದಿ ನಾಟಕಗಳ ಪ್ರದರ್ಶನ ರಂಗಾಯಣದಲ್ಲಿ ಫೆ.19 ಮತ್ತು 20 ರಂದು ನಡೆಯಲಿದೆ.
ಕೆಲವು ವರ್ಷಗಳ ಹಿಂದೆ ದೇಶದ ವಿವಿಧ ಭಾಗಗಳಲ್ಲಿ ಪ್ರದರ್ಶಿಸಿದ್ದ ದಾನಿಶ್ ಇಕ್ಬಾಲ್ ರಚಿಸಿರುವ ಧಾರ ಶಿಕೋ ಎಂಬ ನಾಟಕವನ್ನು ಹೊಸ ಕಲಾವಿದರೊಂದಿಗೆ ರಂಗಾಯಣದ ವನರಂಗದಲ್ಲಿ ಫೆ.19 ರಂದು ಸಂಜೆ 7.30ಕ್ಕೆ ದೆಹಲಿಯ ಇಂಪ್ರೆಸಾರಿಯೋ ಏಷ್ಯಾ ತಂಡದವರು ಪ್ರದರ್ಶಿಸುವರು ಎಂದು ನಿರ್ದೇಶಕ ಎಂ.ಎಸ್. ಸತ್ಯು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಧಾರಾ ಶಿಕೋ ನಾಟಕದ ಆಶಯ ಕೋಮುವಾದವನ್ನು ತಿರಸ್ಕರಿಸುವುದು. ಮಿಶ್ರ ಸಂಸ್ಕೃತಿಯ ಉಪಾಸಕನಾದ ಧಾರಾ ಧಾರ್ಮಿಕ ಮತಾಂಧತೆ ಮತ್ತು ಮೂಲಭೂತವಾದಕ್ಕೆ ಬಲಯಾದವನು. ಅರಮನೆಯ ಪ್ರಭುತ್ವ ದಿಕ್ಕರಿಸುವ ಧಾರಾ ಸೂಫಿ ಪಂಥದೆಡೆಗೆ ಸಾಗುವುದು ಹಾಗೂ ತಾನೇ ಪರ್ಶಿಯನ್ ಭಾಷೆಗೆ ಭಾಷಾಂತರಿಸುವ ಉಪನಿಷತ್ ಮೇಲೆ ಕೇಂದ್ರಿಕೃತವಾಗಿದೆ ಎಂದರು.
ಫೆ.20 ರಂದು ಭೂಮಿಗೀತಾದಲ್ಲಿ ಕುಚ್ ಇಷ್ಕ್ ಕಿಯಾ ಕುಚ್ ಕಾಮ್ ಎಂಬ ನಾಟಕವನ್ನು ಇದೇ ತಂಡ ಅಭಿನಯಿಸುತ್ತಿದ್ದು, ಕ್ರಾಂತಿಕಾರಿ ಕವಿಗಳಲ್ಲಿ ಪ್ರಮುಖನಾದ ಫಯೀಜ್ ಆಹಮದ್ ಜೀವನ ಹಾಗೂ ಕಾವ್ಯದ ಮೇಲೆ ಈ ನಾಟಕವು ರಚಿತವಾಗಿದೆ. ಈ ಕವಿ ಭಾರತಕ್ಕೆ ಸೇರಿದವರಾದರೂ, ವಿಭಜನೆಯಾದಾಗ ಪಾಕಿಸ್ತಾನದಲ್ಲಿಯೇ ಉಳಿಯುತ್ತಾರೆ.
ತನ್ನ ದೇಶ ಪ್ರಭುತ್ವದ ಹಿಡಿತದಿಂದ ಅನೇಕ ಹಿಂಸೆಗಳನ್ನು ಅನುಭವಿಸುವ ಕಥಾನಕವನ್ನು ಈ ಪ್ರಯೋಗ ಒಳಗೊಂಡಿದೆ. ನಿರ್ದೇಶನ ಕೆ.ಕೆ. ಕೋಯ್ಲಿ ಅವರದು ಎಂದು ಅವರು ತಿಳಿಸಿದರು.
ನಾಟಕದಲ್ಲಿ 20 ಮಂದಿ ಕಲಾವಿದರು ಹಾಗೂ 8 ಮಂದಿ ಕಥಕ್ ನೃತ್ಯ ಕಲಾವಿದರು ಅಭಿನಯಿಸುವರು. ಮೈಸೂರಿನಲ್ಲಿ ಪ್ರಯೋಗ ನಡೆಸಿದ ನಂತರ ಬೆಂಗಳೂರು, ಧಾರವಾಡ, ಸಾನೆಹಳ್ಳಿಯಲ್ಲಿಯೂ ಪ್ರದರ್ಶನ ನಡೆಸಲಾಗುವುದು. ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ ಅಭಿನಯಿಸಲು ರಂಗಾಯಣವಾಗಲಿ ಅಥವಾ ಬೇರೆ ತಂಡವಾಗಲಿ ಪ್ರಯತ್ನಿಸಬಹುದು ಎಂದರು.
ಬಾಸುದೇವ ಸೋಮಾನಿ ಕಾಲೇಜಿನ ಪ್ರಾಂಶುಪಾಲ ಹಾಗೂ ರಂಗಕರ್ಮಿ ಪ್ರೊ.ಎಚ್.ಎಸ್. ಉಮೇಶ್ ಇದ್ದರು.