ಬರೀ ಹಕ್ಕು ಕೇಳೋದು ಮಾರಕ
ಕ.ಪ್ರ.ವಾರ್ತೆ ಕೆ.ಆರ್. ನಗರ ಫೆ.17
ಸಂವಿಧಾನ ದತ್ತವಾಗಿರುವ ಕಾನೂನನ್ನು ಪರಿಪಾಲಿಸದ ನಾವು ಕೇವಲ ಹಕ್ಕು ಕೇಳುವ ಮನೋಭಾವನೆ ಬೆಳೆಸಿಕೊಳ್ಳುತ್ತಿರುವುದು ಸಮಾಜಕ್ಕೆ ಮಾರಕವಾಗಿದ್ದು, ಈ ಯೋಚನೆ ಬದಲಾಗಬೇಕು ಎಂದು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ತೋಪಮ್ಮನ ದೇವಾಲಯದ ಪಕ್ಕ ತಾ. ವೀರಶೈವ ಮಹಾಸಭಾದ ವತಿಯಿಂದ ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಬಸವ ಭವನ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ನಂತರ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಮೊದಲು ನಾವು ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಸಮಾಜದಲ್ಲಿ ಸರ್ವರು ಪರಸ್ಪರ ಸಾಮರಸ್ಯದಿಂದ ಬಾಳಿದರೆ ಮಹಾತ್ಮಗಾಂಧಿಯವರು ತಂದು ಕೊಟ್ಟ ಸ್ವಾತಂತ್ರ್ಯಕ್ಕೆ ಬೆಲೆ ಬರುತ್ತದೆ. ಜತೆಗೆ ಅವರ ಹೋರಾಟಕ್ಕೆ ಗೌರವ ನೀಡಿದಂತಾಗುತ್ತದೆ. ಸಂಸ್ಕೃತಿ ಮತ್ತು ಏಕತೆ ಕಾಪಾಡಬೇಕಾದುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.
ಸರ್ವಧರ್ಮ ಭವನವಾಗಲಿ: ಪಟ್ಟಣದಲ್ಲಿ ನಿರ್ಮಿಸುತ್ತಿರುವ ಬಸವ ಭವನ ಕೇವಲ ವೀರಶೈವರ ಭವನವಾಗದೆ, ತಾಲೂಕಿನ ಎಲ್ಲ ಸಮಸ್ತ ಜನರ ಸಂಕಷ್ಟಕ್ಕೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸುವ ಸರ್ವಧರ್ಮ ಕೇಂದ್ರವಾಗಬೇಕು. ಆ ಮೂಲಕ ಬಸವಣ್ಣನವರ ಜಾತ್ಯತೀತ ತತ್ವಕ್ಕೆ ಬೆಲೆ ನೀಡಬೇಕು ಎಂದು ಅವರು ತಿಳಿಸಿದರು.
ಶಾಸಕ ಸಾ.ರಾ. ಮಹೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವ ಭವನ ನಿರ್ಮಾಣಕ್ಕೆ ಸರ್ಕಾರದಿಂದ 15 ಗುಂಟೆ ಜಾಗ ಮಂಜೂರು ಮಾಡಿಸಿದ್ದು, ಈಗಾಗಲೇ ಶಾಸಕರ ನಿಧಿಯಿಂದ 15 ಲಕ್ಷ ಬಿಡುಗಡೆ ಮಾಡಲಾಗಿದೆ. ಇದರ ಜತೆಗೆ ನಾನು ವೈಯಕ್ತಿಕವಾಗಿ 35 ಲಕ್ಷ ಹಣ ನೀಡುತ್ತೇನೆ ಎಂದು ಭರವಸೆ ನೀಡಿದರಲ್ಲದೆ, ಸಮಾಜದವರು ಯಾವುದೇ ರಾಜಕೀಯ ಬೆರೆಸದೆ ಉತ್ತಮವಾದ ಭವನ ನಿರ್ಮಾಣ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಇದೇ ವೇಳೆ ತಾಲೂಕು ವೀರಶೈವ ನೌಕರರ ಸಂಘ ಉದ್ಘಾಟಿಸಿ ಸಮಾಜದ ಮತ್ತು ಇತರೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜಶ್ರೀಗಳು, ಕರ್ಪೂರವಳ್ಳಿ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು.
ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ನವನಗರ ಅರ್ಬನ್ ಕೋ-ಆಪರೇಟಿವ್ ಅಧ್ಯಕ್ಷ ಕೆ.ಎನ್. ಬಸಂತ್ ನಂಜಪ್ಪ, ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಬಸವರಾಜು, ತಾ. ವೀರಶೈವ ಮಹಸಭಾದ ಅಧ್ಯಕ್ಷ ಚಂದ್ರಶೇಖರ್, ಮಾತನಾಡಿದರು.
ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್, ತಾಪಂ ಅಧ್ಯಕ್ಷೆ ಶಶಿಕಲಾ ರಮೇಶ್, ಮಾಜಿ ಉಪಾಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ತಾ. ವೀರಶೈವ ನೌಕರರ ಸಂಘದ ಅಧ್ಯಕ್ಷ ಅರುಣ್ ಬಿ. ನರಗುಂದ್, ಪುರಸಭಾ ಮಾಜಿ ಅಧ್ಯಕ್ಷ ವೈ.ಆರ್. ಪ್ರಕಾಶ್, ನಾಗರತ್ನಮ್ಮ, ಸದಸ್ಯ ಕೆ.ಪಿ. ಪ್ರಭುಶಂಕರ್, ಮಾಜಿ ಸದಸ್ಯರಾದ ರಾಜಾ ಶ್ರೀಕಾಂತ್, ರವಿ, ತಾ. ವೀರಶೈವ ಮಹಾಸಭಾದ ಉಪಾಧ್ಯಕ್ಷ ಎಸ್ವಿಎಸ್ ಸುರೇಶ್, ಪ್ರಧಾನ ಕಾರ್ಯದರ್ಶಿ ಸಿ.ಈ. ತ್ರೀವೇಣಿ, ಸಹ ಕಾರ್ಯದರ್ಶಿ ಕೆ.ಬಿ. ರಘು, ಸತೀಶ್, ಖಜಾಂಚಿ, ನಗರ ಯುವ ಘಟಕದ ಅಧ್ಯಕ್ಷ ಡಿ.ಸಿ. ಮಂಜು, ಗ್ರಾಮಾಂತರ ಯುವ ಘಟಕದ ಅಧ್ಯಕ್ಷ ಎಲ್.ಪಿ. ರವಿಕುಮಾರ್, ವೀರಶೈವ ಮುಖಂಡರಾದ ವೈ.ಆರ್. ಪ್ರಕಾಶ್, ಸಿವಿ ಗುಡಿ ನಂಜುಂಡಸ್ವಾಮಿ ಇದ್ದರು.