ಬಸವ ಮಾಚಿದೇವರಿಗೆ ಅದ್ಧೂರಿ ಸ್ವಾಗತ
ಕಿತ್ತೂರು: ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ದೊಡ್ಡೇಗೌಡನ ಕೊಪ್ಪಲಿಗೆ ಗುರುವಂದನಾ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಚಿತ್ರದುರ್ಗ ಮಠದ ಬಸವ ಮಾಚಿದೇವರನ್ನು ಮಡಿವಾಳ ಸಂಘದ ಪದಾಧಿಕಾರಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತೆ ಕಿವಿಮಾತು ಹೇಳಿದ ಶ್ರೀಗಳು ಮಡಿವಾಳ ಸಮುದಾಯದವರು ಕಡಿಮೆ ಸಂಖ್ಯೆಯಲ್ಲಿದ್ದು, ಮಡಿವಾಳ ಪಂಗಡವನ್ನು ಪ.ಜಾತಿ ಮತ್ತು ಪ.ಪಂಗಡಕ್ಕೆ ಸೇರಿಸಲು ಪ್ರಯತ್ನ ನಡೆಸುತ್ತಿರುವುದಾಗಿ ತಿಳಿಸಿದರು. ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ರಾಮಚಂದ್ರಶೆಟ್ಟಿ, ಕಿತ್ತೂರು ಗ್ರಾಪಂ ಸದಸ್ಯರಾದ ನಾಗರಾಜ, ಅಶೋಕ, ಮಹೇಶ್, ಶ್ರೀನಿವಾಸ ಮತ್ತತಿರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾವೇರಿ ನದಿ ಮೂಲ ರಕ್ಷಿಸಲು ಆಗ್ರಹ
ಹುಣಸೂರು: ಕೊಡಗು ಹಾಗೂ ಮೈಸೂರು ಭಾಗದಲ್ಲಿ ಹರಿಯುವ ನದಿಗಳ ಜಲಾನಯನ ಪ್ರದೇಶಗಳನ್ನು ಹಾಗೂ ಅವುಗಳ ಜಲಮೂಲದ ನೆಲೆಗಳನ್ನು ರಕ್ಷಿಸಬೇಕು ಎಂದು ಗಿರಿಜನ ಕ್ರಿಯಾಕೂಟ ಮತ್ತು ರಾಜ್ಯ ಮೂಲ ನಿವಾಸಿ ಮತ್ತು ಅರಣ್ಯವಾಸಿ ಬುಡಕಟ್ಟುಗಳ ವೇದಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಕಾವೇರಿ ನದಿಯು ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿಗೆ ಜೀವನದಿ ಆಗಿದೆ. ಸುಮಾರು 8 ಕೋಟಿ ಜನ ಈ ನದಿಯನ್ನು ಆಶ್ರಯಿಸಿದ್ದಾರೆ. ಕೊಡಗಿನ ಇರ್ಪುವಿನಲ್ಲಿ ಜನಿಸಿ ಹಲವು ಪ್ರದೇಶಗಳನ್ನು ದಾಟಿ ಹರಿಯುವ ಕಾವೇರಿ ನದಿಗಾಗಲಿ ಅಥವಾ ಅದರ ಉಪ ನದಿಗಳಾದ ಹೇಮಾವತಿ, ಹಾರಂಗಿ, ಕಬಿನಿ, ಲಕ್ಷ್ಮಣತೀರ್ಥ ಮುಂತಾದ ನದಿಗಳಿಗೆ ಯಾವುದೇ ಅಡಚಣೆ ಉಂಟಾಗಬಾರದು. ಆದರೆ ನಂಜನಗೂಡಿಲ್ಲಿ ಕಪಿಲಾ ನದಿಗೆ ಕೊಳಚೆ ನೀರು ಮತ್ತು ಘನತ್ಯಾಜ್ಯ ಸೇರುತ್ತಿದೆ. ಆದರೂ ಅಲ್ಲಿನ ಪುರಸಭೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ ಎಂದು ವೇದಿಕೆಯ ಜೆ.ಪಿ. ರಾಜು ಮತ್ತು ಕೂಟದ ಎಸ್. ಶ್ರೀಕಾಂತ್ ದೂರಿದ್ದಾರೆ.
ಕೊಡಗಿನಿಂದ ಕೇರಳಕ್ಕೆ 4 ಪಥ ರಾಷ್ಟ್ರೀಯ ಹೆದ್ದಾರಿ ಮಾಡುವ ಉದ್ದೇಶದಿಂದ 50 ಸಾವಿರ ಮರಗಳನ್ನು ಕಾವೇರಿ ಮತ್ತು ಲಕ್ಷ್ಮಣತೀರ್ಥ ಜಲಾನಯನ ಪ್ರದೇಶದಲ್ಲಿ ಕಡಿಯಲಾಗುತ್ತಿದೆ. ಆದ್ದರಿಂದ ಕೂಡಲೆ ಸರ್ಕಾರ ತನ್ನ ಯೋಜನೆಗೆ ಪರ್ಯಾಯ ಮಾರ್ಗ ಅನುಸರಿಸಿ, ಕಾವೇರಿ ಉಗಮ ಸ್ಥಳವನ್ನು ಪವಿತ್ರ ಸ್ಥಳವಾಗಿ ಮಾಡಿ, ಅಲ್ಲಿನ ಜನ ಜೀವನ ಪದ್ಧತಿ ರಕ್ಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಕೆ.ಜೆ. ಜಾರ್ಜ್ ಅವರನ್ನು ಆಗ್ರಹಿಸಿದ್ದಾರೆ.