ಬೈಕ್- ಜೀಪ್ ಮುಖಾಮುಖಿ ಡಿಕ್ಕಿ: ತಂದೆ, ಮಗ ಸ್ಥಳದಲ್ಲೇ ಸಾವು
ಹುಣಸೂರು: ಬೈಕ್ ಮತ್ತು ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ತಂದೆ ಮತ್ತು ಮಗ ಮೃತಪಟ್ಟಿರುವ ಘಟನೆ ಹುಣಸೂರು-ನಾಗರಹೊಳೆ ಮುಖ್ಯರಸ್ತೆಯ ಬಿಬಿಸಿ ಕಾಲೋನಿ ಬಳಿ ಸೋಮವಾರ ಸಂಜೆ ಜರುಗಿದೆ. ತಾಲೂಕಿನ ಕಲ್ಲೂರಪ್ಪನ ಬೆಟ್ಟದ ಮಾದಹಳ್ಳಿ ಗ್ರಾಮದ ಶಂಕರಾಚಾರಿ (45) ಹಾಗೂ ಅವರ ಪುತ್ರ ಪಾಪಣ್ಣಚಾರಿ (23) ಮೃತಪಟ್ಟವರು. ತಾಲೂಕಿನ ನಾಗರಹೊಳೆ ಮುಖ್ಯ ರಸ್ತೆಯಲ್ಲಿ ಸ್ವಗ್ರಾಮದಿಂದ ಹುಣಸೂರಿಗೆ ಬರುತ್ತಿದ್ದ ಬೈಕ್ ಹಾಗೂ ಹುಣಸೂರಿನಿಂದ ಕೊಡಗಿನ ಕುಟ್ಟಕ್ಕೆ ಹೋಗುತ್ತಿದ್ದ ಜೀಪ್ಗೆ ಬಿಬಿಸಿ ಕಾಲೋನಿ ಬಳಿ ಇರುವ ಮಾರಮ್ಮನ ದೇವಾಲಯದ ತಿರುವಿನಲ್ಲಿ ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟ್ಟ ಗ್ರಾಮದ ಜೀಪ್ ಚಾಲಕ ಜೈಶಂಕರ ಎಂಬಾತನನ್ನು ಬಂಧಿಸಿ, ಜೀಪ್ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಐ ರಾಘವೇಂದ್ರಗೌಡ ತಿಳಿಸಿದರು.