'ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ'
ಪಿರಿಯಾಪಟ್ಟಣ: ಬದುಕಿನ ಸಾರ್ಥಕತೆಗೆ ಬೌದ್ಧಿಕ ಸಾಮರ್ಥ್ಯ ಮುಖ್ಯವಾಗಿದೆ ಎಂದು ಮೈಸೂರು ಮಾನಸ ಗಂಗೋತ್ರಿಯ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಕೆ.ಸಿ. ಬಸವರಾಜು ಹೇಳಿದರು.
ಪಟ್ಟಣದ ಡಿಪಿಬಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಶಿಕ್ಷಣ ಪಡೆದಲ್ಲಿ ದೇಶ ಅಭಿವೃದ್ದಿ ಹೊಂದಲು ಸಾಧ್ಯ. 2020ಕ್ಕೆ ಭಾರತ ಶ್ರೀಮಂತ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಬೇಕಾದರೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವತ್ತ ಹೆಚ್ಚು ಗಮನಹರಿಸಬೇಕು. ಪ್ರಸ್ತುತ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಶೇ.13 ರಷ್ಟಿದ್ದು, 2020ಕ್ಕೆ ಅದು ಶೇ.30ಕ್ಕೆ ಹೆಚ್ಚಾಗಬೇಕು. ಆಗ ಮಾತ್ರ ದೇಶದ ಅಭಿವೃದ್ಧಿಗಾಗಿ ಮಾನವ ಸಂಪನ್ಮೂಲ ದೊರೆಯುವಂತಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಸಂಪನ್ಮೂಲ ಕೇಂದ್ರದ ಕಾರ್ಯಕ್ರಮ ಸಂಯೋಜಕ ವರದಯ್ಯ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಟಿ.ಟಿ. ರಮೇಶ್, ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ನಾಗಶೆಟ್ಟಿ, ಉಪನ್ಯಾಸಕರಾದ ಎಂ. ಸೋಮಣ್ಣ, ವೃಷಭೇಂದ್ರಪ್ಪ, ಕೆ.ಕೆ. ಭವಾನಿ, ವಿನೋದ್ಕುಮಾರ್, ಅನಿತಾ, ಬಿ.ಎಂ. ಶಿವಸ್ವಾಮಿ, ಸತ್ಯಶೀಲಾ, ನೇತ್ರಾವತಿ, ವಸಂತ್ ಇದ್ದರು.