ಜಶ್ನೆ ಗೌಸ್ ಅಜಾಮ್ ಆಚರಣೆ
ಮೈಸೂರು: ಸರ್ಕಾರ್ ಮೆಹಬೂಬ್ ಸುಭಾನಿ ಫೌಂಡೇಶನ್, ಮಸೀದಿ ಅಜಾಮ್ ವ್ಯವಸ್ಥಾಪಕ ಸಮಿತಿ ಮತ್ತು ದಾವತ್ ಇಸ್ಲಾಂ ಜಂಟಿಯಾಗಿ ಗೌಸಿಯಾ ಮೆರವಣಿಗೆ ಮತ್ತು ಜಶ್ನೆ ಗೌಸ್ ಅಜಾಮ್ ಆಚರಿಸಿದರು.
ನ್ಯಾಯಾಧೀಶರಾದ ಸೈಯದ್ ಗಯಾಸುದ್ದೀನ್ ಷಾ ಖಾದ್ರಿ ಉದ್ಘಾಟಿಸಿದರು. ನಗರದ ಸರ್ಖಾಜಿ ಮೊಹಮ್ಮದ್ ಉಸ್ಮಾನ್ ಷರೀಫ್ ಅಧ್ಯಕ್ಷತೆ ವಹಿಸಿದ್ದರು. ಮೊಹಮ್ಮದ್ ಫಸೀವುಲ್ಲಾ ವಾರ್ಸಿ ಖುರಾನ್ ಷರೀಫ್ ಪಠಣೆ ಮಾಡಿದರು. ನಾಥ್ಖಾನ್ ಸೈಯದ್ ಫಾಜಿಲ್ ಅಶ್ರಫಿ ಪ್ರವಾದಿ ಮೊಹಮ್ಮದ್ ಶ್ಲೋಕ ಓದಿದರು. ಮಾಂಬಳ್ಳಿಯ ದಾರುಲ್ ಉಲೂಮ್ ಅಜೀಜಿಯಾ ಆಡಳಿತಾಧಿಕಾರಿ ಸೂಫಿ ಮೊಹಮ್ಮದ್ ಅನ್ವರ್ ಅಹಮದ್ ನಿಜಾಮಿ ಅಶ್ರಫಿ ದುವಾ ಓದಿದರು.
ನಂತರ ಗೌಸಿಯಾ ಮೆರವಣಿಗೆಯು ನಗರದ ವಿವಿಧ ತೆರಳಿತು. ಮೆರವಣಿಗೆಯಲ್ಲಿ ಇಸ್ಲಾಮಿಯ ಅಜಾಮ್ ಅರೇಬಿಕ್ ಕಾಲೇಜು ವಿದ್ಯಾರ್ಥಿಗಳು, ಇತರೆ ಅರೇಬಿಕ್ ಕಾಲೇಜು, ಸುನ್ನತ್ ಜಮಾತ್ ವಿದ್ಯಾರ್ಥಿಗಳು, ಮಸೀದಿ ಅಜಾಮ್ ವ್ಯವಸ್ಥಾಪಕ ಸಮಿತಿ ಪದಾಧಿಕಾರಿಗಳು ಸಂಘಟಕರು ಭಾಗವಹಿಸಿದ್ದರು. ನಂತರ ಮಸೀದಿ ಅಜಾಮ್ನಲ್ಲಿ ಜಶ್ನೆ ಗೌಸ್ ಅಜಾಮ್ ಕಾರ್ಯಕ್ರಮ ನಡೆಯಿತು. ತುಮಕೂರಿನ ಮೊಹಮ್ಮದ್ ನಫೀಜ್ ಅಹಮದ್ ಹಬೀಬಿ ಅಜ್ಮತ್ ಔಲಿಯಾ ಅಲ್ಲಾ ಜೀವನ ಚರಿತ್ರೆ ಕುರಿತು ಭಾಷಣ ಮಾಡಿದರು.
ರೈಲಿಗೆ ಸಿಕ್ಕಿ ಅಪರಿಚಿತ ವ್ಯಕ್ತಿ ಸಾವು
ಮೈಸೂರು: ಹನಕೆರೆ- ಮಂಡ್ಯ ರೈಲು ನಿಲ್ದಾಣಗಳ ನಡುವೆ 35 ವರ್ಷದ ಅಪರಿಚಿತ ವ್ಯಕ್ತಿ ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ. ಚಹರೆ- 5.6 ಅಡಿ ಎತ್ತರ, ದೃಢಕಾಯ, ಕಪ್ಪು ಮೈಬಣ್ಣ, ದುಂಡು ಮುಖ, ಕಪ್ಪು ಕೂದಲು ಇದೆ. ಕಿವಿ ಚುಚ್ಚಿರುತ್ತದೆ. ಎಡಗೈಯಲ್ಲಿ ಜಾನಕಿ, ಪದ್ದಿ, ರತ್ನಮ್ಮ ಎಂಬ ಹಸಿರು ಹಚ್ಚೆ ಹಾಗೂ ಬಲಗೈಯಲ್ಲಿ ಚಿತ್ರ, ಭೈರವ, ಚಿನ್ನ ಮತ್ತು ಹನುಮಂತ ಚಿತ್ರ ಇರುವ ಹಸಿರು ಹಚ್ಚೆ ಇದೆ. ಮೃತ ದೇಹವನ್ನು ಮಂಡ್ಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ವಾರಸುದಾರರಿದ್ದಲ್ಲಿ ದೂ. 0821- 2516579 ಸಂಪರ್ಕಿಸಲು ಮೈಸೂರು ರೇಲ್ವೆ ಠಾಣೆ ಪೊಲೀಸರು ಕೋರಿದ್ದಾರೆ.