ಡಿ ಗ್ರೂಪ್ ನೌಕರನ ನೇಮಕ; ಅಧ್ಯಕ್ಷ, ಇಒಗೆ ತರಾಟೆ
ತಾಲೂಕಿನ ಸಾಲಿಗ್ರಾಮದಲ್ಲಿ ತಾಪಂ ಅಧೀನದಲ್ಲಿರುವ ಪ್ರವಾಸಿ ಮಂದಿರಕ್ಕೆ ಡಿ. ಗ್ರೂಪ್ ನೌಕರನನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆಸುವಾಗ, ಅಧಿಕಾರಿಗಳು ತಾಪಂ ಸಭೆಯ ಗಮನಕ್ಕೆ ತಂದಿಲ್ಲ ಎಂದು ಸದಸ್ಯರೆಲ್ಲ ಒಕ್ಕೊರಲಿನಿಂದ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.
ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ಸೀತಾರಾಮು, ಲಕ್ಷ್ಮಿ ಕನಕರಾಜು, ಕೃಷ್ಣೇಗೌಡ, ಹೇಮಾವತಿ ಅಶೋಕ್ ಅವರು ಸಭೆಯ ಗಮನಕ್ಕೆ ತಾರದೆ, ನಿಯಮ ಬಾಹಿರವಾಗಿ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿರುವುದು ತಪ್ಪು, ಈ ಬಗ್ಗೆ ಅಧ್ಯಕ್ಷರು ಗಮನ ಹರಿಸಬೇಕಿತ್ತು ಎಂದರು.
ಸದಸ್ಯರ ತರಾಟೆಯಿಂದ ವಿಚಲಿತರಾದ ಕಾರ್ಯನಿರ್ವಹಣಾಧಿಕಾರಿ ಸಿದ್ದಲಿಂಗಮೂರ್ತಿ ಸಮಜಾಯಿಷಿ ನೀಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಸಾದಿಕ್ಖಾನ್ ಡಿ ಗ್ರೂಪ್ ನೌಕರರನ್ನು ನೇಮಕ ಮಾಡಿಕೊಳ್ಳುವಂತೆ ಶಾಸಕ ಸಾ.ರಾ. ಮಹೇಶ್ ಶಿಫಾರಸ್ಸು ಪತ್ರ ನೀಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದರಿಂದ ಅಸಮಾಧಾನಿತರಾದ ಸೀತಾರಾಮು ಶಾಸಕರ ಬಗ್ಗೆ ನಮಗೂ ಗೌರವವಿದ್ದು, ಅವರು ಶಿಫಾರಸ್ಸು ಮಾಡಿದವರನ್ನೇ ನೇಮಕ ಮಾಡಿಕೊಳ್ಳಿ. ಆದರೆ ಸಭೆಯ ಗಮನಕ್ಕೆ ತಾರದೆ ಇರುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಶಶಿಕಲಾ ರಮೇಶ್ ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವುದರ ಜತೆಗೆ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವಾಗ ಸಭೆಯ ಗಮನಕ್ಕೆ ಕಡ್ಡಾಯವಾಗಿ ತರಲಾಗುತ್ತದೆ ಎಂದು ಭರವಸೆ ನೀಡಿದರು.