ಪೌರಪ್ರಜ್ಞೆ ಮೆರೆದ ಪುಟಾಣಿಗಳು
ಕ.ಪ್ರ.ವಾರ್ತೆ ಮೈಸೂರು ಫೆ. 18
ಪೌರಪ್ರಜ್ಞೆಗಾಗಿ ಮಕ್ಕಳ ಚಳವಳಿ ಸಂಸ್ಥೆಯ (ಸಿಎಂಸಿಎ) ವಾರ್ಷಿಕ ದಿನಾಚರಣೆ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಮೈಸೂರು ಹಬ್ಬದಲ್ಲಿ ಶಾಲಾ ಮಕ್ಕಳು ಪೌರಪ್ರಜ್ಞೆ ಮೆರೆದರು.
ನಗರ ಪಾಲಿಕೆ ಸಹಯೋಗದಲ್ಲಿ ಏರ್ಪಡಿಸಿದ್ದ ಮೈಸೂರು ಹಬ್ಬವನ್ನು ಮೇಯರ್ ಎನ್.ಎಂ. ರಾಜೇಶ್ವರಿ ಉದ್ಘಾಟಿಸಿ ಮಾತನಾಡಿ, ಇಂಥ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸಮಾಜಕ್ಕೆ ಉಪಯುಕ್ತವಾದುದು. ಇದಕ್ಕೆ ಅಗತ್ಯ ನೆರವನ್ನು ಪಾಲಿಕೆ ವತಿಯಿಂದ ನೀಡಲಾಗುವುದು ಎಂದು ಹೇಳಿ, ಮಕ್ಕಳಿಗೆ ಶುಭ ಹಾರೈಸಿದರು.
ಪ್ರಾಸ್ತಾವಿಕ ಮಾತುಗಳಾಡಿದ ಸಂಯೋಜಕ ಪಿ.ವಿ. ರಾಮದಾಸ್, 2008ರಲ್ಲಿ 40 ಶಾಲೆಗಳಲ್ಲಿ ಆರಂಭವಾದ ಈ ಕಾರ್ಯಕ್ರಮವು ತನ್ನ ಚಟುವಟಿಕೆಗಳ ಮೂಲಕ ನಾಗರಿಕರ ಗಮನ ಸೆಳೆದಿದೆ. ಪ್ರಸಕ್ತ ಸಾಲಿನಲ್ಲಿ 64 ಶಾಲೆಗಳಿಗೆ ಕಾರ್ಯಕ್ರಮ ವಿಸ್ತರಿಸಲಾಗುವುದು ಎಂದರು.
ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಮುಖ್ಯ ಅತಿಥಿಯಾಗಿದ್ದರು. ಸಂಸ್ಥೆಯ ನಿರ್ದೇಶಕ ಡಾ, ಮಂಜುನಾಥ್ ಸದಾಶಿವ, ವಲಯ ಸಂಯೋಜಕ ಭಾರದ್ವಾಜ್, ಕಾರ್ಯಕ್ರಮ ಸಹಾಯಕರಾದ ನಿರ್ಮಲ್, ಸುನಿತಾ ಇದ್ದರು.
ವಿವಿಧ ಶಾಲೆಯ ಮಕ್ಕಳು ಪೌರರ ಕರ್ತವ್ಯಗಳು ಹಾಗೂ ಹಕ್ಕುಗಳನ್ನು ಕುರಿತಾಗಿ ಗೀತೆಗಳು, ನೃತ್ಯ, ಪ್ರಹಸನ, ಏಕಪಾತ್ರ ಮುಂತಾದ ಕಾರ್ಯಕ್ರಮಗಳ ಮೂಲಕ ಪೌರಪ್ರಜ್ಞೆ ಸಾರಿದರು.
ನಂತರ ನಡೆದ ಸಮಾರೋಪದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಸಂಸ್ಥಾಪಕ ಡಾ.ಆರ್. ಬಾಲಸುಬ್ರಹ್ಮಣ್ಯಂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದರು.