ಮೊಬೈಲ್, ಜಾಹೀರಾತು ನಿಷೇಧಿಸಿ
ಕ.ಪ್ರ.ವಾರ್ತೆ ಮೈಸೂರು ಫೆ. 18
ಯುವಜನತೆಗೆ ಮಾರಕವಾಗಿರುವ ಮೊಬೈಲ್ ಹಾಗೂ ಜಾಹೀರಾತುಗಳನ್ನು ಸರ್ಕಾರ ನಿಷೇಧಿಸಬೇಕು ಎಂದು ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಆಗ್ರಹಿಸಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ವೇದಿಕೆಯು ಮಂಗಳವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನ ಹಾಗೂ ಮಾಹಿತಿ ನೀಡುವ ತಾಂತ್ರಿಕತೆಯೂ ಇಂದು ವಿಜೃಂಭಿಸುತ್ತಿದ್ದು, ಅದಕ್ಕೆ ಮಾರು ಹೋಗಿರುವ ಯುವಜನಾಂಗ ಅನಾಹುತಕ್ಕೆ ಒಳಗಾಗುತ್ತಿದೆ. ಹೆಚ್ಚಾಗಿ ಮೊಬೈಲ್ಗಳ ಬಳಕೆಯಿಂದ ಅವರು ಅವಘಡಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೆ ಆಕರ್ಷಕ ಜಾಹೀರಾತು ಪ್ರಪಂಚಕ್ಕೆ ಮಾರು ಹೋಗಿ ದಾರಿ ತಪ್ಪುತ್ತಿದ್ದಾರೆ. ಆದ್ದರಿಂದ ಇವುಗಳನ್ನು ನಿಷೇಧಿಸಬೇಕು ಎಂದರು.
ಕೃಷಿ ಮೂಲ: ಜನಪದವಾಗಲೀ, ಸಾಮಾಜಿಕ ಸಂಬಂಧವಾಗಲಿ ಹುಟ್ಟಲು ಕೃಷಿಯೇ ಮೂಲ. ಗ್ರಾಮೀಣ ಭಾಗದಲ್ಲಿ ಇಂದಿಗೂ ಸಾಂಸ್ಕೃತಿಕ ಬದುಕು ಹೇರಳವಾಗಿದೆ. ಇಂದು ಕೈಗಾರೀಕರಣ, ಖಾಸಗೀಕರಣ ಹಾಗೂ ಉದಾರೀಕರಣ ಬಂದಿದ್ದರೂ ಕೃಷಿ ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದರು.
ಸಂಸ್ಕೃತಿ ಹಾಗೂ ಸಾಂಸ್ಕೃತಿಕತೆ ಇಲ್ಲದ ಬದುಕು ನಿರರ್ಥಕ. ಏನೇ ಸಂಶೋಧನೆಗಳನ್ನು ಮಾಡಿದರೂ ಹಿಂದಿನ ತಲೆಮಾರಿನ ಅರಿವು ಬೇಕೇ ಬೇಕು. ಸಂಶೋಧನಾ ವಿದ್ಯಾರ್ಥಿಗಳು ಕೃಷಿ ಕ್ಷೇತ್ರಕ್ಕೆ ಒತ್ತು ನೀಡಬೇಕು. ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅವರು ಆಶಿಸಿದರು.
ಶೋಧನ ನಡಿಗೆ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದ ರಂಗತಜ್ಞ ಶ್ರೀನಿವಾಸ ಜಿ. ಕಪ್ಪಣ್ಣ, ಸಂಶೋಧನೆಗಳು ಜನಪರವಾಗಿರಬೇಕು. ಕುವೆಂಪು ಅವರನ್ನು ಆರಾಧಿಸಿದರೆ ಸಾಲದು. ಅವರ ವಿಚಾರಧಾರೆಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸ ಹೆಚ್ಚಾಗಿ ನಡೆಯಬೇಕು. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದಾದರೂ ಭಾಷೆಯಲ್ಲಾಗಲಿ ಕುವೆಂಪು ಉತ್ಸವವನ್ನು ನಡೆಸಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಕನ್ನಡ ಬ್ಲಾಗ್ ಅನ್ನು ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಉದ್ಘಾಟಿಸಿದರು.
ಸಂಸ್ಥೆ ನಿರ್ದೇಶಕ ಪ್ರೊ. ನೀಲಗಿರಿ ತಳವಾರ್ ಅಧ್ಯಕ್ಷತೆ ವಹಿಸಿದ್ದರು. ಸಹಪ್ರಾಧ್ಯಾಪಕಿ ಡಾ. ಎಂ. ಲೋಲಾಕ್ಷಿ ಸ್ವಾಗತಿಸಿದರು. ನಂತರ ಪ್ರಾಧ್ಯಾಪಕ ಡಾ. ಪಿ. ಮಹದೇವ ಅವರ ಅಧ್ಯಕ್ಷತೆಯಲ್ಲಿ ಸಂಶೋಧಕರ ಕವಿಗೋಷ್ಠಿ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೀತಗಾಯನ, ಆಶು ಅಭಿನಯ, ನೃತ್ಯ ಏಕಪಾತ್ರಭಿನಯವನ್ನೂ ಹಾಗೂ ಕುವೆಂಪು ಅವರ ಗೀತೆಗಳ ಆಧಾರಿತ ಯಾರೂ ಅರಿಯದವರು ನಾಟಕವನ್ನೂ ವಿದ್ಯಾರ್ಥಿಗಳು ಅಭಿನಯಿಸಿದರು.
ಮೈಸೂರು ವಿವಿಯು 2016ರಲ್ಲಿ ಶತಮಾನೋತ್ಸವ ಆಚರಿಸಲಿದ್ದು, ಅಂಥ ಸಂದರ್ಭದಲ್ಲಿ ರಂಗತಜ್ಞರಾದ ಶ್ರೀನಿವಾಸ ಕಪ್ಪಣ್ಣಅವರ ಆಶಯದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುವೆಂಪು ಉತ್ಸವ ನಡೆಸಲು ಯೋಜನೆ ರೂಪಿಸಲಾಗುವುದು.
ಪ್ರೊ.ಕೆ.ಎಸ್. ರಂಗಪ್ಪ, ಮೈಸೂರು ವಿವಿ.