ಯಶಸ್ವಿ ಗ್ರೂಪ್ನಿಂದ ಸೌಹಾರ್ದ ಕೂಟ
ಮೈಸೂರು: ನಗರದ ದಿಗಂತ ಭವನದಲ್ಲಿ ಯಶಸ್ವಿ ಗ್ರೂಪ್ ಆಫ್ ಸೋಶಿಯಲ್ ವರ್ಕ್ ಏರ್ಪಡಿಸಿದ್ದ ಸೌಹಾರ್ದ ಕೂಟ ಸಮಾರಂಭವನ್ನು ನಗರಪಾಲಿಕೆ ಎಂ.ಕೆ. ಶಂಕರ್ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ವಿವಿಧ ಕಾಲೇಜು ವಿದ್ಯಾರ್ಥಿಗಳು ಸೇರಿ ನಡೆಸುತ್ತಿರುವ ಈ ಸಮಾಜ ಸೇವೆ ಕೆಲಸಗಳು ಮುಂದಿನ ಪೀಳಿಗೆಗೆ ಅನುಕೂಲವಾಗಲಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬಗ್ಗೆ ತಿಳಿವಳಿಕೆ ನೀಡಿ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂಥ ಕೆಲಸಗಳು ಹೆಚ್ಚಿನ ರೀತಿಯಲ್ಲಿ ನಡೆಯಲಿ ಎಂದು ಆಶಿಸಿದರು. ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಒಂದು ಸಂಘ ಸ್ಥಾಪಿಸಿ ಅದರಡಿಯಲ್ಲಿ ಗ್ರಾಮೀಣ ಮಕ್ಕಳಿಗೆ ಕಂಪ್ಯೂಟರ್ ಬಗ್ಗೆ ತಿಳಿವಳಿಕೆ, ಕಣ್ಣಿನ ಉಚಿತ ಪೊರೆ ಚಿಕಿತ್ಸೆ ಹಾಗೂ ವಿವಿಧ ಸಮಾಜ ಸೇವೆ ಮಾಡುತ್ತಿರುವುದಕ್ಕೆ ಶ್ಲಾಘಿಸಿದರು. ನಿವೃತ್ತ ಕೃಷಿ ಅಧಿಕಾರಿ ಎಂ. ನಂಜುಂಡಪ್ಪ, ಅನ್ನಪೂರ್ಣ ಚಾರಿಟಬಲ್ ಟ್ರಸ್ಟ್ ಎಂ.ಡಿ. ರೂಪಾ, ಜೆ. ಮಹೇಶ್ ಮಾತನಾಡಿ, ಈ ಸಂಘದ ಸಮಾಜ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ಅಧ್ಯಕ್ಷೆ ಸೌಜನ್ಯ ಹಾಗೂ ಉಪಾಧ್ಯಕ್ಷೆ ರಚನಾ ಮಾತನಾಡಿದರು. ಸುಸ್ಮಿತಾ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಸಿ. ಶಿವಕುಮಾರ್ ವಂದಿಸಿದರು. ಖಜಾಂಜಿ ಆರ್. ಶಿವಕುಮಾರ್ ಮಾಹಿತಿ ನೀಡಿದರು.