ಸಂಚಾರ ನಿಯಮ ಪಾಲಿಸಿ: ಜಾಗೃತಿ ಜಾಥಾ
ಮೈಸೂರು: ಸಂಚಾರ ನಿಯಮ ಪಾಲಿಸುವುದು, ಅಪಘಾತ ಸಂಭವಿಸಿದಾಗ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಸಂಬಂಧ ನಗರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಬೃಹತ್ ಜಾಗೃತಿ ಜಾಥಾದಲ್ಲಿ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಭಾರತೀಯ ಕಲಾ ವೇದಿಕೆ, ನಗರ ಸಂಚಾರ ಪೊಲೀಸ್ ಮತ್ತು ವಿಜಯನಗರ ರೋಟರಿ ಕ್ಲಬ್ ಸಂಯುಕ್ತವಾಗಿ ಆಯೋಜಿಸಿದ್ದ ಈ ಜಾಥಾಗೆ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಅವರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಚಾಲನೆ ನೀಡಿದರು.
ನಂತರ ಮಾತನಾಡಿದ ಡಾ. ಸಲೀಂ, ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದರೆ ಪೊಲೀಸ್ ಠಾಣೆ, ನ್ಯಾಯಾಲಯಕ್ಕೆ ಅಲೆಯಬೇಕಾಗುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಒಂದು ಜೀವ ಉಳಿಸುವ ವಿಚಾರದಲ್ಲಿ ಇಂಥ ಆಲೋಚನೆ ಸರಿಯಲ್ಲ. ಅಪಘಾತದಲ್ಲಿ ಗಾಯಗೊಂಡವರ ನೆರವಿಗೆ ಧಾವಿಸಬೇಕು ಎಂದು ಕರೆ ನೀಡಿದರು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾದ ಜಾಥಾವು ಗಾಂಧಿ ಚೌಕ, ಚಿಕ್ಕ ಗಡಿಯಾರ, ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ಅಂತ್ಯಗೊಂಡಿತು. ಪ್ರತಿ ವೃತ್ತದಲ್ಲಿ ಸಂಗೀತ ಕಾರ್ಯಕ್ರಮ, ಬೀದಿನಾಟಕ ಪ್ರದರ್ಶನ ನೀಡುವ ಮೂಲಕ ಜನರಲ್ಲಿ ಅರಿವು ಮೂಡಿಸಿದರು.
ಭಾರತೀಯ ಕಲಾ ವೇದಿಕೆಯ ರಾಜ್ಯಾಧ್ಯಕ್ಷ ಆರ್.ಎಂ. ಮಧು ದೀಕ್ಷಿತ್, ಉಪಾಧ್ಯಕ್ಷ ನಂಜುಂಡ ಆರಾಧ್ಯ, ಜಿಲ್ಲಾಧ್ಯಕ್ಷ ರಾಜು, ಖಜಾಂಚಿ ಹರೀಶ್, ವಿಜಯನಗರ ರೋಟರಿ ಕ್ಲಬ್ ಅಧ್ಯಕ್ಷ ಡಾ. ದಿಲೀಪ್ ಇದ್ದರು.