ಅಧ್ಯಯನದಲ್ಲಿ ಆಸಕ್ತಿ ಇರಲಿ: ಡಾ. ರವಿ
ಮೈಸೂರು: ಅಧ್ಯಯನದಲ್ಲಿ ಆಸಕ್ತಿ ಮೂಡಿಸಿಕೊಂಡು ಜ್ಞಾನರ್ಜನೆಯ ಕೃಷಿಯನ್ನು ಶ್ರಮ ಸಂಸ್ಕೃತಿಯ ಆಧಾರದ ಮೇಲೆ ಮುಂದುವರಿಸಿ ಎಂದು ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಡಾ. ಎಂ.ಆರ್. ರವಿ ಹೇಳಿದರು.
ಜ್ಞಾನಬುತ್ತಿ ಸಂಸ್ಥೆ ಆಯೋಜಿಸಿರುವ ಐಎಎಸ್ ಮತ್ತು ಕೆಎಎಸ್ ಪೂರ್ವಭಾವಿ ಪರೀಕ್ಷೆ ಹಾಗೂ ಇತರ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಶಿಬಿರದಲ್ಲಿ ವಿದ್ಯಾರ್ಥಿಗಳೊಂದಿಗೆ ಅವರು ಸಂವಾದ ನಡೆಸಿದರು.
ತ್ಯಾಗ, ಸೇವೆ, ಬದ್ಧತೆ ನಿಮ್ಮ ಬದುಕಿನ ಮಂತ್ರವಾಗಲಿ, ಸಮಾಜ ಜ್ಞಾನ, ಲೋಕಜ್ಞಾನ, ಸಾಮಾಜಿಕ ಕಾಳಜಿ, ನೊಂದವರ ಬಗ್ಗೆ ಪ್ರೀತಿ, ಕೆಲಸ ಮಾಡುವ ಮನೋಭಾವನೆಗಳನ್ನು ಬೆಳಸಿಕೊಳ್ಳಬೇಕೆ ಹೊರತು ಹಣ ಸಂಪಾದನೆಯನ್ನೇ ಗುರಿಯಾಗಿಸಿಕೊಳ್ಳಬೇಡಿ ಎಂದರು.
ಉಪ ವಿಭಾಗಾಧಿಕಾರಿ ಬಸವರಾಜು ಮಾತನಾಡಿ, ತಾವು ವ್ಯಾಸಂಗ ಮಾಡಿದ ರೀತಿ, ಪರೀಕ್ಷೆಗೆ ಮಾಡಿಕೊಂಡ ಸಿದ್ಧತೆ, ಏಕಾಗ್ರತೆ ಮತ್ತು ಗುಂಪು ಅಧ್ಯಯನದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಂವಾದದಲ್ಲಿ ಮಹಾರಾಜ ಕಾಲೇಜಿನ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕ ಆರ್.ಎನ್. ಪದ್ಮನಾಭ, ಸಂಸ್ಥೆಯ ಕಾರ್ಯದರ್ಶಿ ಬಾಲಕೃಷ್ಣ ಭಾಗವಹಿಸಿದ್ದರು.