ಟೀ ಮಾರುವ ವ್ಯಕ್ತಿ ನಾಳೆ ಪ್ರಧಾನಿ ಆಗಬಹುದು
ಟಿ. ನರಸೀಪುರ: ಟೀ ಮಾರುವ ವ್ಯಕ್ತಿಯೂ ಮುಂದೊಂದು ದಿನ ದೇಶವನ್ನಾಳುವ ಪ್ರಧಾನಿ ಆಗಬಹುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಸಿ. ರಮೇಶ್ ಹೇಳಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣ ವೃತ್ತದಲ್ಲಿ ಬುಧವಾರ ಬಿಜೆಪಿ ಯುವ ಮೋರ್ಚಾದಿಂದ ಹಮ್ಮಿಕೊಂಡಿದ್ದ ನಮೋ ಟೀ ಸ್ಟಾಲ್ನಲ್ಲಿ ಸಾರ್ವಜನಿಕರಿಗೆ ಉಚಿತ ಟೀ ವಿತರಿಸಿ ಮಾತನಾಡಿದ ಅವರು, ಟೀ ಮಾರುತ್ತಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸಾಮಾನ್ಯ ಜನರ ಮೆಚ್ಚುಗೆಯಾಗಿದ್ದರಿಂದ ದೇಶದ ಮುಂದಿನ ಪ್ರಧಾನಿ ಆಗಲಿದ್ದಾರೆ ಎಂದರು.
ಕಳೆದ 10 ವರ್ಷದಿಂದ ಕೇಂದ್ರದಲ್ಲಿ ಭ್ರಷ್ಟಾಚಾರ ನಡೆಸಿದ ಕಾಂಗ್ರೆಸ್ ಸಾಮಾನ್ಯ ಜನರನ್ನು ಮರೆತಿದೆ. ಆದರೆ ಬಿಜೆಪಿ ಗುರಿ ಸುಭದ್ರ ರಾಷ್ಟ್ರ ನಿರ್ಮಾಣ. ದೇಶವನ್ನು ಮುನ್ನಡೆಸುವ ಸಾಮರ್ಥ್ಯ ನರೇಂದ್ರ ಮೋದಿ ಅವರಿಗಿದೆ. ಆದ್ದರಿಂದ ತಾಲೂಕಿನ ಜನತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಬೇಕು ಎಂದು ಕೋರಿದರು.
ನಮೋ ಟೀ ಸ್ಟಾಲ್ಗೆ ಚಾಲನೆ ನೀಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಂ. ನಂದೀಶ, ಜಿಲ್ಲಾ ಉಪಾಧ್ಯಕ್ಷ ತೋಟದಪ್ಪ ಬಸವರಾಜು ಮಾತನಾಡಿದರು.
ತಾಪಂ ಸದಸ್ಯೆ ಜಯಲಕ್ಷ್ಮೀ ಕುಮಾರ್, ಅಕ್ಕಿ ಗಿರಣಿ ಮಾಲೀಕರ ಸಂಘಧ ಜಿಲ್ಲಾಧ್ಯಕ್ಷ ನಿರನ್ ಕೆ. ವಸಂತ್, ಬಿಜೆಪಿ ಕ್ಷೇತ್ರಾಧ್ಯಕ್ಷ ಕೆ.ಎಸ್. ಬಸವರಾಜು, ಜಿಲ್ಲಾ ಉಪಾಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ಯುವ ಮೋರ್ಚಾ ಅಧ್ಯಕ್ಷ ವಿಜಯ್ಕುಮಾರ್, ವರುಣ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶಿವಬಸಪ್ಪ, ಮಂಜುನಾಥ್, ವೆಂಕಟರಮಣಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಮೀನಾ, ಟೌನ್ ಅಧ್ಯಕ್ಷ ಎಸ್. ದಿಲೀಪ್, ವಕೀಲ ಪರಮೇಶ್ ಇದ್ದರು.