ಶಾಲೆ ಸುತ್ತಮುತ್ತ ಕೋತಿಗಳ ಹಾವಳಿ
ಮೈಸೂರು: ನಗರದ ಸರಸ್ವತಿಪುರಂ ಮಹಾಬೋಧಿ ಶಾಲೆಯ ಸುತ್ತಮುತ್ತ ಕೋತಿಗಳ ಹಾವಳಿ ವಿಪರೀತವಾಗಿದೆ ಎಂದು ಹಿರಿಯ ನಾಗರಿಕ ಜಿ.ಕೆ. ರಂಗಯ್ಯ ದೂರಿದ್ದಾರೆ. 13ನೇ ಮುಖ್ಯ ರಸ್ತೆಯ ಮಹಾಬೋಧಿ ಹಾಸ್ಟೆಲ್ ಕಡೆಯಿಂದ ಕೋತಿಗಳ ಹಿಂಡು ಕಳೆದ 15 ದಿನದಿಂದಲೂ ದಾಳಿ ಮಾಡುತ್ತಿವೆ. ಮನೆಗೆ ನುಗ್ಗಿ ಆಹಾರ ಪದಾರ್ಥಗಳನ್ನು ತಿನ್ನುವುದಲ್ಲದೇ ಅಸ್ತವ್ಯಸ್ತ ಮಾಡುತ್ತಿವೆ. ಹೀಗಾಗಿ ಹಿಂದೆ ಹಾಗೂ ಮುಂದಿನ ಬಾಗಿಲುಗಳನ್ನು ಬಂದ್ ಮಾಡಿಕೊಂಡೇ ಕಾಲ ಕಳೆಯಬೇಕಿದೆ. ನಗರ ಪಾಲಿಕೆಯವರು ತಕ್ಷಣ ಗಮನಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪಿಯುಸಿಇಟಿ
ಕ್ರ್ಯಾಷ್ ಕೋರ್ಸ್
ನವೋದಯ ಫೌಂಡೇಷನ್ ವತಿಯಿಂದ ಪಿಯುಸಿಇಟಿ-ಕ್ರ್ಯಾಷ್ ಕೋರ್ಸ್ಗೆ 30 ದಿನಗಳ ತರಬೇತಿ ಆಯೋಜಿಸಿದೆ. ಆಸಕ್ತರು ಫೆ.20ರಿಂದ ಚಾಮರಾಜಮೊಹಲ್ಲಾದ ಡಿ. ಸುಬ್ಬಯ್ಯ ರಸ್ತೆಯ 2ನೇ ಕ್ರಾಸ್ನ ನಂ. 195ರಲ್ಲಿ ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಸಂಸ್ಥೆಯ ಸಂಯೋಜಕ ಪ್ರಾಣೇಶ್ ಕೋರಿದ್ದಾರೆ. ವಿವರಗಳಿಗೆ ಮೊ. 9611012411 ಸಂಪರ್ಕಿಸಬಹುದು.
ನಾಳೆಯಿಂದ ಕಬಡಿ ಪಂದ್ಯಾವಳಿ
ಶ್ರೀ ಬಿಸಿಲು ಮಾರಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಫೆ. 21, 22ರಂದು ತೊಣಚಿಕೊಪ್ಪಲು ಬಡಾವಣೆಯಲ್ಲಿ ಕಬಡಿ ಪಂದ್ಯಾವಳಿ ಏರ್ಪಡಿಸಿದ್ದು, ಫೈನಲ್ ಪಂದ್ಯದಲ್ಲಿ ಗೆದ್ದ ತಂಡಕ್ಕೆ 15 ಸಾವಿರ, ಸೋತ ತಂಡಕ್ಕೆ 10 ಸಾವಿರ ಹಾಗೂ ತೃತೀಯ ಸ್ಥಾನ ಗಳಿಸಿದ ತಂಡಕ್ಕೆ 7 ಸಾವಿರ ನೀಡಲಾಗುತ್ತದೆ. ಮೊ. 99010 06969 ಸಂಪರ್ಕಿಸಬಹುದು.
ಬ್ರಾಹ್ಮಣ ಸಭಾಗೆ ನೇಮಕ
ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯ ಕಾರ್ಯಕಾರಿಣಿಯ 2014ನೇ ಸಾಲಿನ ರಾಜ್ಯ ಉಪಾಧ್ಯಕ್ಷರಾಗಿ ಡಾ.ವಿ. ಭಾನುಪ್ರಕಾಶ್ ಶರ್ಮ, ರಾಜ್ಯ ಸಂಘಟನಾ ಕಾರ್ಯದರ್ಶಿ ನಂ. ಶ್ರೀಕಂಠಕುಮಾರ್ ಮತ್ತು ವಲಯ ಉಪಾಧ್ಯಕ್ಷರಾಗಿ ಬಿ.ವಿ. ಶೇಷಾದ್ರಿ ಅವರನ್ನು ಮಹಾಸಭೆಯ ರಾಜ್ಯಾಧ್ಯಕ್ಷ ಡಾ.ಬಿ.ಎನ್. ವಿ. ಸುಬ್ರಹ್ಮಣ್ಯ ನೇಮಕ ಮಾಡಿದ್ದಾರೆ.
ನಾಳೆ ವಿಚಾರ
ಸಂಕಿರಣ
ಮೈಸೂರು: ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಫೆ. 21ರ ಬೆಳಗ್ಗೆ 9.30ಕ್ಕೆ ಕನ್ನಡ ಸ್ತ್ರೀವಾದಿ ಸಾಹಿತ್ಯ ಮತ್ತು ಚಳವಳಿ- ಸ್ಥಿತ್ಯಂತರಗಳು ಕುರಿತ ವಿಚಾರ ಸಂಕಿರಣ ಏರ್ಪಡಿಸಿದ್ದು, ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್ ಉದ್ಘಾಟಿಸುವರು. ಡಾ. ಕೃಷ್ಣಮೂರ್ತಿ ಹನೂರು, ಎಚ್.ಎನ್. ನಾಗರಾಜ್, ಎಂ. ಪುಟ್ಟಸ್ವಾಮಿ, ಪ್ರೊ.ಎಸ್.ಆರ್. ರಮೇಶ್ ಭಾಗವಹಿಸುವರು.
ನಾಳೆ ಕಾರ್ಯಾಗಾರ
ಎನ್ಎಂಎಸ್ ಮತ್ತು ಎಚ್ ಆರ್ಎಂ ಕನ್ಸಲ್ಟೆನ್ಸ್ ವತಿಯಿಂದ ಫೆ.20ರ ಸಂಜೆ 5.30ರಿಂದ ರಾತ್ರಿ 8.30 ರವರೆಗೆ ಕುವೆಂಪುನಗರದ ಗಾನಭಾರತಿಯಲ್ಲಿ ಕಾರ್ಯಾಗಾರ ನಡೆಯಲಿದೆ.
ತರಬೇತಿ
ಡಾ. ರೆಡ್ಡೀಸ್ ಫೌಂಡೇಶನ್ ವತಿಯಿಂದ ಎಂಟನೇ, ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸ್ ಫೇಲ್ ನಿರುದ್ಯೋಗಿಗಳಿಗೆ ಎಲೆಕ್ಟ್ರಿಕಲ್ಸ್, ಬೇಸಿಕ್ ಕಂಪ್ಯೂಟರ್, ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9738075554 ಸಂಪರ್ಕಿಸಬಹುದು.
ಕಾರ್ಯಾಗಾರ
ಮೈಸೂರು ವಿವಿ ವತಿಯಿಂದ ಫೆ.20 ಹಾಗೂ 21ರಂದು ಮಾನಸ ಗಂಗೋತ್ರಿಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಎದುರಿಸುವ ವಿಷಯ ಕುರಿತು ಕಾರ್ಯಾಗಾರ ನಡೆಯಲಿದೆ. ಫೆ.20ರ ಬೆಳಗ್ಗೆ 11ಕ್ಕೆ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಉದ್ಘಾಟಿಸುವರು. ಫೆ. 21ರ ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.