ಶಿಕ್ಷಕರಲ್ಲಿ ಸಮರ್ಪಣಾ ಭಾವ ಬೇಕು: ಸಚಿವ
ಮೈಸೂರು: ಶಿಕ್ಷಣಕ್ಕೆ ಮೂಲಸೌಕರ್ಯ ಹೆಚ್ಚಿದ್ದರೂ ಶಿಕ್ಷಕರಲ್ಲಿ ಸಮರ್ಪಣಾ ಭಾವನೆ ಕೊರತೆಯಿಂದಾಗಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಿಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ರೆಹಮಾನ್ಖಾನ್ ಬೇಸರ ವ್ಯಕ್ತಪಡಿಸಿದರು.
ನಗರದ ವಾಸು ಬಡಾವಣೆಯ ಜಯಲಕ್ಷ್ಮೀದೇವಿ ವಿದ್ಯಾಸಂಸ್ಥೆಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದವರಿಗೆ ಬದ್ಧತೆ ಇತ್ತು. ತಮ್ಮ ವೃತ್ತಿಯಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಿದ್ದರು. ಆದರೆ ಈಗ ಮೂಲಭೂತ ಸೌಲಭ್ಯ ಸಾಕಷ್ಟಿದೆ. ಆದರೂ ಶಿಕ್ಷಕರಲ್ಲಿ ಸಮರ್ಪಣಾ ಭಾವ ಕಡಿಮೆ ಇದೆ. ಆದ್ದರಿಂದ ಗುಣಮಟ್ಟದ ಶಿಕ್ಷಣ ದೊರಕುತ್ತಿಲ್ಲ ಎಂದರು. ಸಾಹಿತಿ ಜಯಲಕ್ಷ್ಮೀ ಅವರ ಪತಿ ನಂಜುಂಡಯ್ಯ ಅವರೊಬ್ಬ ಮೌಲ್ಯಾಧಾರಿತ ಮನುಷ್ಯ. ತಮ್ಮ ಜೀವನವನ್ನು ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟಿದ್ದರು. ವಿದ್ಯಾರ್ಥಿಗಳೂ ಗುರುಗಳಿಗೆ ಮತ್ತು ಹಿರಿಯರಿಗೆ ಗೌರವ ನೀಡಬೇಕು ಎಂದರು.
ಸಂಸದ ಎಚ್. ವಿಶ್ವನಾಥ್, ಶಾಸಕ ಜಿ.ಟಿ. ದೇವೇಗೌಡ, ಯುನೆಸ್ಕೋ ಮಾಜಿ ಸಲಹೆಗಾರ ಅಬ್ದುಲ್ ರೆಹಮಾನ್ ಕಮರುದ್ದೀನ್, ಜಯಲಕ್ಷ್ಮೀ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ವಿ.ಎನ್. ನಾಯಕ್, ಗೌರವ ಕಾರ್ಯದರ್ಶಿ ಬಸಪ್ಪಾಜಿ, ಉಪಾಧ್ಯಕ್ಷರಾದ ಪಂಕಜವಲ್ಲಿ, ಆಡಳಿತ ಮಂಡಳಿ ಸದಸ್ಯ ಜಯದೇವಪ್ಪ, ಜಿಪಂ ಸದಸ್ಯ ಬಸವಣ್ಣ ಇದ್ದರು.