ಶುಲ್ಕ ವಿನಾಯಿತಿ ರದ್ದು; ಪ್ರತಿಭಟನೆ
ಮೈಸೂರು: ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಬೇಕಿದ್ದ ಸರ್ಕಾರ ಪೂರ್ಣ ಶುಲ್ಕ ಕಟ್ಟುವಂತೆ ಸುತ್ತೋಲೆ ಹೊರಡಿಸಿರುವುದು ಸರಿಯಲ್ಲ ಎಂದು ಆರೋಪಿಸಿ ಭಾರತ ವಿದ್ಯಾರ್ಥಿ ಫೆಡರೇಷನ್, ಎಐಡಿಎಸ್ಒ ಮತ್ತು ಎಬಿವಿಪಿ ಪದಾಧಿಕಾರಿಗಳು ವಿದ್ಯಾರ್ಥಿಗಳೊಡಗೂಡಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮತ್ತು ರಾಮಸ್ವಾಮಿ ವೃತ್ತದ ಬಳಿ ಪ್ರತ್ಯೇಕವಾಗಿ ಪ್ರತಿಭಟಿಸಿದರು.
ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಬೇಕಿದ್ದ ಸರ್ಕಾರ ಪೂರ್ಣಶುಲ್ಕ ಪಾವತಿಸುವಂತೆ ಸುತ್ತೋಲೆ ಹೊರಡಿಸಿದೆ. ಶುಲ್ಕ ಮರುಪಾವತಿ ಸೌಲಭ್ಯ ಪಡೆಯಬೇಕಾದರೆ ವಿದ್ಯಾರ್ಥಿಗಳಿಗೆ ಅಂಕಗಳನ್ನು ಮಾನದಂಡ ಮಾಡಿರುವುದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿದರು.
ಸರ್ಕಾರದ ಆದೇಶದಂತೆ ಶುಲ್ಕ ವಿನಾಯಿತಿ ಪಡೆಯಲು ಹಿಂದಿನ ಪರೀಕ್ಷೆಗಳಲ್ಲಿ ಪ್ರವರ್ಗ 1 ಮತ್ತು ಅಂಧ ವಿದ್ಯಾರ್ಥಿಗಳು ಶೇ.50 ಅಂಕಗಳನ್ನು, ಪ್ರವರ್ಗ 2ಎ, 3ಎ ಮತ್ತು 3ಬಿ ವಿದ್ಯಾರ್ಥಿಗಳು ಶೇ. 60 ಅಂಕ ಪಡೆದಿರಬೇಕು. ಆದರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಅತಿ ಹೆಚ್ಚು ಪ್ರವೇಶ ಪಡೆಯುವ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಉಪನ್ಯಾಸಕರೆ ಇರುವುದಿಲ್ಲ. ಗುತ್ತಿಗೆ ಆಧಾರದ ಮೇಲೆ ಅತಿ ಕಡಿಮೆ ಸಂಬಳಕ್ಕೆ ದುಡಿಯುವ ಉಪನ್ಯಾಸಕರಿದ್ದಾರೆ. ಪ್ರಯೋಗಾಲಯ, ಗ್ರಂಥಾಲಯ ತರಗತಿ ಕೊರತೆ ಕಾಡುತ್ತಿದೆ. ಸರ್ಕಾರ ಮೊದಲು ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಮುಷ್ಕರಗಳಲ್ಲಿ ಭಾಗವಹಿಸಿದರೆ ಅಥವಾ ಇನ್ನ್ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಲ್ಲಿ ಅಂಥ ವಿದ್ಯಾರ್ಥಿಗಳು ಈ ಸೌಲಭ್ಯಕ್ಕೆ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸತಕ್ಕದ್ದು ಮತ್ತು ಮಂಜೂರಾತಿ ಆಗಿದ್ದಲ್ಲಿ ರದ್ದುಪಡಿಸತಕ್ಕದ್ದು ಎಂಬುದು ಸರ್ಕಾರದ ಆದೇಶವಾಗಿದೆ. ಈ ಆದೇಶದಲ್ಲಿರುವಂತೆ ವಿದ್ಯಾರ್ಥಿಗಳು ಇಷ್ಟೆ ಅಂಕಗಳನ್ನು ಪಡೆಯಬೇಕು ಎಂಬ ಷರತ್ತನ್ನು ತೆಗೆದು ಹಾಕಿ, ಮುಂದಿನ ತರಗತಿಯ ಪ್ರವೇಶಕ್ಕೆ ಅರ್ಹರಾದವರಿಗೆ ಶುಲ್ಕ ವಿನಾಯಿತಿ ದೊರಕಬೇಕು ಎಂದು ಅವರು ಒತ್ತಾಯಿಸಿದರು.
ಕೂಡಲೆ ರಾಜ್ಯ ಸರ್ಕಾರ ಇಂಥ ಅಪಾಯಕಾರಿ ಯೋಜನೆಗಳನ್ನು ಕೈಬಿಟ್ಟು ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಾಪಾಡಲು ಮುಂದಾಗಬೇಕು. ವಿದ್ಯಾರ್ಥಿಗಳ ಎಲ್ಲ ಹಂತದ ಶುಲ್ಕಗಳಿಗೆ ವಿನಾಯಿತಿ ನೀಡಿ ಮೂಲಸೌಲಭ್ಯ ನೀಡುವಂತೆ ಒತ್ತಾಯಿಸಿದರು.
ಭಾರತ ವಿದ್ಯಾರ್ಥಿ ಫೆಡರೇಷನ್ನ ಜಿಲ್ಲಾ ಕಾರ್ಯದರ್ಶಿ ಮಹೇಶ್ ಕುಮಾರ್, ಎಪಿವಿಪಿಯ ನಾಗೇಂದ್ರಸ್ವಾಮಿ, ರಾಕೇಶ್, ಶಿವಕುಮಾರ್, ಎಐಡಿಎಸ್ಒ ಜಿಲ್ಲಾ ಸಂಚಾಲಕ ಬಸವರಾಜು, ಎಐಡಿವೈಒ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್ ಪ್ರತಿಭಟನೆಗಳ ನೇತೃತ್ವ ವಹಿಸಿದ್ದರು.