ಶ್ರೀಕಂಠನ್ಗೆ ಸಂಗೀತ ವಿವಿ ಶ್ರದ್ಧಾಂಜಲಿ
ಮೈಸೂರು: ಸಂಗೀತ ವಿದ್ವಾಂಸ, ಪದ್ಮಭೂಷಣ ದಿ. ಆರ್.ಕೆ. ಶ್ರೀಕಂಠನ್ ಅವರ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ, ಗೌರವ ಸಲ್ಲಿಸಲಾಯಿತು.
ಡಾ.ಆರ್.ಎನ್. ಶ್ರೀಲತಾ ಮಾತನಾಡಿ, ಶ್ರೀಕಂಠನ್ ಅವರನ್ನು ಬಾಲ್ಯದಿಂದಲೂ ಬಲ್ಲವಳಾಗಿದ್ದೇನೆ. ಮೈಸೂರಿನಲ್ಲಿ ಸಂಗೀತ ಕಚೇರಿ ನೀಡಲು ಆಗಮಿಸಿದಾಗೆಲ್ಲ ನಮ್ಮ ಮನೆಗೆ ಬರುತ್ತಿದ್ದರು. ರುದ್ರಪಟ್ಟಣಂ ಸಹೋದರರಾದ ನನ್ನ ತಂದೆ ನಾರಾಯಣಸ್ವಾಮಿ ಸೇರಿದಂತೆ ವೆಂಕಟರಾಮಶಾಸ್ತ್ರೀ, ಆರ್.ಕೆ. ಶ್ರೀಕಂಠನ್ ಮತ್ತು ರಾಮನಾಥನ್ ಅವರು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದರು ಎಂದು ನೆನೆದರು.
ಪ್ರಭಾರ ಕುಲಪತಿ ಡಾ.ಎಂ. ಬಸವಣ್ಣ ಮಾತನಾಡಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು, ಡಾ.ಆರ್.ಕೆ. ಶ್ರೀಕಂಠನ್ ಅವರ ನಿಧನವು ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ವಿವಿಯ ಪರೀಕ್ಷಾಂಗ ಕುಲಸಚಿವ ಡಾ.ಎಂ.ಎಸ್. ಶೇಖರ್, ಹಿರಿಯ ಪಿಟೀಲು ವಾದಕ ಎಚ್.ಕೆ. ನರಸಿಂಹಮೂರ್ತಿ, ಅಂತಿಮ ಪದವಿ ತರಗತಿಯ ವಿದ್ಯಾರ್ಥಿ ಆರ್. ರಘು ಮಾತನಾಡಿದರು. ಸಭೆಯಲ್ಲಿ ವಿವಿಯ ಎಲ್ಲ ವಿಭಾಗಗಳ ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.