ಕುವೆಂಪು ಪ್ರತಿಮೆಗೆ ಉದ್ಘಾಟನೆ ಭಾಗ್ಯ
ಮಾ. ವೆಂಕಟೇಶ್
ಮೈಸೂರು: ಕಳೆದ ಹಲವು ದಿನಗಳಿಂದ ಉದ್ಘಾಟನೆಗೊಳ್ಳದೆ ನೆನೆಗುದಿಗೆ ಬಿದಿದ್ದ ರಾಷ್ಟ್ರಕವಿ ಕುವೆಂಪು ಪ್ರತಿಮೆ ಅನಾವರಣಕ್ಕೆ ಇದೀಗ ಕಾಲ ಕೂಡಿ ಬಂದಿದೆ.
ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಕುವೆಂಪು ನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಉದ್ಯಾನವನದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಮೆ ಸ್ಥಾಪನೆಗೆ 2009ರಲ್ಲಿ ಅಂದಿನ ಮೇಯರ್ ಪುರುಷೋತ್ತಮ್ ಅನುಮೋದನೆ ನೀಡಿದ್ದರು. 2010ರಲ್ಲಿ ಬಂದ ಮೇಯರ್ ಸಂದೇಶ್ ಸ್ವಾಮಿ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಗುದ್ದಲಿಪೂಜೆ ನಡೆಸಿದ್ದರು. ಇಲ್ಲೀವರೆಗೆ ಒಟ್ಟು 5 ಮಂದಿ ಮೇಯರ್ಗಳು ಅಧಿಕಾರ ನಡೆಸಿ ಹೋಗಿದ್ದರೂ ಯೋಜನೆ ಮಾತ್ರ ಪೂರ್ಣವಾಗದಿರುವುದಕ್ಕೆ ನಾಗರಿಕರಿಂದ ಆಕ್ಷೇಪಗಳು ಕೇಳಿಬಂದಿತ್ತು.
ಈ ಉದ್ಯಾನವನ್ನು ಸುಂದರ ವನವನ್ನಾಗಿ ಅಲ್ಲದೆ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ತಾಣ ಮಾಡಬೇಕೆಂದು ಬಯಸಿದ್ದ ಈ ವಾರ್ಡ್ನ ನಗರ ಪಾಲಿಕೆ ಸದಸ್ಯ ಕೆ.ವಿ. ಮಲ್ಲೇಶ್ ಅವರು, ಕುವೆಂಪು ಜ್ಞಾನ ತಾಣ ಮಾಡುವ ಕಾಳಜಿ ವಹಿಸಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಳಿ ಅಲೆದರೂ ಕಾಮಗಾರಿ ವಿಳಂಬ ಆಗುತ್ತಿರುವ ಬಗ್ಗೆ ಹಲವಾರು ಬಾರಿ ನೋವು ತೋಡಿಕೊಂಡಿದ್ದರು. ಆದರೂ ಛಲ ಬಿಡದೆ ತ್ರಿವಿಕ್ರಮನಂತೆ ಹೋರಾಟ ನಡೆಸಿದ ಫಲವಾಗಿ ಈ ಯೋಜನೆ ಅಂತಿಮ ಘಟ್ಟಕ್ಕೆ ತಲುಪಿದೆ. ಈ ಆವರಣದಲ್ಲಿ ನಿರ್ಮಿಸಿರುವ ಗ್ರಂಥಾಲಯ ಕಟ್ಟಡದ ಒಳ ವಿನ್ಯಾಸ ಕಾಮಗಾರಿ ಪೂರ್ಣವಾಗಿಲ್ಲ ಹಾಗೂ ಅದಕ್ಕೆ ಅಗತ್ಯ ಪೀಠೋಪಕರಣಗಳ ಖರೀದಿ ನಡೆಯಬೇಕಿದೆ. ಒಟ್ಟಾರೆ ಇನ್ನೂ 10- 15 ಲಕ್ಷ ಕೆಲಸ ಬಾಕಿ ಉಳಿದಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 25 ಲಕ್ಷ ಹಾಗೂ ಮೈಸೂರು ನಗರ ಪಾಲಿಕೆ 50 ಲಕ್ಷ ವೆಚ್ಚ ಮಾಡಿ ಈ ಯೋಜನೆ ರೂಪಿಸಿದೆ. ಎಂಡಿಎ ವತಿಯಿಂದ ವಿಧಾನ ಪರಿಷತ್ ಸದಸ್ಯರಾದ ಸಿ.ಎಚ್. ವಿಜಯಶಂಕರ್ 10 ಲಕ್ಷ, ಸಂದೇಶ್ ನಾಗರಾಜ್ 5 ಲಕ್ಷ ಹಾಗೂ ಸಂಸದ ಎಚ್.ವಿಶ್ವನಾಥ್ 3 ಲಕ್ಷ, ಸಚಿವರಾಗಿದ್ದ ಎಸ್.ಎ. ರಾಮದಾಸ್ 4 ಲಕ್ಷ ನೀಡಿದ್ದಾರೆ.
ಸುಮಾರು 9 ಅಡಿ ಎತ್ತರದ ಕುವೆಂಪು ಅವರ ಕಂಚಿನ ಪ್ರತಿಮೆಯನ್ನು 7.5 ಲಕ್ಷ ವೆಚ್ಚದಲ್ಲಿ ಕಲಾವಿದೆ ಪ್ರಮೋದಿನಿ ದೇಶಪಾಂಡೆ ನಿರ್ಮಿಸಿದ್ದಾರೆ. ಪ್ರತಿಮೆ ಸಿದ್ಧವಾದರೂ, ಗೋಪುರ ನಿರ್ಮಾಣವಾದರೂ ಅದರ ಉದ್ಘಾಟನಾ ಕಾರ್ಯಕ್ರಮವು ವಿಳಂಬವಾದದು ಮತ್ತೊಂದು ಸಂಗತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಿನಾಂಕ ಸಿಗದೆ 2 ಬಾರಿ ಮುಂದೂಡಲಾಯಿತು. ಆದರೂ ಅಂತೂ ಇಂತೂ ಫೆ. 23ರಂದು ವಿಶ್ವಮಾನವ ಸಂದೇಶ ಸಾರಿದ ಯುಗದ ಕವಿಯ ಪ್ರತಿಮೆ ಅನಾವರಣ ಭಾಗ್ಯ ಕಂಡಿರುವುದು ಕುವೆಂಪು ಅವರ ಶಿಷ್ಯರಿಗೂ, ಅಭಿಮಾನಿಗಳಿಗೂ ಹಾಗೂ ಸಾಹಿತಿಗಳಿಗೂ ಸಂತಸ ತಂದಿದೆ.
ಚಾಲನೆ: ಅಂದು ಸಂಜೆ 4ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಮೆ ಅನಾವರಣಗೊಳಿಸುವರು. ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಕುವೆಂಪು ಜ್ಞಾನತಾಣ ಕಟ್ಟಡ ಉದ್ಘಾಟಿಸುವರು. ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ನವೀಕೃತ ವಿಶ್ವಮಾನವ ಉದ್ಯಾನವನ ಉದ್ಘಾಟಿಸುವರು. ಸಚಿವರಾದ ಡಾ.ಎಚ್.ಸಿ ಮಹದೇವಪ್ಪ, ಎಚ್.ಎಸ್. ಮಹದೇವ ಪ್ರಸಾದ್, ಮೇಯರ್ ಎನ್.ಎಂ. ರಾಜೇಶ್ವರಿ ಅತಿಥಿಯಾಗಿ ಭಾಗವಹಿಸುವರು. ಶಾಸಕ ಎಂ.ಕೆ. ಸೋಮಶೇಖರ್ ಅಧ್ಯಕ್ಷತೆ ವಹಿಸಿವರು. ಈ ಸಂದರ್ಭದಲ್ಲಿ ಕುವೆಂಪು ಅವರ ಪುತ್ರಿ ತಾರಣಿ ಚಿದಾನಂದಗೌಡ ಹಾಗೂ ಅಳಿಯ ಡಾ. ಚಿದಾನಂದಗೌಡ ಅವರನ್ನು ಸನ್ಮಾನಿಸಲಾಗುವುದು.
ಕುವೆಂಪು ಜ್ಞಾನ ತಾಣವನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ತಾಣವನ್ನಾಗಿಸುವಲ್ಲಿ ಜಿಲ್ಲಾಡಳಿತ ಸಹಕಾರ ನೀಡಬೇಕು. ಕುಕ್ಕರಹಳ್ಳಿ ಕೆರೆ ವೃತ್ತದಿಂದ ಆಂದೋಲನ ವೃತ್ತದವರೆಗೂ ಇರುವ ಮಾರ್ಗ ಮಧ್ಯದ ಜಾಗದಲ್ಲಿ ವಿಶ್ವಮಾನವ ಸಂದೇಶಗಳ ಫಲಕಗಳನ್ನು ಅಳವಡಿಸಿ ಆ ಮೂಲಕ ಯುವಪೀಳಿಗೆಗೆ ಮಾರ್ಗದರ್ಶನ ನೀಡುವ ಕೆಲಸಕ್ಕೆ ಮುಂದಾಗಬೇಕು.
ಕೆ.ವಿ. ಮಲ್ಲೇಶ್, ನಗರಪಾಲಿಕೆ ಆಡಳಿತ ಪಕ್ಷದ ನಾಯಕ ಹಾಗೂ 18ನೇ ವಾರ್ಡ್ ಸದಸ್ಯ.
ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆ ಈ ಬಡಾವಣೆಯಲ್ಲಿ ಯಾವಾಗಲೋ ನಿರ್ಮಾಣವಾಗಬೇಕಿತ್ತು. ಆದರೆ ಆನೇಕ ಕಾರಣಗಳಿಂದ ತಡವಾದರೂ ಇದೀಗ ಅನಾವರಣಗೊಳ್ಳುತ್ತಿರುವುದು ಸಂತಸ ತಂದಿದೆ.
ಡಾ. ಪ್ರಭುಶಂಕರ, ಹಿರಿಯ ಸಾಹಿತಿ, ಕುವೆಂಪು ಶಿಷ್ಯರು.
ಭರತ ಖಂಡದ ಶ್ರೇಷ್ಠಕವಿಗಳಲ್ಲಿ ಕುವೆಂಪು ಸಹ ಒಬ್ಬರು. ಅಂಥ ಮಹಾನ್ ಕವಿಯನ್ನು ಎಷ್ಟೋ ಮಂದಿ ನೋಡಿಲ್ಲ. ಆದ್ದರಿಂದ ಇಂಥ ಪ್ರತಿಮೆ ಸ್ಥಾಪನೆ ಅವಶ್ಯಕ. ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಿಗೆ ಕವಿಯ ವಿಶ್ವಮಾನವ ಸಂದೇಶಗಳನ್ನು ತಿಳಿಸಬೇಕಾಗಿರುವುದು ಅನಿವಾರ್ಯ.
ಡಾ.ಎಚ್.ಜೆ. ಲಕ್ಕಪ್ಪಗೌಡ, ಜನಪದ ವಿದ್ವಾಂಸರು ಹಾಗೂ ವಿಶ್ರಾಂತ ಕುಲಪತಿ.